ದಿಲ್ಲಿ ವಿಧಾನಸಭಾ ಚುನಾವಣೆ | ಹೈಟೆಕ್ ಆಗಲಿರುವ ಪಕ್ಷಗಳ ಚುನಾವಣಾ ಪ್ರಚಾರ

Update: 2025-01-04 16:25 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕೃತಕ ಬುದ್ಧಿಮತ್ತೆಯ ಮೊರೆ ಹೋಗಿರುವ ರಾಜಕೀಯ ಪಕ್ಷಗಳು, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೃಜನಶೀಲ ಜಾಹೀರಾತುಗಳು ಹಾಗೂ ತುಣುಕುಗಳನ್ನು ಬಳಸಿಕೊಂಡು ತಮ್ಮ ನಾಯಕರನ್ನು ಹೀರೋಗಳಂತೆ ಬಿಂಬಿಸಲು ಹಾಗೂ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ತೀಕ್ಷ್ಣ ವ್ಯಂಗ್ಯದ ಬಾಣ ಹೂಡಲು ಮುಂದಾಗಿವೆ ಎಂದು ವರದಿಯಾಗಿದೆ.

ಅರವಿಂದ್ ಕೇಜ್ರಿವಾಲ್ ರನ್ನು ದಿಲ್ಲಿಯ ಪುತ್ರನೆಂದು ಬಿಂಬಿಸಲು ಮುಂದಾಗಿರುವ ಆಡಳಿತಾರೂಢ ಆಪ್ ಪಕ್ಷವು, ಅವರನ್ನು ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ (GOAT) ಎಂದು ತನ್ನ ಚುನಾವಣಾ ಪ್ರಚಾರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸೃಜನಶೀಲವಾಗಿ ಬಳಸಿಕೊಂಡು ಬಣ್ಣಿಸುತ್ತಿದೆ.

ಮತ್ತೊಂದೆಡೆ, ತನ್ನ ಕೃತಕ ಬುದ್ಧಿಮತ್ತೆ ಚಾಲಿತ ವೀಡಿಯೊಗಳು ಹಾಗೂ ಭಿತ್ತಿ ಚಿತ್ರಗಳಲ್ಲಿ ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಗೆ ಅಸಲಿ ವಂಚಕ ಎಂಬ ಹಣೆಪಟ್ಟಿ ಹಚ್ಚಿದೆ.

ಇಂತಹ ಒಂದು ನಿದರ್ಶನದಲ್ಲಿ, ಅಮಿತಾಭ್ ಬಚ್ಚನ್ ನಟನೆಯ ‘ಬಾಘ್ಬನ್’ ಚಿತ್ರದಲ್ಲಿ ಎಲ್ಲ ತ್ಯಾಗಗಳನ್ನು ಮಾಡಿದರೂ ತಮ್ಮ ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗುವ ಪೋಷಕರ ದೃಶ್ಯಾವಳಿಯನ್ನು ಬಳಸಿಕೊಂಡು, ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಪುತ್ರನಾಗಿದ್ದು, ಅವರೆಂದೂ ತನ್ನ ಜನರನ್ನು ಅನಾಥರನ್ನಾಗಿಸುವುದಿಲ್ಲ ಎಂದು ಬಿಂಬಿಸಲಾಗಿದೆ.

ದಿಲ್ಲಿ ಬಿಜೆಪಿಯ ಎಕ್ಸ್ ಖಾತೆಯೂ ಹಲವಾರು ವೀಡಿಯೊ ತುಣುಕುಗಳನ್ನು ಹೊಂದಿದ್ದು, ಇವುಗಳಲ್ಲಿ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಅತಿಶಿ ಇದ್ದಾರೆ.

ಅಂತಹ ಒಂದು ವೀಡಿಯೊದಲ್ಲಿ, ಒಂದು ವೇಳೆ ಚುನಾವಣೆಯಲ್ಲಿ ಮರು ಆಯ್ಕೆಯಾದರೆ, ಹಿಂದೂ ದೇವಾಲಯಗಳ ಅರ್ಚಕರು ಹಾಗೂ ಗುರುದ್ವಾರದ ಗ್ರಂಥೀಸ್ ಗಳಿಗೆ ಮಾಸಿಕ 18,000 ರೂ. ಭತ್ಯೆ ನೀಡಲಾಗುವುದು ಎಂಬ ಅರವಿಂದ್ ಕೇಜ್ರಿವಾಲ್ ರ ಪ್ರಕಟಣೆಯನ್ನು ಅತಿಶಿ ಪ್ರಶಂಸಿಸುತ್ತಿರುವುದು ಕಂಡು ಬರುತ್ತದೆ.

ಆ ವೀಡಿಯೊದಲ್ಲಿ, “ನೀವೇನೂ ಪ್ರಕಟಿಸಿದ್ದೀರಾ, ಅದರಿಂದ ಎಲ್ಲರಿಗೂ ಸಂತೋಷವಾಗಲಿದೆ” ಎಂದು ಅತಿಶಿ ಹೇಳುತ್ತಿರುವುದು ಕೇಳಿ ಬರುತ್ತದೆ. ಅದಕ್ಕೆ ಪ್ರತಿಯಾಗಿ, “ಹೌದು, ಈಗ ಅವರು ನನ್ನನ್ನು ಹಿಂದೂ ವಿರೋಧಿ ಎಂದು ಕರೆಯುವುದಿಲ್ಲ” ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ. ಮುಂದುವರಿದು, “ದಿಲ್ಲಿಯ ಜನರು ಮುಗ್ಧರಾಗಿದ್ದು, ಈ ಯೋಜನೆಯು ಚುನಾವಣಾ ಗಿಮಿಕ್ ಆಗಿದೆ. ಚುನಾವಣೆ ಮುಗಿದ ಕೂಡಲೇ ಭರವಸೆಯೂ ಅಂತ್ಯಗೊಳ್ಳಲಿದೆ” ಎಂದು ಹೇಳುವುದೂ ಈ ವೀಡಿಯೊದಲ್ಲಿ ಕಂಡು ಬರುತ್ತದೆ.

ಎಕ್ಸ್ ವೇದಿಕೆಯು ರಾಜಕೀಯ ಪಕ್ಷಗಳ ಯುದ್ಧ ರಂಗವಾಗಿ ಮಾರ್ಪಟ್ಟಿದ್ದು, ಮತದಾರರನ್ನು ತಮ್ಮತ್ತ ಆಕರ್ಷಿಸಲು ವಿವಿಧ ಬಗೆಯ ತಿರುವುಗಳನ್ನು ಬಳಸತೊಡಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News