ಪುಲ್ವಾಮದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಹಿಝ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೇರಿ ಮೂವರು ಉಗ್ರರು ಹತ

Update: 2020-05-06 14:51 GMT

ಶ್ರೀನಗರ,ಮೇ 6: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬೇಗ್‌ಪುರ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸೇನೆ ಮತ್ತು ಪೊಲೀಸರ ಜಂಟಿ ತಂಡವು ನಡೆಸಿದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಕಾಶ್ಮೀರದ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರಲ್ಲೋರ್ವನಾಗಿದ್ದ ಹಿಝ್ಬುಲ್ ಮುಝಾಹಿದೀನ್ ಕಮಾಂಡರ್ ರಿಯಾಝ್ ನೈಕೂ (32) ಮತ್ತು ಆತನ ಸಹಚರ ಕೊಲ್ಲಲ್ಪಟ್ಟಿದ್ದಾರೆ.

ಬೇಗ್‌ಪುರ ಸೇರಿದಂತೆ ದಕ್ಷಿಣ ಕಾಶ್ಮೀರದ ಮೂರು ಕಡೆಗಳಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು,ಪುಲ್ವಾಮಾ ಜಿಲ್ಲೆಯ ಪಾಂಪುರ ಪ್ರದೇಶದ ಶರ್ಶಾಲಿ ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ.

ಬೇಗ್‌ಪುರ ಪ್ರದೇಶದಲ್ಲಿ ಬೆಳಿಗ್ಗೆ ಒಂಭತ್ತು ಗಂಟೆಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ವಿನಿಮಯ ಆರಂಭಗೊಳ್ಳುತ್ತಿದ್ದಂತೆ ಕಾಶ್ಮೀರ ಕಣಿವೆಯ ಎಲ್ಲ ಹತ್ತೂ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ತನ್ನ ತಲೆಯ ಮೇಲೆ 12 ಲ.ರೂ.ಗಳ ಬಹುಮಾನವನ್ನು ಹೊತ್ತಿದ್ದ ನೈಕೂ ಹಿಝ್ಬುಲ್‌ನ ನಾಯಕತ್ವ ವಹಿಸಿಕೊಂಡಾಗಿನಿಂದ ಭಾರತದ ಮುಖ್ಯ ಗುರಿಯಾಗಿದ್ದ.

2016,ಜುಲೈನಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದ ಹಿಝ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಬಳಿಕ ನೈಕೂ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಎಂದು ಜಮ್ಮು-ಕಾಶ್ಮೀರದ ಮಾಜಿ ಡಿಜಿಪಿ ಎಸ್.ಪಿ.ವೈದ್ ತಿಳಿಸಿದರು.

ದ.ಕಾಶ್ಮೀರ ಸಂಜಾತ ನೈಕೂ ಗಣಿತ ಶಿಕ್ಷಕನಾಗಿದ್ದು, 2012ರಲ್ಲಿ ಭಯೋತ್ಪಾದನೆಯ ಮಾರ್ಗವನ್ನು ತುಳಿದಿದ್ದ. ಭಯೋತ್ಪಾದನೆ ಸಂಬಂಧಿತ 11 ಪ್ರಕರಣಗಳಲ್ಲಿ ಬೇಕಾಗಿದ್ದ ಆತ ಹಿಝ್ಬುಲ್ ಕಮಾಂಡರ್ ಯಾಸೀನ್ ಇಟ್ಟೂ ಸೆಪ್ಟೆಂಬರ್ 2017ರಲ್ಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಬಳಿಕ ಕಾಶ್ಮೀರದಲ್ಲಿ ಹಿಝ್ಬುಲ್‌ನ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ.

ಕಾಶ್ಮೀರಿ ಯುವಕರನ್ನು ಪ್ರಚೋದಿಸಿ ಹಿಝ್ಬುಲ್‌ಗೆ ಸೇರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ನೈಕೂ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ)ಗಳ ಹತ್ಯೆ ಮತ್ತು ರಾಜೀನಾಮೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಕಳೆದೊಂದು ತಿಂಗಳಿನಿಂದ ಸೇನಾಧಿಕಾರಿಗಳು ಸೇರಿದಂತೆ ಭದ್ರತಾ ಪಡೆಗಳ ಕನಿಷ್ಠ 22 ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News