ಮಹಾರಾಷ್ಟ್ರದಲ್ಲಿ ಕೊರೋನ ವೈರಸ್ ಸ್ಥಿತಿ ಕಳವಳಕಾರಿ: ಕೇಂದ್ರ ಸಚಿವ ಹರ್ಷವರ್ಧನ

Update: 2020-05-06 14:54 GMT

ಹೊಸದಿಲ್ಲಿ,ಮೇ 6: ಮಹಾರಾಷ್ಟ್ರದಲ್ಲಿ ಕೋವಿಡ್-19 ಸ್ಥಿತಿಯು ತೀವ್ರ ಕಳವಳಕಾರಿಯಾಗಿದ್ದು,ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರು ಬುಧವಾರ ಇಲ್ಲಿ ತಿಳಿಸಿದರು.

ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ 34 ಜಿಲ್ಲೆಗಳು ಕೊರೋನ ವೈರಸ್ ಪೀಡಿತವಾಗಿದ್ದು,ಇದು ಖಂಡಿತವಾಗಿಯೂ ಕಳವಳಕಾರಿ ವಿಷಯವಾಗಿದೆ. ರಾಜ್ಯದಲ್ಲಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮುಂದಿನ ಕ್ರಮಗಳ ಬಗ್ಗೆ ತಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಹರ್ಷವರ್ಧನ ಅವರು, ಕೊರೋನ ವೈರಸ್ ಪೀಡಿತ 34 ಜಿಲ್ಲೆಗಳ ಪೈಕಿ ಮುಂಬೈ,ಪುಣೆ,ಥಾಣೆ,ನಾಗಪುರ,ನಾಶಿಕ್,ಔರಂಗಾಬಾದ್ ಮತ್ತು ಸೋಲಾಪುರ ಜಿಲ್ಲೆಗಳು ಹೆಚ್ಚಿನ ಕಳವಳವನ್ನುಂಟು ಮಾಡಿವೆ ಎಂದರು.

‘ಮಹಾರಾಷ್ಟ್ರದಲ್ಲಿ ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗದಂತೆ ನೋಡಿಕೊಳ್ಳುವುದು ಕೇಂದ್ರದ ಉದ್ದೇಶವಾಗಿದೆ. ನನಗೆ ತಿಳಿದಿರುವಂತೆ ರಾಜ್ಯದಲ್ಲಿ ಸದ್ಯ 1,026 ಕಂಟೈನ್‌ಮೆಂಟ್ ಝೋನ್‌ಗಳಿವೆ. ಕೇಂದ್ರದ ತಂಡಗಳು ಮತ್ತು ವೈದ್ಯರನ್ನು ಅಲ್ಲಿ ನಿಯೋಜಿಸಲಾಗಿದೆ. ಅಗತ್ಯಕ್ಕನುಗುಣವಾಗಿ ಮಹಾರಾಷ್ಟ್ರಕ್ಕೆ ಇನ್ನಷ್ಟು ನೆರವನ್ನು ನಾವು ಒದಗಿಸುತ್ತೇವೆ’ ಎಂದು ಸಚಿವರು ತಿಳಿಸಿದರು.

 ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಂತೆ ಬುಧವಾರ ಬೆಳಿಗ್ಗೆಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 15,525 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು,617 ಜನರು ಮೃತಪಟ್ಟಿದ್ದಾರೆ. 2,819 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News