ಆಂಧ್ರಪ್ರದೇಶ | ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ವಿದ್ಯುತ್ ಕಂಬವೇರಿ ತಂತಿಗಳ ಮೇಲೆ ಮಲಗಿಕೊಂಡ ಕುಡುಕ!

Update: 2025-01-02 12:44 GMT

PC : X 

ವಿಶಾಖಪಟ್ಟಣಂ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಮದ್ಯವ್ಯಸನಿಯೊಬ್ಬ ವಿದ್ಯುತ್ ಕಂಬವೇರಿ ತಂತಿಗಳ ಮೇಲೆ ಮಲಗಿಕೊಂಡಿರುವ ವಿಚಿತ್ರ ಘಟನೆ ಮಂಗಳವಾರ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲ್ ನ ಎಂ.ಸಿಂಗಾಪುರಂನಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಆದರೆ, ಗ್ರಾಮಸ್ಥರು ಸಕಾಲದಲ್ಲಿ ವಿದ್ಯುತ್ ಪರಿವರ್ತಕದ ವಿದ್ಯುತ್ ಸಂಪರ್ಕವನ್ನು ತುಂಡರಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ವರದಿಗಳ ಪ್ರಕಾರ, ಕೆ.ವೆಂಕಣ್ಣ ಎಂಬ ಮದ್ಯವ್ಯಸನಿ ಮಂಗಳವಾರ ತನ್ನ ತಾಯಿ ತನ್ನ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತವನ್ನು ತನಗೆ ನೀಡಲು ನಿರಾಕರಿಸಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಹೊಸ ವರ್ಷಾಚರಣೆಯ ಅಂಗವಾಗಿ ಹೆಚ್ಚು ಮದ್ಯಸೇವನೆ ಮಾಡಲು ಆತ ತನ್ನ ತಾಯಿಯಿಂದ ಹಣ ಕೇಳಿದ್ದ ಎಂದು ಹೇಳಲಾಗಿದೆ.

ವೆಂಕಣ್ಣನ ಕೃತ್ಯದಿಂದ ಗ್ರಾಮಸ್ಥರು ಗಾಬರಿಗೊಳಗಾಗಿದ್ದು, ಆತ ವಿದ್ಯುತ್ ಕಂಬದಿಂದ ಕೆಳಗೆ ಬೀಳಬಹುದು ಎಂದು ಶಂಕಿಸಿದ್ದಾರೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ನಂತರ, ಆತನನ್ನು ಕಂಬದಿಂದ ಕೆಳಗಿಳಿಯುವಂತೆ ಅವರು ಮನವಿ ಮಾಡಿದ್ದಾರೆ. ವೆಂಕಣ್ಣ ವಿದ್ಯುತ್ ತಂತಿಯ ಮೇಲೆ ಕೆಲ ಕಾಲ ಅಂಗಾತ ಮಲಗಿಕೊಂಡಾಗ ಗ್ರಾಮಸ್ಥರು ಮತ್ತಷ್ಟು ಗಾಬರಿಗೊಳಗಾಗಿದ್ದಾರೆ. ಅವರು ಪದೇ ಪದೇ ಮನವಿ ಮಾಡಿದ ನಂತರವಷ್ಟೇ ಆತ ವಿದ್ಯುತ್ ಕಂಬದಿಂದ ಕೆಳಗಿಳಿದು ಬಂದಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ವೆಂಕಣ್ಣನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೆಂಕಣ್ಣನನ್ನು ಆತನ ಅಪಾಯಕಾರಿ ಸಾಹಸದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ನಾನು ಔಷಧಿಗಾಗಿ ನನ್ನ ತಾಯಿಯ ಬಳಿ ಹಣ ಕೇಳಿದೆ. ಆದರೆ, ಆಕೆ ನಿರಾಕರಿಸಿದ್ದರಿಂದ ಬೇಸರಗೊಂಡು, ಪ್ರತಿಭಟನಾರ್ಥವಾಗಿ ವಿದ್ಯುತ್ ತಂತಿಯ ಮೇಲೇರಿ ಕುಳಿತುಕೊಳ್ಳಲು ನಿರ್ಧರಿಸಿದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾನೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News