ವಲಸೆ ಕಾರ್ಮಿಕರನ್ನು ರಕ್ಷಿಸಲೇಬೇಕು: ರಾಹುಲ್‌

Update: 2020-04-26 15:16 GMT

ಹೊಸದಿಲ್ಲಿ,ಎ.26: ರಾಹುಲ್ ಗಾಂಧಿ, ಪಿ.ಚಿದಂಬರಂ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ರವಿವಾರ ಝೂಮ್ ಆ್ಯಪ್ ಮೂಲಕ ನಡೆಸಿದ ಚರ್ಚೆಗಳಲ್ಲಿ ಕೊರೋನ ವೈರಸ್‌ಗೆ ಹೆಚ್ಚಿನ ಪರೀಕ್ಷೆಗಳು ಮತ್ತು ವಲಸೆ ಕಾರ್ಮಿಕರ ಪ್ರಶ್ನೆ ಆದ್ಯತೆ ಪಡೆದುಕೊಂಡಿದ್ದವು.

ವಲಸೆ ಕಾರ್ಮಿಕರ ರಕ್ಷಣೆಗಾಗಿ ವ್ಯಾಪಕ ರೂಪುರೇಷೆಯೊಂದನ್ನು ನಾವು ರೂಪಿಸಬೇಕಿದೆ. ವಲಸೆ ಕಾರ್ಮಿಕರ ರಕ್ಷಣೆಗೆ ನಾವು ಒತ್ತು ನೀಡಲೇಬೇಕಿದೆ ಎಂದು ಹೇಳಿದ ರಾಹುಲ್, ವಾಸ್ತವದಲ್ಲಿ ಈ ಹೊಣೆಗಾರಿಕೆ ರಾಜ್ಯ ಸರಕಾರಗಳದ್ದಾಗಿದೆ ಮತ್ತು ವಿವಿಧ ರಾಜ್ಯ ಸರಕಾರಗಳು ಈ ಸಮಸ್ಯೆಯನ್ನು ಬಗೆಹರಿಸಲು ವಿಭಿನ್ನ ವಿಧಿವಿಧಾನಗಳನ್ನು ಅನುಸರಿಸುತ್ತಿವೆ ಎಂದರು.

ಹರ್ಯಾಣದಲ್ಲಿ ಸಿಕ್ಕಿಹಾಕಿಕೊಂಡಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಹರ್ಯಾಣ ರೋಡ್ ವೇಸ್‌ನ ಬಸ್‌ಗಳ ಮೂಲಕ ತವರು ರಾಜ್ಯಕ್ಕೆ ಕಳುಹಿಸಲಾಗುತ್ತಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ವಿರೋಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಹುಲ್, ವಲಸೆ ಕಾರ್ಮಿಕರ ಚಲನವಲನ ಎರಡು ರಾಜ್ಯಗಳನ್ನು ಅವಲಂಬಿಸಿರಬೇಕು ಮತ್ತು ಅವು ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ತಮ್ಮ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳುವುದನ್ನು ಅವರ ತವರು ರಾಜ್ಯಗಳಿಗೇ ಬಿಡಬೇಕು. ಹೆಚ್ಚಿನವರನ್ನು ಅವರು ಈಗ ಇರುವಲ್ಲಿಯೇ ಉಳಿಸಬೇಕು ಹಾಗೂ ಅವರಿಗೆ ತಕ್ಷಣ ನಗದು ಮತ್ತು ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತಿಳಿಸಿದರು.

ದೇಶದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದೂ ಕಾಂಗ್ರೆಸ್ ನಾಯಕರು ಹೇಳಿದರು. ಪರೀಕ್ಷಾ ಸೌಲಭ್ಯಗಳ ಕೊರತೆಯಿದೆ. ಸಾಕಷ್ಟು ಪರೀಕ್ಷಾ ಸೌಲಭ್ಯಗಳಿಲ್ಲದೆ ಕೊರೋನ ವೈರಸ್ ಪಿಡುಗಿನ ವಿರುದ್ಧ ಜಯ ಸಾಧಿಸಲು ಸಾಧ್ಯವಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದರೆ, ದೇಶದ ಜನಸಂಖ್ಯೆಯ ಶೇ.1ನ್ನಾದರೂ ತಲುಪಲು 10 ಮಿಲಿಯನ್ ಪರೀಕ್ಷೆಗಳನ್ನು ನಡೆಸಬೇಕಿದೆ ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News