24 ಗಂಟೆಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಶೇ.6ರಷ್ಟು ಏರಿಕೆ

Update: 2020-04-25 17:43 GMT

ಹೊಸದಿಲ್ಲಿ,ಎ.25: ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ. ಇದು ಕಳೆದ ತಿಂಗಳು ಭಾರತದಲ್ಲಿ ಪಾಸಿಟಿವ್ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 100 ದಾಟಿದ ಬಳಿಕ ಒಂದು ದಿನದಲ್ಲಿ ದಾಖಲಾಗಿರುವ ಕನಿಷ್ಠ ಪ್ರಮಾಣದ ಹೆಚ್ಚಳವಾಗಿದೆ. ಶನಿವಾರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಚಿವರ ತಂಡದ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಸದ್ಯ ದೇಶದಲ್ಲಿ ಕೊರೋನ ವೈರಸ್ ಸಾವುಗಳ ಪ್ರಮಾಣ ಶೇ.3.1ರಷ್ಟು ಮತ್ತು ಚೇತರಿಕೆ ಪ್ರಮಾಣ ಶೇ.20ಕ್ಕಿಂತ ಹೆಚ್ಚಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಉತ್ತಮವಾಗಿದೆ ಮತ್ತು ಇದನ್ನು ಲಾಕ್‌ ಡೌನ್, ಕ್ಲಸ್ಟರ್ ಮ್ಯಾನೇಜ್‌ಮೆಂಟ್ ಮತ್ತು ನಿಯಂತ್ರಣ ಕಾರ್ಯತಂತ್ರದ ಧನಾತ್ಮಕ ಪರಿಣಾಮ ಎಂದು ಪರಿಗಣಿಸಬಹುದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಶನಿವಾರ ಬೆಳಿಗ್ಗೆ ಸರಕಾರದ ಅಂಕಿಅಂಶಗಳಂತೆ ಕಳೆದ 24 ಗಂಟೆಗಳಲ್ಲಿ 1,429 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 24,506ಕ್ಕೇರಿತ್ತು. ಶುಕ್ರವಾರ ಸಂಜೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 1,752 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಈವರೆಗೆ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಶುಕ್ರವಾರ ಸಂಜೆ ಪ್ರಕರಣಗಳ ವೃದ್ಧಿ ದರ ಶೇ.7.48 ಇದ್ದರೆ ಶನಿವಾರ ಬೆಳಿಗ್ಗೆ ಅದು ಶೇ.5.8ಕ್ಕೆ ಇಳಿಕೆಯಾಗಿದೆ.

ಪ್ರಕರಣಗಳು ದ್ವಿಗುಣಗೊಳ್ಳುವ ಅವಧಿ ಶುಕ್ರವಾರ ಸಂಜೆ 10 ದಿನಗಳಿದ್ದುದು ಶನಿವಾರ ಬೆಳಿಗ್ಗೆ 9.1 ದಿನಗಳಾಗಿದೆ. ಲಾಕ್‌ಡೌನ್‌ಗೆ ಮುನ್ನ ಇದು 3.4 ದಿನಗಳಾಗಿತ್ತು. ಕಳೆದ ವಾರದ ಶೇ.9.99ಕ್ಕೆ ಹೋಲಿಸಿದರೆ ಶನಿವಾರ ಬೆಳಿಗ್ಗೆ ಇದ್ದಂತೆ ಚೇತರಿಕೆಯ ಪ್ರಮಾಣ ಶೇ.20.66ರಷ್ಟಿದೆ ಎಂದು ಅಧಿಕಾರಿಗಳು ಸಚಿವರ ತಂಡಕ್ಕೆ ಮಾಹಿತಿ ನೀಡಿದರು.

ದೇಶಾದ್ಯಂತ ಕೋವಿಡ್-19 ಆಸ್ಪತ್ರೆಗಳ ವಿವರಗಳನ್ನು ಪಡೆದುಕೊಂಡ ಸಚಿವರ ತಂಡವು ಪರೀಕ್ಷಾ ಕಾರ್ಯತಂತ್ರಗಳು ಮತ್ತು ಟೆಸ್ಟಿಂಗ್ ಕಿಟ್‌ಗಳ ಲಭ್ಯತೆ ಹಾಗೂ ಹಾಟ್‌ಸ್ಪಾಟ್‌ಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಪುನರ್‌ಪರಿಶೀಲನೆಯನ್ನೂ ನಡೆಸಿತು.

ದೇಶಾದ್ಯಂತದ ಸುಮಾರು ಶೇ.50ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಗುಜರಾತ ಮತ್ತು ದಿಲ್ಲಿಗಳಲ್ಲಿ ದಾಖಲಾಗಿವೆ. ಈ ಮೂರು ರಾಜ್ಯಗಳು ಹಾಗೂ ಮಧ್ಯಪ್ರದೇಶ,ರಾಜಸ್ಥಾನ,ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ದೇಶದಲ್ಲಿಯ ಒಟ್ಟು ಪ್ರಕರಣಗಳ ಪೈಕಿ ಸುಮಾರು ಶೇ.80ರಷ್ಟು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News