ಅಮೆರಿಕ ರೂಪದರ್ಶಿಯ ಸೋಗು ಹಾಕಿ ಡೇಟಿಂಗ್ ಆ್ಯಪ್ ನಲ್ಲಿ 700 ಮಹಿಳೆಯರಿಗೆ ವಂಚಿಸಿದ ದಿಲ್ಲಿಯ ವ್ಯಕ್ತಿ!
ಹೊಸದಿಲ್ಲಿ: ಅಮೆರಿಕ ರೂಪದರ್ಶಿಯ ಸೋಗು ಹಾಕಿ ಡೇಟಿಂಗ್ ಆ್ಯಪ್ ನಲ್ಲಿ ಸುಮಾರು 700 ಮಂದಿಗೆ ವಂಚಿಸಿದ್ದ ದಿಲ್ಲಿ ಮೂಲದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಪೂರ್ವ ದಿಲ್ಲಿಯ ಶಕರ್ ಪುರ್ ನಿಂದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು 23 ವರ್ಷದ ತುಷಾರ್ ಸಿಂಗ್ ಬಿಷ್ತ್ ಎಂದು ಗುರುತಿಸಲಾಗಿದ್ದು, ಆತ ಉತ್ತರ ಪ್ರದೇಶದ ನೊಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನೇಮಕಾತಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಬೆಳಗಿನ ಹೊತ್ತು ಉದ್ಯೋಗ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆತ, ರಾತ್ರಿ ಹೊತ್ತು ಭಾರತ ಪ್ರವಾಸ ಮಾಡುತ್ತಿರುವ ಅಮೆರಿಕ ರೂಪದರ್ಶಿಯಾಗಿ ಬದಲಾಗುತ್ತಿದ್ದ. ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದ ಸುಮಾರು 700 ಮಹಿಳೆಯರಿಗೆ ವಂಚನೆ ಹಾಗೂ ಬ್ಲ್ಯಾಕ್ ಮೇಲ್ ಮೂಲಕ, ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ದಿಲ್ಲಿ ನಿವಾಸಿಯಾದ ತುಷಾರ್, ಬಿಬಿಎ ಪದವೀಧರನಾಗಿದ್ದಾನೆ. ಕಳೆದ ಮೂರು ವರ್ಷಗಳಿಂದ ನೊಯ್ಡಾದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ತಾಂತ್ರಿಕ ಉದ್ಯೋಗ ನೇಮಕಾತಿ ಅಧಿಕಾರಿಯಾಗಿ ಉದ್ಯೋಗ ಮಾಡುತ್ತಿದ್ದಾನೆ. ಆತನ ತಂದೆ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ ಹಾಗೂ ಸಹೋದರಿ ಗುರುಗ್ರಾಮದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ತನಗೆ ಸ್ಥಿರ ಉದ್ಯೋಗ ಇರುವ ಹೊರತಾಗಿಯೂ ಮಹಿಳೆಯರೆಡೆಗಿನ ಆಕರ್ಷಣೆ ಮತ್ತು ವಾಂಛೆಯಿಂದ ಪ್ರೇರೇಪಿತನಾಗಿ ಸೈಬರ್ ಅಪರಾಧಕ್ಕಿಳಿದಿದ್ದ ಎಂದು ಹೇಳಲಾಗಿದೆ.
ಆ್ಯಪ್ ಒಂದರ ಮೂಲಕ ವರ್ಚುಯಲ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಖರೀದಿಸಿದ್ದ ತುಷಾರ್, ಬಂಬಲ್ ಹಾಗೂ ಸ್ನ್ಯಾಪ್ ಚಾಟ್ ನಂತಹ ಜನಪ್ರಿಯ ಡೇಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಆ್ಯಪ್ ಗಳಲ್ಲಿ ನಕಲಿ ಖಾತೆಯನ್ನು ತೆರೆದಿದ್ದ. ತನ್ನನ್ನು ತಾನು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಮೂಲದ ಹವ್ಯಾಸಿ ರೂಪದರ್ಶಿ ಎಂದು ಬಿಂಬಿಸಿಕೊಂಡಿದ್ದ ಆತ, ವಾಸ್ತವವಾಗಿ ಬ್ರೆಝಿಲ್ ರೂಪದರ್ಶಿಯೊಬ್ಬರ ಸೋಗಿನಲ್ಲಿ ಅವರ ಭಾವಚಿತ್ರಗಳು ಹಾಗೂ ಕತೆಗಳನ್ನು ಕದ್ದಿದ್ದ. ಆತನ ಪ್ರಾಥಮಿಕ ಗುರಿ 18-30 ವರ್ಷದ ಮಹಿಳೆಯರಾಗಿದ್ದು, ಆತ ಈ ಆ್ಯಪ್ ಗಳ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಒಮ್ಮೆ ಅವರ ವಿಶ್ವಾಸ ಗಳಿಸಿದ ನಂತರ, ಸ್ನೇಹದ ಸೋಗಿನಲ್ಲಿ ತುಷಾರ್ ಅವರ ಮೊಬೈಲ್ ನಂಬರ್, ಉದ್ರೇಕಕಾರಿ ಭಾವಚಿತ್ರಗಳು ಹಾಗೂ ವೀಡಿಯೊಗಳಿಗೆ ಮನವಿ ಮಾಡುತ್ತಿದ್ದ. ನಂತರ, ಸಂತ್ರಸ್ತರಿಗೆ ತಿಳಿಯದಂತೆ, ಅವರ ದೃಶ್ಯಾವಳಿಗಳನ್ನು ತನ್ನ ಮೊಬೈಲ್ ನಲ್ಲಿ ತೆಗೆದಿಟ್ಟುಕೊಳ್ಳುತ್ತಿದ್ದ. ಆರಂಭದಲ್ಲಿ ಇಂತಹ ಕೃತ್ಯಗಳನ್ನು ಮೋಜಿಗಾಗಿ ಮಾಡುತ್ತಿದ್ದ ತುಷಾರ್, ನಂತರ, ದಿನಗಳೆದಂತೆ ವ್ಯವಸ್ಥಿತ ಸುಲಿಗೆಯ ಯೋಜನೆಯನ್ನಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹಣಕ್ಕಾಗಿ ಈ ವೀಡಿಯೊಗಳನ್ನು ತೋರಿಸಿ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಒಂದು ವೇಳೆ ಸಂತ್ರಸ್ತ ಮಹಿಳೆಯೇನಾದರೂ ಹಣದ ಬೇಡಿಕೆಯನ್ನು ನಿರಾಕರಿಸಿದರೆ, ಅವರ ಉದ್ರೇಕಕಾರಿ ದೃಶ್ಯಗಳನ್ನು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಇಲ್ಲವೆ ಡಾರ್ಕ್ ವೆಬ್ ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ತುಷಾರ್ ಗೆ ಸಂಬಂಧಿಸಿದ ಎರಡು ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಿದ್ದಾರೆ. ಈ ಪೈಕಿ ಒಂದು ಖಾತೆಯು ಆತನ ಸಂತ್ರಸ್ತರು ಪಾವತಿ ಮಾಡಿರುವ ನಮೂದನ್ನು ಒಳಗೊಂಡಿದ್ದು, ಮತ್ತೊಂದು ಖಾತೆಯ ಕುರಿತು ತನಿಖೆ ಪ್ರಗತಿಯಲ್ಲಿದೆ.