ತಮ್ಮ ಗುವಾಹಟಿ ಸಂಗೀತ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಿಗೆ ಸಮರ್ಪಿಸಿದ ದಿಲ್ಜಿತ್ ದೊಸಾಂಜ್
ಹೊಸದಿಲ್ಲಿ: ಪಂಜಾಬ್ ನ ಖ್ಯಾತ ಗಾಯಕ ದಿಲ್ಜಿತ್ ದೊಸಾಂಜ್ ಗುವಾಹಟಿಯಲ್ಲಿ ನಡೆದ ತಮ್ಮ ಸಂಗೀತ ಕಾರ್ಯಕ್ರಮವನ್ನು ಡಿಸೆಂಬರ್ 26ರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಮರ್ಪಿಸಿದ್ದಾರೆ.
ರವಿವಾರ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ತಮ್ಮ ಸಂಗೀತ ಕಚೇರಿಯ ವಿಡಿಯೊವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ನಟ, ಗಾಯಕ ದಿಲ್ಜಿತ್ ದೊಸಾಂಜ್, ಜನರು ಡಾ. ಮನಮೋಹನ್ ಸಿಂಗ್ ಅವರಿಂದ ಪಾಠ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
“ಇಂದಿನ ಸಂಗೀತ ಕಚೇರಿಯನ್ನು ಮನಮೋಹನ್ ಸಿಂಗ್ ಅವರಿಗೆ ಸಮರ್ಪಿಸಲಾಯಿತು” ಎಂಬ ಶೀರ್ಷಿಕೆ ಹೊಂದಿರುವ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ.
ಆ ವಿಡಿಯೊ ತುಣುಕಿನಲ್ಲಿ, ತಮ್ಮ ಬಗ್ಗೆ ಬೇರೆ ಯಾರಾದರೂ ಕೆಟ್ಟ ಮಾತನಾಡಿದರೂ, ಮನಮೋಹನ್ ಸಿಂಗ್ ಮಾತ್ರ ಯಾರ ಬಗ್ಗೆಯೂ ಕೆಟ್ಟ ಮಾತನಾಡುತ್ತಿರಲಿಲ್ಲ ಎಂದು ಅವರು ಸ್ಮರಿಸಿದ್ದಾರೆ.
“ಅವರು ತುಂಬ ಸರಳ ಜೀವನ ನಡೆಸಿದರು. ನಾನು ಅವರ ಬದುಕಿನ ಪಯಣದತ್ತ ನೋಡಿದರೆ, ಅದು ತುಂಬಾ ಸರಳವಾಗಿದೆ. ಅವರ ಬಗ್ಗೆ ಬೇರೆ ಯಾರೇ ಕೆಟ್ಟದಾಗಿ ಮಾತನಾಡಿದರೂ, ಅವರು ಮಾತ್ರ ಯಾರ ಬಗ್ಗೆಯೂ ಅದೇ ಧಾಟಿಯಲ್ಲಿ ಮಾತನಾಡುತ್ತಿರಲಿಲ್ಲ. ರಾಜಕಾರಣದಲ್ಲಿ ಅದನ್ನು ನಿಯಂತ್ರಿಸಿಕೊಳ್ಳುವುದು ತುಂಬಾ ಕಠಿಣ ಕೆಲಸ” ಎಂದೂ ಅವರು ಹೇಳಿದ್ದಾರೆ.
“ನೀವು ಆ ಲೋಕಸಭಾ ಅಧಿವೇಶನಗಳನ್ನು ಎಂದಾದರೂ ನೋಡಿದ್ದೀರಾ? ನಮ್ಮ ರಾಜಕಾರಣಿಗಳು ತಾವು ನರ್ಸರಿ ಮಕ್ಕಳೇನೋ ಎಂಬಂತೆ ಕಿತ್ತಾಡುತ್ತಾರೆ. ಆದರೆ, ಅವರೆಂದೂ ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿರಲಿಲ್ಲ ಎಂಬುದು ನಾವು ಮನಮೋಹನ್ ಸಿಂಗ್ ಅವರಿಂದ ಕಲಿಯಬೇಕಾದ ಪಾಠವಾಗಿದೆ” ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಹಾಗೂ 2004ರಿಂದ 2014ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಮನಮೋಹನ್ ಸಿಂಗ್, ತಮ್ಮ 92ನೇ ವಯಸ್ಸಿನಲ್ಲಿ ಕಳೆದ ಗುರುವಾರ ನಿಧನರಾಗಿದ್ದರು.