ಅಂಬೇಡ್ಕರ್ ಗೆ ಅಮಿತ್ ಶಾರಿಂದ ಅವಮಾನ: ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್

Update: 2025-01-04 16:19 GMT

ಪವನ್ ಖೇರಾ | PC : PTI 

ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನಿಸಿರುವುದರಿಂದ, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಕಟಿಸಿದೆ.

ಈ ಅಭಿಯಾನದಡಿ ಪ್ರತಿ ಜಿಲ್ಲೆಯಲ್ಲೂ ಸಭೆಗಳನ್ನು ಆಯೋಜಿಸಿ, ಬಿಜೆಪಿ ಮತ್ತು ಆರ್ಎಸ್ಎಸ್ ಹೇಗೆ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದೆ ಹಾಗೂ ಹಲವಾರು ದಶಕಗಳಿಂದ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂಬುದನ್ನು ಜನರಿಗೆ ತಿಳಿ ಹೇಳಲಾಗುವುದು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಜನವರಿ 3ರಂದು ಚಾಲನೆ ನೀಡಲಾಗಿದ್ದು, ಜನವರಿ 26ರಂದು ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ಸ್ಥಳವಾದ ಮಧ್ಯಪ್ರದೇಶದ ಮಹೋವ್ ನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಸಮಾರೋಪಗೊಳಿಸಲಾಗುವುದು. ಇದರೊಂದಿಗೆ ಸಂವಿಧಾನ ಹಾಗೂ ಗಣರಾಜ್ಯದ 75ನೇ ವಾರ್ಷಿಕ ಮಹೋತ್ಸವನ್ನೂ ಆಚರಿಸಲಾಗುವುದು ಎಂದು ಅವರು ಹೇಳಿದ್ದಾರೆ.

“ಪರಂಪರೆ ಹಾಗೂ ಮೌಲ್ಯಗಳನ್ನು ಕಾಪಾಡಲು ಜನವರಿ 26, 2025ರಿಂದ ಜನವರಿ 26, 2026ರವರೆಗೆ ‘ಸಂವಿಧಾನ ಬಚಾವೊ ರಾಷ್ಟ್ರೀಯ ಪಾದಯಾತ್ರೆ’ಯನ್ನು ಹಮ್ಮಿಕೊಳ್ಳುವ ಮೂಲಕ, ಗ್ರಾಮಗಳು ಹಾಗೂ ಪಟ್ಟಣಗಳನ್ನು ಐಕ್ಯತೆ ಮತ್ತು ಸಾಮಾಜಿಕ ನ್ಯಾಯದ ಪ್ರಬಲ ಸಂದೇಶದ ಮೂಲಕ ಜೋಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, “ಡಾ. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ವಜಾಗೊಳಿಸಬೇಕು ಎಂಬ ನಮ್ಮ ಆಗ್ರಹವನ್ನು ಪುನರುಚ್ಚರಿಸುತ್ತಿದ್ದೇವೆ” ಎಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪವನ್ ಖೇರಾ ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News