2006ರ ನಾಂದೇಡ್ ಸ್ಪೋಟ ಪ್ರಕರಣ : 9 ಆರೋಪಿಗಳು ಖುಲಾಸೆ
ಮುಂಬೈ: 2006ರ ನಾಂದೇಡ್ ಸ್ಪೋಟ ಪ್ರಕರಣದ ಎಲ್ಲಾ ಒಂಬತ್ತು ಆರೋಪಿಗಳನ್ನು ಮಹಾರಾಷ್ಟ್ರದ ನಾಂದೇಡ್ ನಲ್ಲಿರುವ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.
ನಾಂದೇಡ್ ನ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ ವಿ ಮರಾಠೆ ಅವರು, ಸ್ಪೋಟ ಪ್ರಕರಣದ ಎಲ್ಲಾ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಘಟನೆಯು ಬಾಂಬ್ ಸ್ಫೋಟ ಎಂದು ಪ್ರಾಸಿಕ್ಯೂಷನ್ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.
ನಾಂದೇಡ್ ಸ್ಪೋಟ ಪ್ರಕರಣದ ಒಟ್ಟು 12 ಆರೋಪಿಗಳ ಪೈಕಿ ಇಬ್ಬರು ಸ್ಫೋಟದಲ್ಲಿ ಮೃತಪಟ್ಟರೆ, ಇನ್ನೋರ್ವ ವಿಚಾರಣೆಯ ಸಮಯದಲ್ಲಿ ಮೃತಪಟ್ಟಿದ್ದ.
2006ರ ಏಪ್ರಿಲ್ 4 ಮತ್ತು 5ರ ಮಧ್ಯರಾತ್ರಿಯಲ್ಲಿ ನಾಂದೇಡ್ ನಗರದ ಆರೆಸ್ಸೆಸ್ ಕಾರ್ಯಕರ್ತ ಲಕ್ಷ್ಮಣ್ ರಾಜ್ಕೊಂಡ್ವಾರ್ ಎಂಬಾತನ ನಿವಾಸದಲ್ಲಿ ಸ್ಪೋಟ ಸಂಭವಿಸಿತ್ತು. ರಾಜ್ ಕೊಂಡ್ವಾರ್ ಪುತ್ರ ನರೇಶ್ ರಾಜ್ ಕೊಂಡ್ವಾರ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಹಿಮಾಂಶು ಪಾನ್ಸೆ ಸ್ಫೋಟದಲ್ಲಿ ಮೃತಪಟ್ಟಿದ್ದ. ಈ ಪ್ರಕರಣವನ್ನು ಆರಂಭದಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ತನಿಖೆ ನಡೆಸಿತ್ತು ನಂತರ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಗಿತ್ತು.