"ಮದ್ಯ ಸೇವನೆಯಿಂದ ಗಂಟಲಿನಲ್ಲಿನ ಕೊರೋನವೈರಸ್ ನಾಶವಾಗಬಲ್ಲದು''
ಹೊಸದಿಲ್ಲಿ: ರಾಜಸ್ಥಾನದ ಸಂಗೋಡ್ ಕ್ಷೇತ್ರದ ಶಾಸಕ ಭರತ್ ಸಿಂಗ್ ಕುಂದನಪುರ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ತೆರೆಯಬೇಕೆಂದು ಕೋರಿದ್ದಾರೆ. ತಮ್ಮ ಈ ಬೇಡಿಕೆಗೆ ಅವರು ನೀಡುವ ಕಾರಣ ಅಚ್ಚರಿ ಮೂಡಿಸುತ್ತದೆ. ಮದ್ಯ ಸೇವನೆಯಿಂದ ಗಂಟಲಿನಲ್ಲಿರಬಹುದಾದ ಕೊರೋನವೈರಸ್ ನಾಶವಾಗುತ್ತದೆ ಎಂಬುದು ಸಿಂಗ್ ಅವರ ವಾದವಾಗಿದೆ.
"ಮದ್ಯ ಅಥವಾ ಆಲ್ಕೋಹಾಲ್ ನಮ್ಮ ಕೈಗಳಲ್ಲಿರುವ ವೈರಸ್ ಅನ್ನು ನಾಶ ಮಾಡಬಹುದಾದರೆ ಗಂಟಲಿನಲ್ಲಿರುವ ವೈರಸ್ ಅನ್ನೂ ನಾಶಗೊಳಿಸಬಹುದು,'' ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
"ಮದ್ಯದಂಗಡಿಗಳು ಮುಚ್ಚಿರುವುದರಿಂದ ರಾಜ್ಯಾದ್ಯಂತ ಮದ್ಯ ಕಾಳಸಂತೆಯಲ್ಲಿ ಮಾರಾಟವಾಗಲು ಆಸ್ಪದ ನೀಡಿದಂತಾಗಿದೆ. ಮದ್ಯದಂಗಡಿಗಳನ್ನು ತೆರೆದರೆ ಮದ್ಯಪ್ರಿಯರು ಕಳ್ಳಭಟ್ಟಿ ಕುಡಿದು ಸಾವನ್ನಪ್ಪುವುದೂ ತಪ್ಪುತ್ತದೆ ಹಾಗೂ ರಾಜ್ಯಕ್ಕೂ ಲಾಕ್ ಡೌನ್ ಸಂದರ್ಭ ಆದಾಯ ಲಭಿಸುತ್ತದೆ,'' ಎಂದು ಶಾಸಕ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.