ಹೆಚ್ಚಿಸಿದ ನೀರಿನ ಬಿಲ್ ಮನ್ನಾ: ಕೇಜ್ರಿವಾಲ್ ಭರವಸೆ
ಹೊಸದಿಲ್ಲಿ : ದಿಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಹೆಚ್ಚಿಸಿದ ನೀರಿನ ಬಿಲ್ ಮನ್ನಾ ಮಾಡಲಾಗುವುದು ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಭರವಸೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಲ್ಲಿ ಜಲ ಮಂಡಳಿ ಸಾವಿರ, ಲಕ್ಷ ರೂ. ಮೊತ್ತ ನೀರಿನ ಬಿಲ್ ಕಳುಹಿಸಿದೆ. ಹೆಚ್ಚಿಸಿದ ನೀರಿನ ಬಿಲ್ ಅನ್ನು ಪಾವತಿಸಬೇಡಿ ಎಂದು ಜನರನ್ನು ಆಗ್ರಹಿಸಿದ್ದಾರೆ.
ಆಪ್ ಸರಕಾರ ದಿಲ್ಲಿಯ ಮನೆಗಳಿಗೆ 20,000 ಲೀಟರ್ ನೀರನ್ನು ಉಚಿತವಾಗಿ ಪೂರೈಸಿದೆ. ಇದರಿಂದ 12 ಲಕ್ಷ ಕುಟುಂಬಗಳಿಗೆ ಪ್ರಯೋಜನ ಆಗಿವೆ ಎಂದು ಕೇಜ್ರಿವಾಲ್ ಹೇಳಿದರು.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ನಮ್ಮ ಸರಕಾರ ಕಳೆದ 10 ವರ್ಷಗಳಿಂದ ಜನರಿಗೆ ಉಚಿತವಾಗಿ ನೀರು ಪೂರೈಕೆ ಮಾಡುತ್ತಿತ್ತು. ಆದರೆ, ನಾನು ಜೈಲಿಗೆ ಹೋದ ಬಳಿಕ, ಈ ಜನರು ಏನು ಮಾಡಿದರು ಎಂದು ನನಗೆ ತಿಳಿದಿಲ್ಲ. ಅವರು ಏನೋ ತಪ್ಪು ಮಾಡಿದ್ದಾರೆ. ಜನರು ಸಾವಿರಾರು, ಲಕ್ಷಾಂತರ ರೂಪಾಯಿ ನೀರಿನ ಬಿಲ್ ಪಡೆಯಲು ಆರಂಭಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ತಮ್ಮ ನೀರಿನ ಬಿಲ್‌ಗಳು ತಪ್ಪಾಗಿವೆ ಎಂದು ಭಾವಿಸುವವರು ಬಿಲ್ ಪಾವತಿಸುವ ಅಗತ್ಯ ಇಲ್ಲ. ಅವರು ಕಾಯಬೇಕು ಎಂದು ನಾನು ಸಾರ್ವಜನಿಕವಾಗಿ ಹಾಗೂ ಅಧಿಕೃತವಾಗಿ ಘೋಷಿಸಲು ಬಯಸುತ್ತೇನೆ. ಚುನಾವಣೆಯ ನಂತರ ಆಪ್ ಸರಕಾರ ರಚಿಸಲಿದೆ ಹಾಗೂ ನಾವು ಅವರ ತಪ್ಪು ಬಿಲ್‌ಗಳನ್ನು ಮನ್ನಾ ಮಾಡಲಿದ್ದೇವೆ. ಇದು ಎಲ್ಲಾ ಜನರಿಗೆ ನನ್ನ ಭರವಸೆ. ಇದು ನನ್ನ ಗ್ಯಾರಂಟಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹೆಚ್ಚು ಮೊತ್ತದ ನೀರಿನ ಬಿಲ್ ಸ್ವೀಕರಿಸಿದ ಆಗ್ನೇಯ ದಿಲ್ಲಿಯ ಗೋವಿಂದ್ ಪುರಿಯ ನಿವಾಸಿಗಳನ್ನು ಭೇಟಿಯಾಗಿದ್ದರು. ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಅವರ ಭರವಸೆ ನೀಡಿದ್ದರು. ಅವರು ಒಂದು ಬಿಲ್ ಅನ್ನು ಹರಿದು ಎಸೆದಿದ್ದರು ಹಾಗೂ ತನ್ನ ಸರಕಾರ ನೀರಿನ ಬಿಲ್‌ನ ಒಂದೇ ಬಾರಿ ಪಾವತಿಸಲು ಯೋಜನೆಯೊಂದನ್ನು ಶೀಘ್ರದಲ್ಲಿ ಜಾರಿಗೆ ತರಲಿದೆ ಎಂದು ಭರವಸೆ ನೀಡಿದ್ದರು.
ನಗರದ ಸುಮಾರು 11 ಲಕ್ಷ ಕುಟುಂಬಗಳು ಹೆಚ್ಚಿನ ನೀರಿನ ಬಿಲ್‌ನ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದರು ಹಾಗೂ ಬಿಲ್ ಅನ್ನು ಮನ್ನಾ ಮಾಡಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದರು.