ಮಸೀದಿಯಲ್ಲಿ ಆಝಾನ್ ನೀಡಬಾರದು ಎನ್ನುವ ದಿಲ್ಲಿ ಪೊಲೀಸರು : ವೀಡಿಯೊ

Update: 2020-04-24 00:38 GMT

ಹೊಸದಿಲ್ಲಿ, ಎ. 24 : ಕೊರೋನ ಸಾಂಕ್ರಾಮಿಕ ತಡೆಯಲು ಮಸೀದಿಗಳ ನಮಾಝ್ ಸಹಿತ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಆರಾಧನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಿರುವ ನಡುವೆಯೇ ದಿಲ್ಲಿಯಲ್ಲಿ ಮಸೀದಿಗಳಲ್ಲಿ ಆಝಾನ್ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಸಿಬ್ಬಂದಿಯೇ ಹೇಳುತ್ತಿರುವ ವೀಡಿಯೊ ಒಂದು ವೈರಲ್ ಆಗಿದೆ.

ಮಸೀದಿಗಳಲ್ಲಿ ದಿನದ ಐದು ಹೊತ್ತು ನಮಾಝ್ ಸಮಯ ಆಗಿದ್ದನ್ನು ತಿಳಿಸಲು ಆಝಾನ್ ಕರೆ ನೀಡಲಾಗುತ್ತದೆ. ಇದಕ್ಕೆ ಎಲ್ಲಿಯೂ ಸರಕಾರ ನಿರ್ಬಂಧ ವಿಧಿಸಿಲ್ಲ. ಮಸೀದಿ ಸಿಬ್ಬಂದಿ ಆಝಾನ್ ನೀಡಿ ಬಳಿಕ ಮಸೀದಿಯ ಧರ್ಮಗುರುಗಳು ಮತ್ತು ಸಿಬ್ಬಂದಿಗಳು ಮಾತ್ರ ಮಸೀದಿಯಲ್ಲಿ ನಮಾಝ್ ನಿರ್ವಹಿಸಬಹುದು. ಸಾರ್ವಜನಿಕರು ಮಸೀದಿಗೆ ನಮಾಝ್ ಗೆ ಬರುವಂತಿಲ್ಲ ಎಂಬುದು ಈಗ ದೇಶಾದ್ಯಂತ ಚಾಲ್ತಿಯಲ್ಲಿರುವ ಆದೇಶ.

ಆದರೆ ದಿಲ್ಲಿಯ ಪ್ರೇಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿಲ್ಲಿ ಪೊಲೀಸರೇ ಬಂದು ಎಲ್ಜಿ ( ದಿಲ್ಲಿಯ  ಲೆಫ್ಟಿನೆಂಟ್ ಗವರ್ನರ್ ) ಅವರು ಆಝಾನ್ ನೀಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಅಲ್ಲಿನ ನಿವಾಸಿಗಳಿಗೆ ಹೇಳುತ್ತಿರುವ ವೀಡಿಯೊ ಒಂದನ್ನು ವೆಬ್ ಪತ್ರಿಕೆ ಮಿಲ್ಲಿ ಗ್ಯಾಝೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.

ಆ ವೀಡಿಯೊದಲ್ಲಿ ಪೊಲೀಸ್ ಸಿಬ್ಬಂದಿಯಂತೆ ಕಾಣುತ್ತಿರುವವರು ಸ್ಪಷ್ಟವಾಗಿ ಎಲ್ಜಿ ಅವರು ಆಝಾನ್ ನೀಡುವಂತಿಲ್ಲ ಎಂದು ಆದೇಶಿಸಿದ್ದಾರೆ ಎಂದು ಹೇಳುತ್ತಿರುವ ದೃಶ್ಯಗಳಿವೆ. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಅಲ್ಲಿನ ನಿವಾಸಿ ಮಹಿಳೆಯರು " ಅಂತಹ ಯಾವುದೇ ಆದೇಶ ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಮಸೀದಿಯಲ್ಲಿ ಐದು ಮಂದಿಗಿಂತ ಹೆಚ್ಚು ಜನ ಹೋಗಿ ನಮಾಝ್ ಮಾಡುವಂತಿಲ್ಲ ಎಂಬ ಆದೇಶ ಮಾತ್ರ ಇದೆ. ಆಝಾನ್ ನೀಡಬಾರದು ಎಂದು ಎಲ್ಜಿ ಅವ್ರು ಹೇಳಿದ್ದರೆ ಆ ಆದೇಶದ ಪ್ರತಿಯನ್ನು ನಮಗೆ ತೋರಿಸಿ" ಎಂದು ಪೋಲೀಸರ ಬಳಿ ಕೇಳುತ್ತಿದ್ದಾರೆ. ಆದರೆ ಅದಕ್ಕೆ ಸರಿಯಾಗಿ ಉತ್ತರಿಸದ ಪೊಲೀಸರು " ನಮ್ಮ ಜೊತೆ ಚರ್ಚೆಗೆ ಬರಬೇಡಿ,  ಆದೇಶ ಬೇಕಾದರೆ ಠಾಣೆಗೆ ಬಂದು ನೋಡಿ, ಆದರೆ ಆಝಾನ್ ನೀಡುವಂತಿಲ್ಲ " ಎಂದು ಮತ್ತೆ ಮತ್ತೆ ಹೇಳುತ್ತಾರೆ.

ಮಿಲ್ಲಿ ಗ್ಯಾಝೆಟ್ ನ ಮಾಜಿ ಪ್ರಧಾನ ಸಂಪಾದಕ ಝಫ್ರುಲ್ ಇಸ್ಲಾಂ ಖಾನ್ ಹಾಲಿ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದಾರೆ. ಆಯೋಗವು ಈ ಬಗ್ಗೆ ದಿಲ್ಲಿ ಪೊಲೀಸರಲ್ಲಿ ವಿವರಣೆ ಕೇಳಿ ಪತ್ರ ಬರೆದಿದ್ದು ಈವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಮಿಲ್ಲಿ ಗ್ಯಾಝೆಟ್ ಟ್ವೀಟ್ ಮಾಡಿದೆ. ದಿಲ್ಲಿ ಇತರ ಕೆಲವು ಪ್ರದೇಶಗಳು ಹಾಗು ದಿಲ್ಲಿಯ ಹೊರಗಿನ ಇತರ ಕೆಲವೆಡೆಗಳಿಂದಲೂ ಈ ಕುರಿತು ದೂರುಗಳು ಬಂದಿವೆ. ಸಾಮಾನ್ಯವಾಗಿ ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಹೀಗೆ ನಡೆಯುತ್ತಿದೆ ಎಂದು ಮಿಲ್ಲಿ ಗ್ಯಾಝೆಟ್  ಇನ್ನೊಂದು ಟ್ವೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News