ಮನೆ, ಮನ ಮತ್ತು ಮ್ಯೂಸಿಕ್ ಬಗ್ಗೆ ಮನೋಹರ್ ಮಾತು

Update: 2020-04-25 17:17 GMT

ವಿ.ಮನೋಹರ್ ಅವರ ಊರು ಮೂಲತಃ ದಕ್ಷಿಣ ಕನ್ನಡದ ವಿಟ್ಲ. ಆದರೆ ಸಂಗೀತ ನಿರ್ದೇಶಕರಾಗಿ ಅವರ ದಾಖಲೆ ಮುರಿಯುವವರು ರಾಜ್ಯದಲ್ಲೇ ಹುಟ್ಟಿಲ್ಲ. ಅಂಥದೊಂದು ದಾಖಲೆಯನ್ನು ಜನುಮದ ಜೋಡಿ ಚಿತ್ರದ ಮೂಲಕ ಮೂಡಿಸಿದ ಕೀರ್ತಿ ಮನೋಹರ್ ಅವರದ್ದು. ಬರಗೂರು ಅವರ ಬರವಣಿಗೆಯಲ್ಲಿದ್ದ ‘ಮಣಿ ಮಣಿ ಮಣಿ ಮಣಿಗೊಂದು ಹಾರ’ದಂಥ ಗದ್ಯವನ್ನು ಪದ್ಯ ಮಾಡಿದ ಮೇಧಾವಿ. ತಮ್ಮ ಸಾಧನೆಗಳ ಬಗ್ಗೆ ಎಂದಿಗೂ ಮಾತನಾಡ ಬಯಸದ ನಿಗರ್ವಿ. ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಜಗತ್ತೇ ಮನೆ ಸೇರಿಕೊಂಡಂತಿರುವಾಗ ವಿ.ಮನೋಹರ್ ಅವರು ಏನು ಮಾಡುತ್ತಿರಬಹುದು ಎನ್ನುವ ಕುತೂಹಲ. ಅದನ್ನು ಅರಿಯಲೆಂದು ಫೋನ್ ಮಾಡಿದಾಗ ‘ವಾರ್ತಾಭಾರತಿ’ಗೆ ಅವರು ನೀಡಿದ ಮಾಹಿತಿಗಳು ನಿಜಕ್ಕೂ ಕುತೂಹಲಕಾರಿಯಾಗಿತ್ತು.

ಮನೆಯೊಳಗೆ ಹೇಗೆ ಕಾಲ ಕಳೆಯುತ್ತಿದ್ದೀರಿ?

ಒಂದು ರೀತಿಯಲ್ಲಿ ನಾನು ಅದೃಷ್ಟವಂತ! ಅಂದರೆ ಎಂದಿನ ಹೊರಗಿನ ಸುತ್ತಾಟ ಇಲ್ಲವಾದರೂ ಮನೆಯೊಳಗಿದ್ದಷ್ಟು ಕಾಲ ಆಸಕ್ತಿಯಿಂದ ಮಾಡುವಂಥ ಕೆಲಸವೊಂದು ದೊರಕಿದೆ. ಅದು 30 ಟ್ಯೂನ್‌ಗಳಿಗೆ ಗೀತೆ ರಚಿಸುವ ಕೆಲಸ. ಹಾಗಂತ ಇದು ಒಂದೇ ಚಿತ್ರದ ಹಾಡುಗಳಲ್ಲ. ಸುಮಾರು ವಾಲ್ಯೂಮ್‌ಗಳಲ್ಲಿ ಹೊರಬರಬಹುದಾದಂಥ ಭಕ್ತಿಗೀತೆಯ ಆಲ್ಬಮ್ ಪ್ರಾಜೆಕ್ಟ್. ಎಲ್ಲವೂ ಆಂಜನೇಯ ಸ್ವಾಮಿಯ ಗೀತೆಗಳು.

  ಭಕ್ತಿಗೀತೆಗಳ ರಚನೆಗೆಂದು ಯಾವ ಪ್ರತ್ಯೇಕ ತಯಾರಿ ಮಾಡಿಕೊಳ್ಳುತ್ತೀರಿ?
  ಅಂದಹಾಗೆ ರಚನೆಯಷ್ಟೇ ಅಲ್ಲ, ಟ್ಯೂನ್ ಕೂಡ ನಾನೇ ಮಾಡಿರುವಂಥದ್ದು. ಅವುಗಳು ಎರಡು ತಿಂಗಳ ಮೊದಲೇ ರೆಡಿಯಾಗಿದ್ದವು. ಭಕ್ತಿಗೀತೆಗಳ ರಚನೆ ಕೂಡ ನನಗೆ ಹೊಸದೇನಲ್ಲ. ಈ ಹಿಂದಿನ ನನ್ನ ದೇವಿ, ಶಿವ ಮಂದಾರ ಮತ್ತು ಅಯ್ಯಪ್ಪನ ಭಕ್ತಿಯ ಹಾಡುಗಳಿಗೆ ಡಾ. ರಾಜ್ ಕುಮಾರ್ ಅವರು ಧ್ವನಿಯಾಗಿದ್ದರು. ಇದೀಗ ತುಂಬ ಹಾಡುಗಳನ್ನು ಬರೆಯಬೇಕಾದ ಕಾರಣ ಪುರಂದರದಾಸರ ಕೃತಿಗಳು, ಕನಕದಾಸರ ಕೃತಿಗಳು, ಬಸವಣ್ಣ, ಸರ್ವಜ್ಞನ ವಚನಗಳನ್ನು ಓದಿ ಅವುಗಳಲ್ಲಿನ ತತ್ವಗಳನ್ನು ಆಧಾರವಾಗಿಸಿಕೊಂಡು ಗೀತರಚನೆ ಮಾಡುತ್ತಿದ್ದೇನೆ. ನವರತ್ನಗಳ ಬಗ್ಗೆ, ತಿಂಡಿಯ ಬಗ್ಗೆ ಹೀಗೆ ವೈವಿಧ್ಯಮಯವಾದ ರಚನೆಗಳಿವೆ. ಇದರ ನಡುವೆ ಸಿನೆಮಾ ವೀಕ್ಷಣೆಯೂ ನಡೆದಿದೆ.

ಯಾವೆಲ್ಲ ಸಿನಿಮಾಗಳನ್ನು ವೀಕ್ಷಣೆ ಮಾಡಿದ್ದೀರಿ?

ಚಿತ್ರಮಂದಿರದಲ್ಲಿ ನೋಡಲು ಅವಕಾಶ ಸಿಗದಂಥ ಒಂದಷ್ಟು ಒಳ್ಳೆಯ ಸಿನಿಮಾಗಳನ್ನು ನೋಡಿದ್ದೇನೆ. ಅವುಗಳಲ್ಲಿ ಪ್ರಾಣಿಗಳ ಕತೆ ಹೇಳುವಂಥ ‘ಬ್ಯೂಟಿಫುಲ್ ಪೀಪಲ್’ ಮತ್ತು ಆಸ್ಕರ್ ಬಂದಿರುವಂಥ ಯುದ್ಧದ ಚಿತ್ರ ‘ಲೈಫ್ ಈಸ್ ಬ್ಯೂಟಿಫುಲ್’ ಎನ್ನುವ ಎರಡು ಆಂಗ್ಲ ಸಿನಿಮಾಗಳು ತುಂಬ ಇಷ್ಟವಾಯಿತು. ಉಳಿದಂತೆ ನಮ್ಮ ಗುರುಗಳಾದ ಕಾಶೀನಾಥ್ ಸರ್ ಅವರ ‘ಅಪರಿಚಿತ’ ಚಿತ್ರ ನೋಡಿದೆ. ಅದು 1978ರಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ನೋಡಿದ್ದೆ. ಆದರೆ ಈಗಲೂ ಅದರ ಸಬ್ಜೆಕ್ಟ್ ತುಂಬ ಫ್ರೆಶ್ ಆಗಿದೆ ಎನಿಸಿತು. ಅದರ ಚಿತ್ರಕತೆ ಮಾಡಿರುವ ರೀತಿಯನ್ನಂತೂ ಎಲ್ಲರೂ ಕಲಿಯಬೇಕಾಗಿರುವಂಥದ್ದು. ಸಸ್ಪೆನ್ಸ್, ಹ್ಯೂಮರ್ ಕೂಡ ಇದೆ. ಆದರೆ ಯಾವುದೇ ವಲ್ಗಾರಿಟಿ ಇಲ್ಲ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ಅದು.

ಕೊರೋನದಂಥ ವೈರಸ್ ಕಾಟದಿಂದ ಇಂಥ ಪರಿಸ್ಥಿತಿ ಎದುರಾಗಬಹುದು ಎನ್ನುವ ಕಲ್ಪನೆ ನಿಮಗೆ ಇತ್ತಾ?

ಖಂಡಿತವಾಗಿ ಇಲ್ಲ. ಆದರೆ ಕೊರೋನ ಕುರಿತಾದ ನನ್ನದೊಂದು ಸಂದೇಹ ಬಹುತೇಕ ನಿಜವಾಗಿದೆ. ಅದನ್ನು ನಾನು ತಿಂಗಳ ಹಿಂದೆಯೇ ಹೇಳಿದ್ದೆ. ಇದು ಒಂದು ಬಯೋವೈರಸ್ ಅಲ್ಲ ಅಟಾಮಿಕ್ ವೈರಸ್. ಇದು ಲ್ಯಾಬ್‌ನಲ್ಲಿ ತಯಾರಾದ ವೈರಸ್ ಎಂದು ಹೇಳಿದ್ದೆ. ವೈರಸ್ ಕುರಿತಾದ ಜಾಗೃತಿಯ ಮಾಹಿತಿಯನ್ನು ಚಂದನ ವಾಹಿನಿಗೆ ನೀಡಬೇಕಾದ ಸಂದರ್ಭದಲ್ಲಿ ಈ ಸಂದೇಹವನ್ನು ನಾನು ವ್ಯಕ್ತಪಡಿಸಿದ್ದೆ. ಆದರೆ ಅವರು ಅದನ್ನು ಪ್ರಸಾರ ಮಾಡಿರಲಿಲ್ಲ. ಇಂದು ನೋಡಿದರೆ ಜಪಾನ್‌ನ ವಿಜ್ಞಾನಿಗಳು ಕೋವಿಡ್-19 ಎನ್ನುವುದು ಲ್ಯಾಬ್‌ನಲ್ಲಿ ತಯಾರಾಗಿರುವ ಬಗ್ಗೆ ಹೇಳುತ್ತಿದ್ದಾರೆ. ಹಾಗಾಗಿ ಆ ವಿಚಾರದಲ್ಲಿ ನನ್ನ ಕಲ್ಪನೆ ನಿಜವಾದಂತಿದೆ.

 ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗಾನ ಚಂದನ’ ಕಾರ್ಯಕ್ರಮದ ವಿಶೇಷತೆಗಳೇನಿತ್ತು?

‘ಗಾನ ಚಂದನ’ದ 24ರಷ್ಟು ಎಪಿಸೋಡ್‌ಗಳು ಮಾತ್ರ ಪ್ರಸಾರವಾಗಿವೆ. ಎಲ್ಲವೂ ಸರಿಯಾಗಿದ್ದರೆ 50 ಸಂಚಿಕೆಗಳು ಬರಬೇಕಿತ್ತು. ಅದರಲ್ಲಿ ಹಲವಾರು ವಿಶೇಷತೆಗಳಿದ್ದವು. ಬಿ.ಆರ್.ಛಾಯಾ ಮತ್ತು ನಾನು ಮಾತ್ರವಲ್ಲದೆ ಪ್ರತಿ ಸಂಚಿಕೆಗೂ ನಿರ್ದೇಶಕರಾದ ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಕಾದಂಬರಿಗಾರ್ತಿ ತ್ರಿವೇಣಿಯವರ ಮಗಳು ಮೊದಲಾದ ಗಣ್ಯರು ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿರ್ದೇಶಕ ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹೀಗೆ ವಿಭಿನ್ನ ಅತಿಥಿಗಳನ್ನು ಆಹ್ವಾನಿಸುತ್ತಿದ್ದೆವು. ಸ್ಪರ್ಧಿಗಳು ತಪ್ಪಾಗಿ ಹಾಡಿದ್ದಲ್ಲಿ ಮತ್ತೊಮ್ಮೆ ಸರಿಪಡಿಸಿ ಹಾಡಬಹುದಾದ ಅವಕಾಶವನ್ನು ನೀಡಲಾಗುತ್ತಿತ್ತು. ಮಾತ್ರವಲ್ಲ ವೇದಿಕೆ ಮೇಲೆ ಹಾಡಿದ ಒಬ್ಬ ಸ್ಪರ್ಧಿಗೆ ಉಳಿದ ಏಳು ಮಂದಿ ಸಹ ಸ್ಪರ್ಧಿಗಳು ಕೂಡ ಮಾರ್ಕ್ ಹಾಕುವ ಅವಕಾಶ ನೀಡಲಾಗಿತ್ತು.

ಲಾಕ್‌ಡೌನ್ ಬಳಿಕ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿರಬಹುದು?

  ತುಂಬ ಕಷ್ಟ ಇದೆ. ನಿಜವಾಗಿ ನೋಡಿದರೆ ಜನವರಿಯಿಂದಲೇ ಜನರಿಗೆ ಸಿನೆಮಾದಲ್ಲಿ ಆಸಕ್ತಿ ಕಡಿಮೆಯಾದಂತಿತ್ತು. ನಾನು ಸಂಗೀತ ನೀಡಿದಂಥ ‘ಮತ್ತೆ ಉದ್ಭವ’ ಸೇರಿದಂತೆ ‘ಜಂಟಲ್ ಮ್ಯಾನ್’, ‘ ಮಾಲ್ಗುಡಿ ಡೇಸ್’ ಮೊದಲಾದ ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಇತ್ತು. ಇದೀಗ ಮನೆಯಲ್ಲೇ ಕುಳಿತು ನೆಟ್ ಫ್ಲಿಕ್ಸ್, ಅಮೆಜಾನ್, ಉದಯ ಟಿವಿಗಳಲ್ಲಿ ಬೇಕಾದಷ್ಟು ಸಿನೆಮಾಗಳನ್ನು ನೋಡಿರುತ್ತಾರೆ. ಹಾಗಾಗಿ ಬಹಳಷ್ಟು ಮಂದಿಯಲ್ಲಿ ಥಿಯೇಟರ್ ಗೆ ಹೋಗಿ ಸಿನೆಮಾ ನೋಡುವ ಆಸಕ್ತಿ ಕಡಿಮೆಯಾಗಿರುತ್ತದೆ. ಒಂದು ವೇಳೆ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರುವುದಾದರೆ ದರ್ಶನ್ ಅವರ ‘ರಾಬರ್ಟ್’, ಯಶ್ ಅವರ ‘ಕೆಜಿಎಫ್’ ಹೀಗೆ ಸ್ಟಾರ್ ಚಿತ್ರಗಳಿಗಷ್ಟೇ ಬರಬಹುದು. ಆದರೆ ಧಾರಾವಾಹಿಗಳಿಗೆ ಬೇಡಿಕೆ ಇರುವುದರಿಂದ ಅಷ್ಟೇನೂ ತೊಂದರೆ ಆಗುವುದಿಲ್ಲ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News