ರಕ್ಷಣಾ ಪಡೆಗಳ ಮುಖ್ಯಸ್ಥ ಹಾಗು ಎಲ್ಲಾ ಸೇನೆಗಳ ಮುಖ್ಯಸ್ಥರಿಂದ ಇಂದು ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ
ಹೊಸದಿಲ್ಲಿ: ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ, ಜನರಲ್ ಬಿಪಿನ್ ರಾವತ್ ಅವರು ಮೂರೂ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಇಂದು ಸಂಜೆ ಆರು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇಡೀ ದೇಶವೇ ಕೊರೋನವೈರಸ್ ಹಾವಳಿಯಿಂದಾಗಿ ಲಾಕ್ ಡೌನ್‍ನಲ್ಲಿರುವ ಇಂತಹ ಸಂದರ್ಭದಲ್ಲಿ ಈ ಪತ್ರಿಕಾಗೋಷ್ಠಿಯ ಆಯೋಜನೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಬಿಪಿನ್ ರಾವತ್ ಅವರು ನೇಮಕಗೊಂಡ ನಂತರ ಮೂರೂ ಸೇನಾ ಪಡೆಗಳ ಮುಖ್ಯಸ್ಥರ ಜತೆ ಸೇರಿ ಅವರು ನಡೆಸುವ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.
“ದೇಶವು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ ರಕ್ಷಣಾ ಪಡೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಸಾಧ್ಯವಾದಷ್ಟು ಮಟ್ಟಿಗೆ ಸರಕಾರ ಮತ್ತು ಜನರಿಗೆ ಬೆಂಬಲ ನೀಡಬೇಕಿದೆ,'' ಎಂದು ಅವರು ಹೇಳಿದ್ದರು. “ಶಿಸ್ತು ಮತ್ತು ಸಂಯಮ''ದಿಂದಾಗಿ ರಕ್ಷಣಾ ಪಡೆಗಳಿಗೆ ಕೊರೋನ ಹಾವಳಿಯನ್ನು ತಡೆಗಟ್ಟುವುದು ಸಾಧ್ಯವಾಗಿದೆ ಹಾಗೂ ಕೋವಿಡ್-19 ರಕ್ಷಣಾ ಪಡೆಗಳನ್ನು ಸೀಮಿತವಾಗಿ ಬಾಧಿಸಿದೆ,'' ಎಂದೂ ಅವರು ಹೇಳಿದ್ದರು.