ಮುಸ್ಲಿಮರ ನಂತರ ಇದೀಗ ಸಿಖ್ಖರನ್ನು ‘ಕೊರೋನ ಹರಡುವವರು’ ಎನ್ನುತ್ತಿರುವ ಮಾಧ್ಯಮಗಳು, ಟ್ರೋಲ್ ಗಳು

Update: 2020-05-02 11:05 GMT

ಅಮೃತಸರ್: ಪಂಜಾಬ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿರುವ ಬೆಳವಣಿಗೆ ಮತೀಯ ಬಣ್ಣ ಪಡೆದುಕೊಂಡಿದೆ. ನಂದೇಡ್‍ ನಿಂದ ವಾಪಸಾದ ಸಿಖ್ ತೀರ್ಥಯಾತ್ರಿಗಳನ್ನು ಇದೀಗ ಕೆಲ ಮಾಧ್ಯಮಗಳು ಹಾಗೂ ಕೆಲ ಸಾಮಾಜಿಕ ಜಾಲತಾಣಿಗರು ದೂರುತ್ತಿದ್ದಾರೆ.

ಉದಾಹರಣೆಗೆ ಎಬಿಪಿ ನ್ಯೂಸ್ ಈ ಬೆಳವಣಿಗೆಗೆ ‘ಕೊರೋನ ವಿಸ್ಫೋಟ್' ಅಥವಾ ಕೊರೋನ ಸ್ಫೋಟ ಎಂದು ಬಣ್ಣಿಸಿದೆ. ತಬ್ಲೀಗಿ ಜಮಾತ್‍ ನಲ್ಲಿ ಭಾಗವಹಿಸಿದವರಿಂದ ಕೊರೋನ ಹರಡಿದೆ ಎಂದು `ಕೊರೋನ ಜಿಹಾದ್'  ಪದ ಬಳಕೆ ಮಾಡಿದಂತೆಯೇ ಈಗಲೂ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನಿಂದನೆ ಮುಂದುವರಿದಿದೆ.

ವರದಿಗಳ ಪ್ರಕಾರ ನಂದೇಡ್‍ ನಿಂದ ವಾಪಸಾದ 183 ತೀರ್ಥಯಾತ್ರಿಗಳು ಇಲ್ಲಿಯ ತನಕ ಕೋವಿಡ್-19 ಪಾಸಿಟಿವ್ ಆಗಿದ್ದಾರೆ. ಈ ಸಂಖ್ಯೆ ಪಂಜಾಬ್‍ನ ಒಟ್ಟು ಕೊರೋನ ಪ್ರಕರಣಗಳ ಪೈಕಿ ಮೂರನೇ ಒಂದಂಶದಷ್ಟಾಗಿದೆ.  ನಂದೇಡ್‍ನ ಹುಜೂರ್ ಸಾಹಿಬ್ ಗುರುದ್ವಾರದಲ್ಲಿ ಲಾಕ್ ಡೌನ್‍ನಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 4,000 ತೀರ್ಥಯಾತ್ರಿಗಳನ್ನು ವಾಪಸ್ ಕರೆತರಲು ಸರಕಾರ ಕ್ರಮ ಕೈಗೊಂಡಿತ್ತು.

ಆದರೆ ಮಹಾರಾಷ್ಟ್ರ ಸರಕಾರ ನೀಡಿದ ಮಾಹಿತಿಯಂತೆ ನಂದೇಡ್ ಜಿಲ್ಲೆಯಲ್ಲಿ ಇಲ್ಲಿಯ ತನಕ ಕೇವಲ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳಿವೆ. ಆದರೆ ಪಂಜಾಬ್‍ ಗೆ ಆಗಮಿಸಿದ ನಂತರ ಹಲವರು ಕೊರೋನ ಪಾಸಿಟಿವ್ ಆದರೆಂದರೆ ಮಹಾರಾಷ್ಟ್ರದಲ್ಲಿ ಅವರನ್ನು ಸೂಕ್ತವಾಗಿ ತಪಾಸಣೆ ನಡೆಸಲಾಗಿಲ್ಲವೇ ಎಂಬ ಪ್ರಶ್ನೆಯೂ ಇದೆ.

ದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದಲೇ ನಿಂದನೆಗಳನ್ನು ಮಾಡಲಾಗುತ್ತಿದೆ ಎಂದು ಅಕಾಲ್ ತಖ್ತ್‍ನ ಜಾತೆದಾರ್ ಗಿಯಾನಿ ಹರಪ್ರೀತ್ ಸಿಂಗ್  ಹೇಳುತ್ತಾರೆ. “ತಬ್ಲೀಗಿ ಜಮಾತ್ ನೆಪವಾಗಿಟ್ಟುಕೊಂಡು ಮುಸ್ಲಿಂ ಸಮುದಾಯವನ್ನು ದೂರಿದಂತೆ ಇದೀಗ ಸಿಖ್ ಸಮುದಾಯವನ್ನು ನಂದೇಡ್ ನೆಪವಾಗಿಟ್ಟುಕೊಂದು ದೂಷಿಸಲಾಗುತ್ತಿದೆ. ಇದೊಂದು ಸಂಚು'' ಎಂದು ಅವರು ಹೇಳುತ್ತಾರೆ.

“ನಂದೇಡ್‍ನಲ್ಲಿ ಕೇವಲ 3 ಕೊರೋನ ಪಾಸಿಟಿವ್ ಪ್ರಕರಣ ಇತ್ತೆಂದಾದರೆ ಇವರೆಲ್ಲರೂ ಪಂಜಾಬ್‍ ಗೆ ಆಗಮಿಸಿದ ಕೂಡಲೇ ಹೇಗೆ ಕೊರೋನ ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಆದರು?'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News