ಧ್ವನಿ ನಿಲ್ಲಿಸಿದ ಮಲೆನಾಡಿನ ವಿಶಿಷ್ಟ ಹೋರಾಟಗಾರ

Update: 2020-04-25 12:14 GMT

ಎ.25: ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಬಜರಂಗದಳಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಸಂಘಟನಾ ಚತುರತೆಯಿಂದ ಭದ್ರ ಬುನಾದಿ ಹಾಕಿಕೊಟ್ಟಿದ್ದಲ್ಲದೇ ದತ್ತಪೀಠದ ಹೋರಾಟವನ್ನು ಮುನ್ನೆಲೆಗೆ ತಂದು ಆ ಮೂಲಕವೇ ಇಡೀ ಜಿಲ್ಲೆಯಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಕಾರಣವಾಗಿದ್ದ ಬಜರಂಗದಳ ಮಾಜಿ ಮುಖಂಡ, ಹಾಲಿ ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರಕುಮಾರ್ ಇಹಲೋಕದ ಪಯಣ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿ ಶುಕ್ರವಾರ ರಾತ್ರಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮುಂಜಾನೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಹೇಂದ್ರ ಕುಮಾರ್ ಅವರ ನಿಧನ ನಾಡಿದ ಪ್ರಗತಿಪರ ಚಳವಳಿಗೆ ಅಪಾರ ನಷ್ಟವನ್ನುಂಟು ಮಾಡಿದೆ.

ಇತ್ತೀಚಿನ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ಅಲ್ಲೇ ನೆಲೆಸಿದ್ದ ಮಹೇಂದ್ರ ಕುಮಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನವರು. ಕೊಪ್ಪಪಟ್ಟಣ ಸಮೀಪದ ಮೇಲಿನಪೇಟೆಯವರಾದ ಮಹೇಂದ್ರಕುಮಾರ್, ಶೃಂಗೇರಿ ತಾಲೂಕಿನ ನಡುವಾನೆ ಗ್ರಾಮದ ರಾಮೇಗೌಡ ಹಾಗೂ ಸುನಂದಮ್ಮ ದಂಪತಿಯ ಪುತ್ರ. ಒಕ್ಕಲಿಗ ಸಮುದಾಯದವರಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅದ್ಭುತ ವಾಗ್ಮಿಯಾಗಿದ್ದ ಮಹೇಂದ್ರ ಕುಮಾರ್ ತಮ್ಮ ಆರಂಭಿಕ ಶಿಕ್ಷಣವನ್ನು ಕೊಪ್ಪ ಪಟ್ಟಣದಲ್ಲೇ ಪಡೆದವರಾಗಿದ್ದು, ಪಟ್ಟಣದ ಜಿಜೆಸಿ ಶಾಲೆಯ ಹಳೆ ವಿದ್ಯಾರ್ಥಿ. ಬೇರೆ ಬೇರೆ ಧರ್ಮ, ರಾಜಕೀಯ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮಹೇಂದ್ರ ಕುಮಾರ್ ಹೆಚ್ಚು ವ್ಯಾಸಂಗ ಮಾಡಿದವರಲ್ಲ. ಪಿಯುಸಿವರೆಗೆ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಮಹೇಂದ್ರಕುಮಾರ್ ಅದಾಗಲೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ತನ್ನ ಕಿಚ್ಚಿನಿಂದಲೇ ಜಿಲ್ಲೆಯಲ್ಲಿ ಆಗಿನ್ನೂ ನೆಲೆ ಕಂಡುಕೊಂಡಿರದ ಬಜರಂಗ ದಳವನ್ನು ಸಂಘಟಿಸಿ, ಬೆಳೆಸಿದ್ದರು. ಮಹೇಂದ್ರಕುಮಾರ್ ಜಿಲ್ಲೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮಾಡಿದ ಸಂಘಟನೆಯ ಫಲವಾಗಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಐವರು ಶಾಸಕರು ಒಮ್ಮೆಗೆ ಅಧಿಕಾರಕ್ಕೆ ಬರುವಂತಾಗಿತ್ತು ಎಂದರೆ ಅವರ ಸಂಘಟನೆಯ ತಾಕತ್ತು ಎಂಥದ್ದೆಂಬುದು ಅರಿವಿಗೆ ಬರುತ್ತದೆ.

ಹಿಂದೂ ಧರ್ಮ ರಕ್ಷಣೆ ನೆಪದಲ್ಲಿ ಜಿಲ್ಲೆಗೆ ಬಜರಂಗದಳವನ್ನು ಪರಿಚಯಿಸಿದ ಮಹೇಂದ್ರಕುಮಾರ್, ಆರಂಭದಲ್ಲಿ ಕೊಪ್ಪದಂತಹ ಸಣ್ಣ ತಾಲೂಕು ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲೂ ಓಡಾಡಿ ಸಂಘಟನೆ ನಡೆಸಿದ್ದರು. ಮಹೇಂದ್ರಕುಮಾರ್ ಮಾತಿನ ಮೋಡಿಗೆ ಬಾಷಣಕ್ಕೆ ಯುವಕರ ಪಡೆ ಆಕರ್ಷಿತವಾಗುತ್ತಿತ್ತು. ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳ ವಿರುದ್ಧ ತಾನು ಹೋದಲ್ಲೆಲ್ಲ ಮಾತನಾಡುತ್ತಿದ್ದ ಮಹೇಂದ್ರ ಅವರ ಮಾತುಗಳು ತಳ ಸಮುದಾಯದವರನ್ನು ಹೆಚ್ಚು ಸೆಳೆದಿದ್ದರ ಫಲವಾಗಿ ತಾಲೂಕಿನಾದ್ಯಂತ ದಲಿತರೂ ಸೇರಿದಂತೆ ಶೋಷಿತ ಸಮುದಾಯಗಳ ಯುವಕರು ಮಹೇಂದ್ರ ಕುಮಾರ್ ಅವರ ಬಜರಂಗದಳಕ್ಕೆ ಬಹುಬೇಗ ಸೇರಿಕೊಂಡರು. ನೋಡನೋಡುತ್ತಲೇ ತಾಲೂಕಿನಲ್ಲಿ ಬಜರಂಗದಳದ ಬೇರುಗಳನ್ನು ಗಟ್ಟಿ ಮಾಡಿದ್ದ ಮಹೇಂದ್ರಕುಮಾರ್ ಹಿಂದೂ ಸಮುದಾಯದ ಯುವಕರ ಕಣ್ಮಣಿಯಾಗಿ ಬೆಳೆದರು. ಕೊಪ್ಪ ತಾಲೂಕಿನಲ್ಲಿ ಆರಂಭವಾಗಿದ್ದ ಬಜರಂಗದಳದ ಶಾಖೆಗಳು ಇಡೀ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿತು.

ಜಿಲ್ಲೆಯಲ್ಲಿ ಬಜರಂಗದಳ ಬಲಿಷ್ಠವಾಗುತ್ತಿದ್ದ ಅವಧಿಯಲ್ಲಿ ಸಂಘ ಪರಿವಾರದ ಸಂಘಟನೆಗಳು ಇನಾಂ ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಸಂಬಂಧಿಸಿದ ವಿವಾದಕ್ಕೆ ನಾಂದಿ ಹಾಡಿದವು. ಬಾಬಾಬುಡನ್ ಗಿರಿ ಹಿಂದುಗಳ ಸ್ವತ್ತೆಂದು ಘೋಷಿಸಬೇಕೆಂದು ಹೋರಾಟಕ್ಕಿಳಿದಿದ್ದ ಸಂಘ ಪರಿವಾರದ ಕೂಗಿಗೆ ಜಿಲ್ಲೆಯಲ್ಲಿ ಮಲೆನಾಡಿನ ಖ್ಯಾತ ಪ್ರಗತಿಪರ ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ನೇತೃತ್ವದ ಹೋರಾಟಗಾರರ ತಂಡ ಅಡ್ಡಗಾಲಾಗಿತ್ತು. ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ದತ್ತಪೀಠದ ಹೋರಾಟಕ್ಕೆ ಧುಮುಕಿ ಹಳ್ಳಿಹಳ್ಳಿ ಸುತ್ತಿ ಹೋರಾಟಕ್ಕೆ ಆನೆಬಲ ನೀಡಿದ್ದರು. ದತ್ತಮಾಲೆ ಅಭಿಯಾನದ ಸಂರ್ಭದಲ್ಲಿ ಹಳ್ಳಿಹಳ್ಳಿಯಿಂದ ಬಜರಂಗದಳದ ಕಾರ್ಯಕರ್ತರು ಚಿಕ್ಕಮಗಳೂರಿನತ್ತ ಬಂದಾಗಲೇ ಸಂಘ ಪರಿವಾರದ ಸಂಘಟನೆಗಳಿಗೆ, ಬಿಜೆಪಿಯ ಹಿರಿಯ ಮುಖಂಡರಿಗೆ ಮಹೇಂದ್ರಕುಮಾರ್ ಅವರ ಸಂಘಟನಾ ಶಕ್ತಿಯ ಅರಿವಾಗಿತ್ತು. ದತ್ತ ಪೀಠ ವಿವಾದ ಹಾಗೂ ಮಹೇಂದ್ರಕುಮಾರ್ ಅವರ ಬಜರಂಗದಳ ಸಂಘಟನೆಯ ಫಲವಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಮೊದಲ ಬಾರಿಗೆ ವಿಧಾನಸಭೆೆ ಪ್ರವೇಶಿಸುವಂತಾಗಿದ್ದು, ಇತಿಹಾಸವಾಗಿದೆ.

ಈ ಮಧ್ಯೆ 2008ರಲ್ಲಿ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ಸರಣಿ ಚರ್ಚ್ ದಾಳಿಗಳು ನಡೆದು ದೇಶ-ವಿದೇಶಗಳಲ್ಲಿ ಸುದ್ದಿಯಾಯಿತು. ಈ ಕೃತ್ಯಕ್ಕೆ ವ್ಯಾಪಕ ಖಂಡನೇ ವ್ಯಕ್ತವಾದರೆ ಪ್ರಗತಿಪರರು ಹೋರಾಟಕ್ಕಿಳಿದಿದ್ದರು. ಘಟನೆಯಿಂದ ರಾಜ್ಯದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಬಿಜೆಪಿ ಸರಕಾರ ತೀವ್ರ ಮುಜುಗರಕ್ಕೀಡಾಯಿತಲ್ಲದೆ, ಸರಕಾರವೇ ಪತನವಾಗುವ ಅಪಾಯಕ್ಕೆ ಸಿಲುಕಿತು. ಈ ಸಂಬಂಧ ಬಿಜೆಪಿ ಹಾಗೂ ಆರೆಸ್ಸೆಸ್ ಮಧ್ಯೆ ತೆರೆಮರೆಯಲ್ಲಿ ಕೆಲ ವಿದ್ಯಮಾನಗಳು ನಡೆದವು. ಕೆಲವೇ ದಿನಗಳಲ್ಲಿ ಬಜರಂಗದಳ ರಾಜ್ಯ ಸಂಚಾಲಕನಾಗಿದ್ದ ಮಹೇಂದ್ರ ಕುಮಾರ್ ಅವರ ಬಂಧನವಾಯಿತು. ಈ ಬಂಧನಕ್ಕೂ ಮುನ್ನ ಮಹೇಂದ್ರಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದ ಬಿಜೆಪಿ, ಆರೆಸ್ಸೆಸ್‌ನ ಹಿರಿಯ ನಾಯಕರು ಎರಡು ದಿನಗಳವರೆಗೆ ಬಂಧನದಲ್ಲಿಟ್ಟು ನಂತರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರಿಂದ ಮಹೇಂದ್ರಕುಮಾರ್ ಶರಣಾಗತರಾಗಿದ್ದರು. ಆದರೆ ಸರಕಾರ ಅವರನ್ನು 42 ದಿನಗಳ ಕಾಲ ಸೆರೆಮನೆಯಲ್ಲಿಟ್ಟಿತ್ತು ಎಂಬುದನ್ನು ಸ್ವತಃ ಮಹೇಂದ್ರ ಕುಮಾರ್ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ ಮಹೇಂದ್ರಕುಮಾರ್ ಬಿಜೆಪಿ ,ಆರೆಸ್ಸೆಸ್ ಮೇಲಿನ ಅಸಮಾಧಾನದಿಂದ ಹಂತಹಂತವಾಗಿ ಅವುಗಳಿಂದ ದೂರವಾಗಲಾರಂಭಿಸಿದರು. ಈ ಅವಧಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ತನ್ನ ನೆರವಿಗೆ ಬಂದಿದ್ದರಿಂದ ಸಂಘ ಪರಿವಾರದಿಂದ ದೂರವಾದ ಮಹೇಂದ್ರ ಕುಮಾರ್ ಜೆಡಿಎಸ್ ಸೇರಿದರು. ಕೆಲ ವರ್ಷಗಳ ಕಾಲ ಜೆಡಿಎಸ್‌ನಲ್ಲೇ ಉಳಿದರು. ಚರ್ಚ್ ದಾಳಿ ಬಳಿಕ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ಮಹೇಂದ್ರಕುಮಾರ್ ಬದಲಾದ ಕಾಲದಲ್ಲಿ ಜೆಡಿಎಸ್‌ನಿಂದಲೂ ದೂರವಾದರು. ಆ ಬಳಿಕ ಯಾವುದೇ ಸಂಘಟನೆ, ಪಕ್ಷಗಳಲ್ಲಿ ಗುರುತಿಸಿಕೊಳ್ಳದ ಮಹೇಂದ್ರಕುಮಾರ್ ಆಗಾಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಗತಿಪರ ವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಸಂಘಪರಿವಾರ, ಬಿಜೆಪಿಯ ಕೋಮುವಾದ, ಗಲಭೆಗಳ ಮೂಲಕ ರಾಜಕೀಯ ಲಾಭ ಪಡೆಯುವ ಅವುಗಳ ಕಾರ್ಯಸೂಚಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಲಾಂಭಿಸಿದ್ದರು. ಆರೆಸ್ಸೆಸ್ ವಿರುದ್ಧ ಭಾಷಣಗಳನ್ನು ಮಾಡಲಾರಂಭಿಸಿದ್ದರು. ಕಳೆದೊಂದು ವರ್ಷಗಳ ಹಿಂದೆ ‘ನಮ್ಮ ಧ್ವನಿ’ ಎಂಬ ಯೂಟೂಬ್ ಚಾನೆಲ್ ಆರಂಭಿಸಿದ್ದ ಅವರು ಬಿಜೆಪಿಯ ಕೋಮು ರಾಜಕಾರಣ, ಆರೆಸ್ಸೆಸ್‌ನ ಹಿಂದುತ್ವದ ಅಜೆಂಡಾಗಳ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದರು. ಈ ಯೂಟೂಬ್ ಚಾನೆಲ್ ನಂತರ ಮಹೇಂದ್ರ ಕುಮಾರ್ ನಾಡಿನ ಪ್ರಗತಿಪರ ಚಿಂತಕರ ವಲಯದಲ್ಲಿ ಗುರುತಿಸಿಕೊಂಡು ಜನಪ್ರಿಯರಾದರು. ಇತ್ತೀಚೆಗೆ ಇಡೀ ದೇಶಾದ್ಯಂತ ಕೇಳಿಬಂದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧವೂ ಧ್ವನಿ ಎತ್ತಿದ್ದ ಮಹೇಂದ್ರಕುಮಾರ್ ಹಲವು ವೇದಿಕೆಗಳು ಹಾಗೂ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಈ ಕಾಯ್ದೆಗಳ ವಿರುದ್ಧ ಜನಜಾಗೃತಿ ಮೂಡಿಸಲಾರಂಭಿಸಿ ಮನೆ ಮಾತಾಗಿದ್ದರು.

ಮಹೇಂದ್ರಕುಮಾರ್ ಬಜರಂಗದಳ ತೊರೆದು ಬಳಿಕ ತಮ್ಮದೇ ಶಕ್ತಿ ಸಾಮರ್ಥ್ಯ, ವಾಕ್ಚಾತುರ್ಯದಿಂದ ಹಾಗೂ ಸಾಮಾಜಿಕ ಕಳಕಳಿಯ ಬದ್ಧತೆಯಿಂದಾಗಿ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಮನೆಮಾತಾಗಿದ್ದರು. ಹಲವು ರಾಜಕೀಯ ಪಕ್ಷಗಳು ಅವರನ್ನು ತಮ್ಮ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. ತಮ್ಮ ಯೂಟೂಬ್ ಚಾನಲ್ ಮೂಲಕ ಲಕ್ಷಾಂತರ ಮಂದಿ ಜನರಲ್ಲಿ ಪ್ರಗತಿಪರ ವಿಚಾರಗಳ ಸಂಬಂಧ ಜನಜಾಗೃತಿ ಮೂಡಿಸುತ್ತಾ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಅವರು ದಿನಬೆಳಗಾಗುತ್ತಲೇ ಬಾರದ ಲೋಕಕ್ಕೆ ತೆರಳಿದ್ದಾರೆ.

ಆರಂಭದಲ್ಲಿ ಸಂಘ ಪರಿವಾರದ ಸಂಘಟನೆಗಳ ಮುಖಂಡರ ಭಾಷಣಗಳಿಂದಾಗಿ ಸಂಘಟನೆ ಸೇರಿಕೊಂಡಿದ್ದ ಮಹೇಂದ್ರಕುಮಾರ್ ಅವರ ಸಂಘಟನಾ ಕೌಶಲ್ಯದಿಂದಾಗಿ ಬಜರಂಗದಳ ಬಲಿಷ್ಠವಾಗುತ್ತಿದ್ದಂತೆ ಹಿಂದೂ ಧರ್ಮದ ಏಳಿಗೆ, ರಕ್ಷಣೆ ಸಂಬಂಧ ತಮ್ಮದೇ ವಿಚಾರಗಳನ್ನು ಯುವಜನತೆ ಮುಂದಿಡುತ್ತಿದ್ದರು. ಹಿಂದೂ ಧರ್ಮದಲ್ಲಿರುವ ವೌಢ್ಯ, ಜಾತೀಯತೆ, ಬ್ರಾಹ್ಮಣ್ಯ, ಅಸ್ಪಶ್ಯತೆ ವಿರುದ್ಧ ಮಹೇಂದ್ರಕುಮಾರ್ ಧ್ವನಿ ಎತ್ತುತ್ತಿದ್ದರು. ಒಮ್ಮೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಬ್ರಹ್ಮನಕೋಡು ಎಂಬ ಗ್ರಾಮದಲ್ಲಿದ್ದ ಬಜರಂಗದಳ ಸಂಘಟನೆ ಸಂದರ್ಭ ಗ್ರಾಮದಲ್ಲಿದ್ದ ಗಣಪತಿ ದೇವಾಲಯದಲ್ಲಿ ಎಸ್ಸಿ-ಎಸ್ಟಿ ಕಾಲನಿಯ ಯುವಕರಿಗೆ ದತ್ತಮಾಲೆ ಹಾಕಿಸಲು ಮಹೇಂದ್ರ ಕುಮಾರ್ ಮುಂದಾಗಿದ್ದರು. ಆದರೆ ಯುವಕರು ದೇವಾಲಯದ ಒಳಗೆ ಪ್ರವೇಶಿಸಲು ಹಿಂಜರಿದರು. ಆದರೆ ಇಂತಹ ಅನಿಷ್ಟ ಆಚರಣೆಗಳಿಂದ ಹಿಂದೂ ಧರ್ಮವನ್ನು ಮುಕ್ತಗೊಳಿಸುವ ಚಿಂತನೆ ಹೊಂದಿದ್ದ ಮಹೇಂದ್ರಕುಮಾರ್ ಯುವಕರ ಮನವೊಲಿಸಿ ಗ್ರಾಮದಲ್ಲಿ ಮೊದಲ ಬಾರಿ ಅವರಿಗೆ ದೇವಾಲಯದೊಳಗೆ ಪ್ರವೇಶಿಸುವಂತೆ ಮಾಡಿದ್ದರು. ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಮೇಲ್ವರ್ಗದವರ ವಿರೋಧವನ್ನು ಮಹೇಂದ್ರ ಕುಮಾರ್ ಕಟ್ಟಿಕೊಳ್ಳುವಂತಾಗಿತ್ತು. ಅಲ್ಲದೇ ಆರೆಸ್ಸೆಸ್ ಮುಖಂಡರು ಮಹೇಂದ್ರ ಕುಮಾರ್‌ಗೆ ಈ ಸಂಬಂಧ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಮುಖಂಡರ ಇಂತಹ ಸೂಚನೆಗಳಿಗೆ ಸೊಪ್ಪುಹಾಕದ ಮಹೇಂದ್ರ, ತಮ್ಮ ವಿಚಾರಗಳನ್ನು ಮುಂದಿಟ್ಟುಕೊಂಡೇ ಸಂಘಟನೆ ಮಾಡಲಾರಂಭಿಸಿದ್ದರು.

ಇನಾಂ ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾವನ್ನು ‘ದತ್ತ ಪೀಠ ’ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಹೋರಾಟದಲ್ಲಿ ಮಹೇಂದ್ರಕುಮಾರ್ ಮುಂಚೂಣಿಯಲ್ಲಿದ್ದರು. ಇದಕ್ಕೆ ವಿರುದ್ಧವಾಗಿ ತಾನು ಹೋರಾಟಕ್ಕಿಳಿದಿದ್ದ ಸಂದರ್ ಮೀರಾಟ ಪಾಟ್ಕರ್ ಕಾರ್ಯಕ್ರವೊಂದರಲ್ಲಿ ತಾನು ಮತ್ತು ಮಹೇಂದ್ರಕುಮಾರ್ ಮುಖಾಮುಖಿಯಾಗಿದ್ದೆವು. ಬಜರಂಗದಳ ಸಂಘಟನೆಯ ಮೂಲಕ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆಲ್ಲಲೂ ಮಹೇಂದ್ರ ಕುಮಾರ್ ಕಾರಣರಾಗಿದ್ದಾರೆ. ಆದರೆ ಬಿಜೆಪಿ, ಆರೆಸ್ಸೆಸ್ ಹುನ್ನಾರದಿಂದಾಗಿ ಮಹೇಂದ್ರಕುಮಾರ್‌ರಿಗೆ ಬೆಳೆಯಲು ಅವಕಾಶ ಸಿಗಲಿಲ್ಲ. ಅವರು ಷಡ್ಯಂತ್ರಕ್ಕೆ ಬಲಿಯಾಗಿದ್ದರು. ಇದರ ಅರಿವಾಗುತ್ತಿದ್ದಂತೆ ಅವರು ಬಿಜೆಪಿ, ಸಂಘ ಪರಿವಾರದ ಹುನ್ನಾರಗಳನ್ನು ಬಟಾಬಯಲು ಮಾಡುತ್ತಾ ರಾಜ್ಯದಲ್ಲಿ ಮನೆಮಾತಾಗಿದ್ದರು. ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಸಂಘ ಪರಿವಾರದವರು ವಿರೋಧ ಮಾಡಿದ್ದ ಅವಧಿಯಲ್ಲಿ ‘ನಮ್ಮ ಧ್ವನಿ’ ಯೂಟ್ಯೂಬ್ ಚಾನಲ್‌ನಲ್ಲಿ ಮಹೇಂದ್ರ ತನ್ನ ಹೋರಾಟದ ಬಗ್ಗೆ ಪ್ರಸ್ತಾಪಿಸಿ ಒಳ್ಳೆಯ ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ ಯಾವತ್ತೂ ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ಎನ್‌ಆರ್‌ಸಿ, ಸಿಎಎ ವಿರುದ್ಧದ ಜನಜಾಗೃತಿಗೆ ಬೀದಿಗಿಳಿದಿದ್ದರು. ಈ ಹೋರಾಟದಲ್ಲಿ ನಮ್ಮಿಬ್ಬರ ಭೇಟಿಯಾಗುತ್ತಿತ್ತೋ ಏನೋ..ಆದರೆ ಅವರಿನ್ನು ಬಾರದ ಲೋಕಕ್ಕೆ ತೆರಳಿದ್ದು, ಅವರ ಹಠಾತ್ ಅಗಲಿಕೆಯಿಂದ ನೋವಾಗಿದೆ. ಇಂತಹ ನಿಷ್ಠುರ ಸಮಾಜಿಕ ಕಳಕಳಿಯ ಚಿಂತಕನ ಅಗಲಿಕೆ ಸಮಾಜಕ್ಕಾಗಿರುವ ತುಂಬಲಾರದ ನಷ್ಟ.
- ಕಲ್ಕುಳಿ ವಿಠಲ್ ಹೆಗ್ಗಡೆ, ಪ್ರಗತಿಪರ ಚಿಂತಕ, ಶೃಂಗೇರಿ

ಮಹೇಂದ್ರ ಕುಮಾರ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಜರಂಗದಳ ಸಂಘಟಿಸಲು ಅಪಾರ ಶ್ರಮ ಹಾಕಿದ್ದಾರೆ. ಬಜರಂಗದಳ ಜಿಲ್ಲೆಯಲ್ಲಿ ಬಲಿಷ್ಟವಾಗುತ್ತಿದ್ದಂತೆ ಬಿಜೆಪಿ ಪಕ್ಷವೂ ಪ್ರವರ್ಧಮಾನಕ್ಕೆ ಬಂತು. ವೈಯಕ್ತಿಕ ಕಾರಣದಿಂದಾಗಿ 2005ರಲ್ಲಿ ನಾನು ಬಜರಂಗದಳ ತೊರೆದೆ. ಈ ವೇಳೆಗೆ ಸುಧೀರ್ ಕುಮಾರ್  ಅವರು ಮಹೇಂದ್ರ ಜತೆಗಿದ್ದರು, 2008ರಲ್ಲಿ ನಡೆದ ಘಟನೆಯಿಂದಾಗಿ ಮಹೇಂದ್ರಕುಮಾರ್ ಜೈಲಿಗೆ ಹೋಗುವಂತಾಯಿತು. ಬಿಡುಗಡೆಯಾದ ಬಳಿಕ ಅವರು ಸಂಘಪರಿವಾರದಿಂದ ದೂರ ಉಳಿದರು. ಅವರೊಬ್ಬ ಹುಟ್ಟು ಹೋರಾಟಗಾರ, ಬಜರಂಗದಳದಲ್ಲಿದ್ದಾಗಲೂ ಅವರು ಉತ್ತಮ ಸಮಾಜಕ್ಕಾಗಿ ದುಡಿದರು, ಅಲ್ಲಿಂದ ಹೊರಬಂದನಂತರವೂ ಉತ್ತಮ ಸಮಾಜಕ್ಕಾಗಿ ದುಡಿಯುತ್ತಿದ್ದರು. ಇಂದು ಹಠಾತ್ ನಿಧನದಿಂದ ಬೇಸರವಾಗಿದೆ. ಮಹೇಂದ್ರಕುಮಾರ್ ಗೆ ಓರ್ವ ಉತ್ತಮ ರಾಜಕಾರಣಿಯಾಗುವ ಅವಕಾಶ ಇತ್ತು. ಬಿಜೆಪಿ ಪಕ್ಷದ ಕೆಲ ನಾಯಕರು ಸಂಚಿನಿಂದಾಗಿ ಅವರು ಮೂಲೆಗುಂಪಾದರು. ಜೆಡಿಎಸ್ ಪಕ್ಷದಲ್ಲಿ ನಾಯಕನಾಗಿ ಬೆಳೆಯುವ ಅವಕಾಶವಿದ್ದರೂ ಅಲ್ಲೂ ಅವರಿಗೆ ಅನ್ಯಾಯವಾಗಿದೆ. ಚಿಕ್ಕಮಗಳೂರಿನ ರಾಜಕಾರಣಕ್ಕೆ ಬರುವ ಅವರ ಮನದಿಂಗಿತಕ್ಕೆ ಸ್ಥಳೀಯರು ಆಸ್ಪದ ನೀಡಲಿಲ್ಲ. ಅವರು ಆರೆಸ್ಸೆಸ್, ಬಿಜೆಪಿ ನಾಯಕರ ಅಣತಿಯಂತೆ ಕುಣಿದಿದ್ದರೆ ಶಾಸಕರಾಗಿ, ಸದ್ಯ ಪ್ರಭಾವಿ ಸಚಿವನಾಗಿರುತ್ತಿದ್ದರೇನೋ ?
- ರವಿಶಂಕರ್, ಮಹೇಂದ್ರಕುಮಾರ್ ಒಡನಾಡಿ ಹಾಗೂ ಬಿಜೆಪಿ ಮುಖಂಡ, ನರಸಿಂಹರಾಜಪುರ

ಮಹೇಂದ್ರಕುಮಾರ್ ಸಂಘಪರಿವಾರದಿಂದ ಹೊರಬಂದ ಮೇಲೆ ನನ್ನ ಗೆಳೆಯರೇ ಆಗಿದ್ದರು. ಅವರು ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಸಂಘಪರಿವಾರದವರ ಅಜೆಂಡಾದೊಂದಿಗೆ ಹೋರಾಟಕ್ಕಿಳಿದಿದ್ದ ಅವರು, ಇದ್ದಕ್ಕಿದ್ದಂತೆ ಹೋರಾಟದ ದಿಕ್ಕು ಬದಲಾಯಿದವರು. ಜನಪರ ಹೋರಾಟದ ಧ್ವನಿಯಾಗಿ ಇತ್ತೀಚೆಗೆ ರಾಜ್ಯದಲ್ಲಿ ಪ್ರಮುಖ ಮುಂಚೂಣಿ ಹೋರಾಟಗಾರನಾಗಿ ಜನಜಾಗೃತಿಗಿಳಿದಿದ್ದರು. ನಮ್ಮ ಧ್ವನಿ ಯೂಟ್ಯೂಬ್ ಚಾನಲ್ ಮೂಲಕ ಅವರು ಜನಪರ ನಿಲುವುಗಳು, ಸರಕಾರಗಳ ಭ್ರಷ್ಟಾಚಾರ, ಬಿಜೆಪಿಯ ಹಿಡನ್ ಅಜೆಂಡಾ, ಕೋಮುವಾದ, ಎನ್‍ಆರ್ಸಿ, ಕೇಂದ್ರ ಸರಕಾರದ ಆಡಳಿತ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುತ್ತ ಲಕ್ಷಾಂತರ ಜನಿರಗೆ ಹತ್ತಿರವಾಗಿದ್ದರು. ಅವರ ಮಾತಿನಿಂದ ಕೋಮುವಾದಕ್ಕೆ ಸೆಡ್ಡು ಹೊಡೆದು ಹೊರ ಬಂದವರೂ ಇದ್ದಾರೆ. ಅವರ ನಂಬಿದ್ದ ಜಾತ್ಯತೀತ ಆಶಯಗಳ ಸಾಕಾರಕ್ಕೆ ನಾವು ಶ್ರಮಿಸಬೇಕಿದೆ. ಮಹೇಂದ್ರಕುಮಾರ್ ಮಲೆನಾಡಿನ ವಿಶಿಷ್ಟ ಹೋರಾಟಗಾರರಾಗಿದ್ದಾರೆ.
- ಗೌಸ್ ಮೋಹಿದ್ದೀನ್, ಸಾಮಾಜಿಕ ಕಾರ್ಯಕರ್ತ

Writer - ಶಿವು ಕಳಸ

contributor

Editor - ಶಿವು ಕಳಸ

contributor

Similar News