ಕೊರೋನ ಮಧ್ಯೆಯೇ ಬಿಹಾರದಲ್ಲಿ ಎಇಎಸ್ ಮಾರಿಗೆ ಮತ್ತೊಂದು ಮಗು ಬಲಿ

Update: 2020-04-28 04:09 GMT
ಸಾಂದರ್ಭಿಕ ಚಿತ್ರ

ಪಾಟ್ನಾ, ಎ.28: ದೇಶಾದ್ಯಂತ ಕೊರೋನ ಅಟ್ಟಹಾಸ ಮುಂದುವರಿದಿರುವ ನಡುವೆಯೇ ಬಿಹಾರದಲ್ಲಿ ಮತ್ತೊಂದು ಮಗು ಅಕ್ಯೂಟ್ ಎನ್ಸೆಫಲಿಟೀಸ್ ಸಿಂಡ್ರೋಮ್ (ಎಇಎಸ್) ರೋಗಕ್ಕೆ ಬಲಿಯಾಗಿದೆ. ಮುಝಾಫರ್‌ಪುರದ ಎಸ್‌ಕೆಎಂಸಿಎಚ್ ಆಸ್ಪತ್ರೆಯಲ್ಲಿ ಮೂರು ವರ್ಷದ ಮಗು ಎಇಎಸ್ ಸಮಸ್ಯೆಯಿಂದ ಸೋಮವಾರ ಮೃತಪಟ್ಟಿದೆ. ಮಾರ್ಚ್ 30ರಂದು ಇಲ್ಲಿ ಎರಡು ವರ್ಷದ ಮಗು ಎಇಎಸ್‌ಗೆ ಬಲಿಯಾಗಿತ್ತು.

ಇದೇ ರೋಗಲಕ್ಷಣದ ನಾಲ್ವರು ಇತರ ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಎಸ್‌ಕೆಎಂಸಿಎಚ್ ಅಧೀಕ್ಷಕ ಡಾ.ಎಸ್.ಕೆ.ಶಶಿ ವಿವರಿಸಿದ್ದಾರೆ.

ಹಳ್ಳಿ ವೈದ್ಯರ ಚಿಕಿತ್ಸೆಯಿಂದ ಆರೋಗ್ಯಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಎಇಎಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವಳಿ ಮಕ್ಕಳನ್ನು ಎಪ್ರಿಲ್ 24ರಂದು ದಾಖಲಿಸಲಾಗಿತ್ತು. ಈ ಪೈಕಿ ಸುಖಿ ಕುಮಾರಿ ಸೋಮವಾರ ಕೊನೆಯುಸಿರೆಳೆದರೆ, ಅವಳಿ ಸಹೋದರಿ ಮೌಸಮ್ ಕುಮಾರಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮಕ್ಕಳ ತಂದೆ ಸುಖಲಾಲ್ ಸಹಾನಿ ಹೇಳಿದ್ದಾರೆ. ಎಪ್ರಿಲ್ 23ರಂದು ಗ್ರಾಮದ ಕೆರೆಯೊಂದರಲ್ಲಿ ಸ್ನಾನ ಮಾಡಿದ ಬಳಿಕ ಮಕ್ಕಳು ಅಸ್ವಸ್ಥವಾಗಿದ್ದರು.

2019ರಲ್ಲಿ ಎಇಎಸ್‌ನಿಂದ ಮುಝಾಫರ್‌ಪುರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದವು. ಈ ಮಧ್ಯೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಜಿಲ್ಲೆಯ 196 ಪಂಚಾಯ್ತಿಗಳನ್ನು ದತ್ತು ಪಡೆದು ಎಇಎಸ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನೈರ್ಮಲ್ಯೀಕರಣ ಆರಂಭಿಸಿದ್ದಾರೆ. ಎಇಎಸ್ ತಡೆ ನಿಟ್ಟಿನಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಶಂಕಿತ ರೋಗಿಗಳನ್ನು ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.

ಎಇಎಸ್‌ನಲ್ಲಿ ಮುಖ್ಯವಾಗಿ ಮಕ್ಕಳನ್ನು ತೀವ್ರ ಜ್ವರ ಕಾಡುವ ಜತೆಗೆ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯ ಕಂಡುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News