ಆರೋಗ್ಯ ಕಾರ್ಯಕರ್ತರ ಸಮಸ್ಯೆ, ಭ್ರಷ್ಟಾಚಾರದ ಬಗ್ಗೆ ವರದಿ: ಸುದ್ದಿ ಜಾಲತಾಣ ಸ್ಥಾಪಕನ ಬಂಧನ

Update: 2020-04-24 14:41 GMT

ಕೊಯಮತ್ತೂರು,ಎ.24: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೇ ಸರಕಾರದ ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಉದ್ಯೋಗಿಗಳಿಂದ ಭ್ರಷ್ಟಾಚಾರ ಕುರಿತು ವರದಿಗಳನ್ನು ಪ್ರಕಟಿಸಿದ್ದ ಕೊಯಮತ್ತೂರಿನ ಸುದ್ದಿ ಜಾಲತಾಣ ‘ಸಿಂಪ್ಲಿ ಸಿಟಿ’ಯ ಸ್ಥಾಪಕ ಆ್ಯಂಡ್ರೂ ಸ್ಯಾಮ್ ರಾಜಾ ಪಾಂಡಿಯನ್ ಅವರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

  ಪಾಂಡಿಯನ್ ವಿರುದ್ಧ ದೂರನ್ನು ದಾಖಲಿಸಿರುವ ಕೊಯಿಮತ್ತೂರು ಮಹಾನಗರ ಪಾಲಿಕೆಯ ಅಧಿಕಾರಿ, ಜಾಲತಾಣವು ಪ್ರಕಟಿಸಿರುವ ವರದಿಗಳು ಸುಳ್ಳಾಗಿದ್ದು, ತಮಿಳುನಾಡು ಸರಕಾರದ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿಯ ಆರೋಗ್ಯ ಕಾರ್ಯಕರ್ತರು ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ ಎಂದು ಒಂದು ವರದಿಯು ಹೇಳಿದ್ದರೆ,ಪಿಡಿಎಸ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಡೆಸುವ ಮೂಲಕ ಬಡವರಿಗಾಗಿ ಮೀಸಲಾಗಿರುವ ಪರಿಹಾರ ನಿಧಿಯನ್ನು ಸರಕಾರಿ ಅಧಿಕಾರಿಗಳು ಜೇಬಿಗಿಳಿಸುತ್ತಿದ್ದಾರೆ ಎಂದು ಇನ್ನೊಂದು ವರದಿಯಲ್ಲಿ ಹೇಳಲಾಗಿದೆ. ಇವೆರಡೂ ವರದಿಗಳು ಆರೋಗ್ಯ ಕಾರ್ಯಕರ್ತರು ಮತ್ತು ಪಿಡಿಎಸ್ ಉದ್ಯೋಗಿಗಳು ಸರಕಾರದ ವಿರುದ್ಧ ತಿರುಗಿ ಬೀಳಲು ಪ್ರಚೋದಿಸುತ್ತಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪಾಂಡಿಯನ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಪತ್ರಕರ್ತರೋರ್ವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News