ಗುಟ್ಟು ರಟ್ಟು ಮಾಡದೆ ಹೋದ ಮಹೇಂದ್ರಕುಮಾರ್

Update: 2020-04-26 17:42 GMT

ಸಂಘ ಪರಿವಾರ ಮಂಗಳೂರಿನ ಚರ್ಚ್ ದಾಳಿಯಲ್ಲಿ ನಮ್ಮನ್ನು ಬಳಸಿಕೊಂಡು ಬಿಸಾಕಿತು. ಆ ಪ್ರಕರಣ ಕೋರ್ಟಿಗೆ ಹೋದಾಗ ಅದು ನೆರವಿಗೆ ಬರಲಿಲ್ಲ.ವಕೀಲರನ್ನು ನೇಮಿಸಲಿಲ್ಲ,ಹಣಕಾಸಿನ ಸಹಾಯ ಮಾಡಲಿಲ್ಲ. ಕಾರಣ ಕೇಸು ಹಾಕಿಸಿಕೊಂಡವರೆಲ್ಲ ಶೂದ್ರ ಹುಡುಗರು. ಅವರ ಬಗ್ಗೆ ಸಂಘಪರಿವಾರದ ಉಚ್ಚ ಜಾತಿಯ ಬ್ರಾಹ್ಮಣ ನಾಯಕರಿಗೆ ಆಸಕ್ತಿ ಇರಲಿಲ್ಲ ಎಂದು ಹೇಳಿದ ಮಹೇಂದ್ರಕುಮಾರ್, ಆರೆಸ್ಸೆಸ್ ಬ್ರಾಹ್ಮಣ ಶಾಹಿಯ ಹಿತ ಕಾಪಾಡಲು ಇರುವ ಸಂಘಟನೆ. ಶೂದ್ರ, ದಲಿತ ಹುಡುಗರಿಗೆ ಹಿಂದುತ್ವದ ನಶೆ ಏರಿಸಿ ಸೆಕ್ಯುರಿಟಿ ಗಾರ್ಡ್ ತರ ಅದು ಬಳಸಿಕೊಂಡು ಬಿಸಾಕುತ್ತದೆ ಎಂದು ನೋವಿನಿಂದ ಹೇಳಿದರು.


ಶನಿವಾರ ಬೆಳಗಿನ ಜಾವ 6 ಗಂಟೆ, ಎಂದಿನಂತೆ ಎದ್ದು ಮೊಬೈಲ್ ಓಪನ್ ಮಾಡಿದಾಗ ಮಹೇಂದ್ರಕುಮಾರ್ ಇನ್ನಿಲ್ಲ ಎಂಬ ಒಂದು ಸಾಲಿನ ಸಂದೇಶ ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತು. ಒಂದು ಕಾಲದಲ್ಲಿ ಕಟ್ಟಾ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಮಹೇಂದ್ರಕುಮಾರ್ ನನಗೆ ನಿಕಟವಾಗಿ ಪರಿಚಯವಾಗಿದ್ದು ಕಳೆದ ವರ್ಷ. ಅವರು ಬಜರಂಗದಳದಿಂದ ಹೊರಗೆ ಬಂದು ಕಟ್ಟಿದ ‘ನಮ್ಮ ಧ್ವನಿ’ ಸಂಘಟನೆಯ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಆಹ್ವಾನಿಸಿ ಫೋನ್ ಮಾಡಿದ್ದರು, ಆಗ ಸಂಪರ್ಕಕ್ಕೆ ಬಂದ ಅವರು ಆಗಾಗ ದೂರವಾಣಿಯಲ್ಲಿ ಮಾತಾಡುತ್ತಿದ್ದರು. ತಮ್ಮ ವಿಚಾರಗಳನ್ನು, ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.

ಮಹೇಂದ್ರಕುಮಾರ್ ಅವರನ್ನು ನಾನು ಮೊದಲು ನೋಡಿದ್ದು ಶೃಂಗೇರಿಯಲ್ಲಿ. ಅದು 2001ನೇ ಇಸವಿ ಎಂದು ನೆನಪು. ಕುದುರೆ ಮುಖ ಉದ್ಯಾನವನ ಪ್ರದೇಶದಿಂದ ಆದಿವಾಸಿಗಳನ್ನು ಎತ್ತಂಗಡಿ ಮಾಡಲು ಸರಕಾರ ಮಸಲತ್ತು ನಡೆಸಿತ್ತು. ಅದರ ವಿರುದ್ಧ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟ ಇದನ್ನು ಪ್ರತಿಭಟಿಸಿ ಶೃಂಗೇರಿಯಲ್ಲಿ ಎರಡು ದಿನಗಳ ಸಮಾವೇಶ ಏರ್ಪಡಿಸಿತ್ತು. ಮೇಧಾ ಪಾಟ್ಕರ್ ಅದಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಕಲ್ಕುಳಿ ವಿಠಲ್ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.

ಆ ಸಮಾವೇಶವನ್ನು ಬಜರಂಗದಳ ವಿರೋಧಿಸಿತ್ತು. ಅಂದು ಮೇಧಾ ಪಾಟ್ಕರ್ ಭಾಷಣ ನಡೆದಾಗ ಕೆಡಿಸಲು ಯತ್ನಿಸಿದರು. ಸಮ್ಮೇಳನದ ಹೊರಗಡೆ ಪ್ರಗತಿಪರ ಪುಸ್ತಕಗಳನ್ನು ಮಾರಾಟ ಮಾಡಲಾಗಿತ್ತಿತ್ತು. ಅಲ್ಲಿ ಬಂದ ಮಹೇಂದ್ರಕುಮಾರ್ ಕೋಮುವಾದದ ಅಪಾಯದ ಬಗ್ಗೆ ಕರ್ನಾಟಕ ವಿಮೋಚನಾ ರಂಗ ಪ್ರಕಟ ಮಾಡಿದ ಪುಸ್ತಕದ ಬಗ್ಗೆ ತಕರಾರು ತೆಗೆದು ಎಲ್ಲವನ್ನೂ ಖರೀದಿಸಿ ಸುಟ್ಟು ಹಾಕಲು ಯತ್ನಿಸಿದರು. ಆಗ ಘರ್ಷಣೆಯಾಗಿ ಮಹಿಳಾ ಜಾಗ್ರತಿ ಮತ್ತು ಆದಿವಾಸಿ ಸಂಘಟನೆಯ ಕಾರ್ಯಕರ್ತರಿಂದ ಏಟು ತಿಂದರು. ಮಾರನೇ ದಿನ ಸಂಘಪರಿವಾರ ಶೃಂಗೇರಿ ಬಂದ್ ಕರೆ ನೀಡಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಆಗ ನಮ್ಮ ಸಮಾವೇಶ ಅರ್ಧಕ್ಕೆ ಕೊನೆಗೊಂಡಿತು. ಆಗ ಕೆ.ರಾಮದಾಸ ಇದ್ದರು. ಕಡಿದಾಳು ಶಾಮಣ್ಣ, ರವಿವರ್ಮ ಕುಮಾರ ಎಲ್ಲರೂ ವಾಪಸು ಶಿವಮೊಗ್ಗಕ್ಕೆ ಬರಬೇಕಾಯಿತು. ಆ ನಂತರ ಮಹೇಂದ್ರಕುಮಾರ್‌ರನ್ನು ನಾನು ನೋಡಿದ್ದು ಆತ ಸಂಘಪರಿವಾರದಿಂದ ಹೊರಗೆ ಬಂದ ನಂತರ. ನನ್ನ ಸೆಲ್ ನಂಬರ್ ಎಲ್ಲಿಂದಲೋ ಪಡೆದು 2 ವರ್ಷಗಳ ಹಿಂದೆ ಫೋನ್ ಮಾಡಿ ಮಾತಾಡಿದರು. ಆಗ ಬಜರಂಗದಳದಿಂದ ಹೊರಗೆ ಬಂದು ಜಾತ್ಯತೀತ ಜನತಾದಳ ಸೇರಿ ಅದರಿಂದಲೂ ಅವರು ಹೊರಗೆ ಬಂದಿದ್ದರು. ಮುಂದೇನು ಮಾಡಬೇಕೆಂಬ ಗೊಂದಲದಲ್ಲಿದ್ದರು. ಹಾಲಿ ಅಸ್ತಿತ್ವದಲ್ಲಿರುವ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳನ್ನು ಸೇರುವ ಮನಸ್ಥಿತಿ ಅವರಿಗಿರಲಿಲ್ಲ. ಆ ಸಂಘಟನೆಗಳೂ ಇವರನ್ನು ಸ್ವೀಕರಿಸುವ ಉದಾರತೆ ಹೊಂದಿರಲಿಲ್ಲ, ಅಲ್ಲಿ ಸೇರಿದರೂ ಇವರಿಗೆ ರಾಜಕೀಯ ಭವಿಷ್ಯವಿರಲಿಲ್ಲ.

ಹೀಗಾಗಿ ತಮ್ಮದೇ ‘ನಮ್ಮ ಧ್ವನಿ’ ಸಂಘಟನೆಯನ್ನು ಕಟ್ಟಿಕೊಂಡು ಪ್ರಗತಿಪರರ ಜೊತೆ ಅವರು ಗುರುತಿಸಿಕೊಂಡರು. ನನಗೂ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಮಹೇಂದ್ರಕುಮಾರ್ ಜೊತೆ ಸಂಘಪರಿವಾರದಿಂದ ಹೊರಗೆ ಬಂದ ಕೊಪ್ಪದ ವಕೀಲ ಸುಧೀರ್ ಕುಮಾರ್ ಮುರೋಳ್ಳ್ಳಿ ಮತ್ತು ನಿಕೇತ ರಾಜ್ ಮೌರ್ಯ ಕೂಡ ಅದ್ಭ್ಬುತ ಭಾಷಣಕಾರರು. ಇವರಿಗೆ ಸಂಘಪರಿವಾರದ ಒಳಗಿನ ಹುಳುಕುಗಳು ಗೊತ್ತಿದ್ದವು. ಮಹೇಂದ್ರಕುಮಾರ್‌ಎಂತಹ ಅದ್ಭುತ ಸಂಘಟಕನೆಂದರೆ ಒಂದೇ ವರ್ಷದಲ್ಲಿ ‘ನಮ್ಮ ಧ್ವನಿ’ಯನ್ನು ದೊಡ್ಡ ಸಂಘಟನೆಯನ್ನಾಗಿ ಕಟ್ಟಿ ಬೆಳೆಸಿದರು. ಇತ್ತೀಚಿನ ಎನ್‌ಆರ್‌ಸಿ ವಿರೋಧದ ಹೋರಾಟದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಮಹೇಂದ್ರಕುಮಾರ್ ಜೊತೆಗೆ ಹೀಗೇ ಮಾತಾಡುತ್ತ ಆರೆಸ್ಸೆಸ್ ಪರಿವಾರದಿಂದ ಯಾಕೆ ಹೊರಗೆ ಬಂದಿರಿ ಎಂದು ಕೇಳಿದೆ. ಅದಕ್ಕೆ ಅವರು ಸುದೀರ್ಘವಾದ ನೋವಿನ ಉತ್ತರ ನೀಡಿದರು. ಸಂಘಪರಿವಾರ ಮಂಗಳೂರಿನ ಚರ್ಚ್ ದಾಳಿಯಲ್ಲಿ ನಮ್ಮನ್ನು ಬಳಸಿಕೊಂಡು ಬಿಸಾಕಿತು. ಆ ಪ್ರಕರಣ ಕೋರ್ಟ್‌ಗೆ ಹೋದಾಗ ಅದು ನೆರವಿಗೆ ಬರಲಿಲ್ಲ. ವಕೀಲರನ್ನು ನೇಮಿಸಲಿಲ್ಲ, ಹಣಕಾಸಿನ ಸಹಾಯ ಮಾಡಲಿಲ್ಲ. ಕಾರಣ ಕೇಸು ಹಾಕಿಸಿಕೊಂಡವರೆಲ್ಲ ಶೂದ್ರ ಹುಡುಗರು. ಅವರ ಬಗ್ಗೆ ಸಂಘಪರಿವಾರದ ಉಚ್ಚ ಜಾತಿಯ ಬ್ರಾಹ್ಮಣ ನಾಯಕರಿಗೆ ಆಸಕ್ತಿ ಇರಲಿಲ್ಲ ಎಂದು ಹೇಳಿದ ಮಹೇಂದ್ರಕುಮಾರ್, ಆರೆಸ್ಸೆಸ್ ಬ್ರಾಹ್ಮಣ ಶಾಹಿಯ ಹಿತ ಕಾಪಾಡಲು ಇರುವ ಸಂಘಟನೆ. ಶೂದ್ರ, ದಲಿತ ಹುಡುಗರಿಗೆ ಹಿಂದುತ್ವದ ನಶೆ ಏರಿಸಿ ಸೆಕ್ಯುರಿಟಿ ಗಾರ್ಡ್ ತರ ಅದು ಬಳಸಿಕೊಂಡು ಬಿಸಾಕುತ್ತದೆ ಎಂದು ನೋವಿನಿಂದ ಹೇಳಿದರು.

ಬಾಬಾ ಬುಡಾನ್‌ಗಿರಿ ಹೋರಾಟಕ್ಕಾಗಿ ನಾವು ಮಲೆನಾಡಿಗೆ ಓಡಾಡುವಾಗ ಸಿ.ಟಿ. ರವಿ, ಸುನಿಲ್ ಕುಮಾರಗಿಂತ ಮಹೇಂದ್ರಕುಮಾರ್ ಹೆಸರು ಜೋರಾಗಿ ಕೇಳಿ ಬರುತ್ತಿತ್ತು. ನಳಿನ್‌ಕುಮಾರ್ ಕಟೀಲು ಕೂಡ ಮಹೇಂದ್ರರ ಹಿಂಬಾಲಕರಾಗಿ ಓಡಾಡುತ್ತಿದ್ದರು. ಮುಂದೆ ಅವರೇನಾದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
 ಮಹೇಂದ್ರ ಕುಮಾರ್‌ಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಹಲವಾರು ಬಾನಗಡಿಗಳು ಮತ್ತು ಗುಟ್ಟಿನ ಸಂಗತಿಗಳು ಗೊತ್ತಿದ್ದವು. ವಿಶೇಷವಾಗಿ ಹಿಂದುತ್ವದ ಆವೇಶ ಪೂರ್ಣ ಭಾಷಣವನ್ನು ಮಾಡುತ್ತಲೇ ಬೀದಿಯ ಮೇಲಿದ್ದ ಕೆಲ ನಾಯಕರು ಹೇಗೆ ಕೋಟ್ಯಧೀಶರಾದರು.ಹೇಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡರು ಎಂಬ ವಿವರ ಮಹೇಂದ್ರ ಬಳಿ ಇತ್ತು. ಇದನ್ನು ಬಹಿರಂಗ ಪಡಿಸುವುದಾಗಿ, ಪುಸ್ತಕ ಬರೆಯುವುದಾಗಿ ಅವರು ಹೇಳುತ್ತಿದ್ದರು. ಆದರೆ ಆ ಗುಟ್ಟನ್ನು ರಟ್ಟು ಮಾಡದೇ ನಿರ್ಗಮಿಸಿದರು.

ಮಹೇಂದ್ರಕುಮಾರ್ ತುಂಬ ಭಾವುಕ ಮನುಷ್ಯ, ನೆನಪಾದಾಗಲೆಲ್ಲ, ಫೋನ್ ಮಾಡಿ ತಮ್ಮ ವಿಚಾರ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ತಮ್ಮ ಆರೋಗ್ಯದ ಬಗೆಗೂ ಅವರು ನಿರ್ಲಕ್ಷ ಧೋರಣೆ ತಾಳಿದ್ದರು. ಅವರು ಕೊಂಚ ಎಚ್ಚರ ವಹಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಕೇರಳದಲ್ಲಿ ಆರೆಸ್ಸೆಸ್‌ನಿಂದ ಹೊರಗೆ ಬಂದ ಸುದೀಶ ವಿನ್ನಿ ನರಕದ ಗರ್ಭಗುಡಿಯಿಂದ ಪುಸ್ತಕ ಬರೆದಂತೆ ನೀವೂ ಬರೆಯಿರಿ ಎಂದು ಹೇಳಿದಾಗ ಅದಕ್ಕಿಂತ ದೊಡ್ಡ ಹಗರಣದ ಕತೆಗಳು ನನ್ನ ಬಳಿ ಇವೆ.ಬರೆದರೆ ಅವರು ಮುಖ ಎತ್ತಿಕೊಂಡು ತಿರುಗಾಡುವಂತಿಲ್ಲ ಎಂದು ನನ್ನ ಬಳಿ ಹೇಳಿದ್ದರು.ಆದರೆ ಹೇಳದೇ ಕೇಳದೇ ಬಂದ ಸಾವು ಅವರನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿತು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News