ಸೈಕಲ್‌ನಲ್ಲಿ ಮನೆಯತ್ತ ತೆರಳುತ್ತಿದ್ದ ವಲಸೆ ಕಾರ್ಮಿಕ ಮೃತ್ಯು
ಲಕ್ನೊ, ಮೇ 2: ದಿಲ್ಲಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಧರ್ಮವೀರ್ ಕುಮಾರ್(28 ವರ್ಷ)ಇತರ ಆರು ಮಂದಿ ವಲಸಿಗರೊಂದಿಗೆ ಸೈಕಲ್‌ನಲ್ಲಿ ತನ್ನ ಊರಾದ ಬಿಹಾರದತ್ತ ಹೋಗುತ್ತಿದ್ದ ವೇಳೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ದಿಲ್ಲಿಯಿಂದ ಬಿಹಾರದ ಖಗಾರಿಯಾ ಜಿಲ್ಲೆಗೆ ತೆರಳುತ್ತಿದ್ದ ಕುಮಾರ್ ಉತ್ತರಪ್ರದೇಶದ ಸಹರಾನ್ಪುರ ಜಿಲ್ಲೆಯ ಕೊಟ್‌ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.
ಕಾರ್ಮಿಕನ ಸಾವಿಗೆ ಕಾರಣವೇನೆಂದು ಇನ್ನೂ ಖಚಿತವಾಗಿಲ್ಲ. ಕೊರೋನವೈರಸ್ ಪರೀಕ್ಷೆಗಾಗಿ 28ರ ಹರೆಯದ ಯುವಕನ ಸ್ಯಾಂಪಲ್‌ನ್ನು ಲಕ್ನೊ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
"ದಿಲ್ಲಿ-ಬರೇಲಿ ಹೈವೇಯ ಟೋಲ್‌ಪ್ಲಾಜಾದ ಬಳಿ ಶುಕ್ರವಾರ ಬೆಳಗ್ಗೆ ಕಾರ್ಮಿಕ ಮೃತಪಟ್ಟಿದ್ದಾನೆ. ದಿಲ್ಲಿಯಿಂದ ಸೈಕಲ್‌ನಲ್ಲಿ ಬಂದಿದ್ದ ಕಾರ್ಮಿಕರು ರಾತ್ರಿ ಟೋಲ್ ಪ್ಲಾಜಾದಲ್ಲಿ ಮಲಗಿದ್ದರು. ಹಗಲಿಡಿ ಸೈಕಲ್‌ನಲ್ಲಿ ಸಾಗಿಬಂದು ಸುಸ್ತಾಗಿ ಮಲಗಿದ್ದ ಏಳು ಕಾರ್ಮಿಕರ ಪೈಕಿ ಓರ್ವ ಬೆಳಗ್ಗೆ ಏಳಲಿಲ್ಲ. ಆಗ ಅವರು ಪೊಲೀಸರಿಗೆ ಕರೆ ಮಾಡಿದ್ದು, ನಾವು ಮಧ್ಯಪ್ರವೇಶಿಸಿದೆವು'' ಸರ್ಕಲ್ ಅಧಿಕಾರಿ(ನಗರ)ಪ್ರವೀಣ್ ಯಾದವ್ ತಿಳಿಸಿದ್ದಾರೆ.
ಓರ್ವ ಕಾರ್ಮಿಕನ ದಿಢೀರ್ ನಿಧನದ ಬಳಿಕ ಉಳಿದ ಕಾರ್ಮಿಕರನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಇಡಲಾಗಿದ್ದು, ಮೃತ ಕಾರ್ಮಿಕನ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಎಸ್‌ಎಚ್‌ಒ ಪರ್ವೇಶ್ ಕುಮಾರ್ ತಿಳಿಸಿದ್ದಾರೆ.