ರಾಜಸ್ಥಾನ | ಶೌಚಕ್ಕೆಂದು ಮನೆಯಿಂದ ಹೊರಗೆ ಬಂದಿದ್ದ ಯುವತಿಯನ್ನು ಅಪಹರಿಸಿ ಮೂವರಿಂದ ಸಾಮೂಹಿಕ ಅತ್ಯಾಚಾರ
ಜೈಪುರ: ಶೌಚಕ್ಕೆಂದು ಮನೆಯಿಂದ ಹೊರಗೆ ಬಂದಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದ ಡೀಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಕಮನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಬಾಲಕಿಯ ತಾಯಿ ದಾಖಲಿಸಿರುವ ದೂರಿನ ಪ್ರಕಾರ, ಮೂವರು ಬಂದೂಕುಧಾರಿಗಳು ನನ್ನ ಪುತ್ರಿಯನ್ನು ಡಿಸೆಂಬರ್ 29ರಂದು ಅಪಹರಿಸಿದ್ದರು ಎಂದು ಆರೋಪಿಸಲಾಗಿದೆ.
ಸಾಸಿವೆ ಹೊಲದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ಆ ಅಶ್ಲೀಲ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಘಟನೆಯನ್ನೇನಾದರೂ ಬಹಿರಂಗಗೊಳಿಸಿದರೆ, ಸದರಿ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ಬೆದರಿಸಿದ್ದಾರೆ ಎಂದು ಕಮನ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೀಶ್ ಶರ್ಮ ಹೇಳಿದ್ದಾರೆ.
ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರೊಬ್ಬರು ಬಾಲಕಿಯ ಆಕಂದ್ರನವನ್ನು ಕೇಳಿ, ಕೂಡಲೇ ನೆರವಿಗೆ ಧಾವಿಸಿದ್ದಾರೆ. ಆದರೆ, ಆರೋಪಿಗಳು ಘಟನಾ ಸ್ಥಳದಿಂದ ತಮ್ಮ ಮೋಟರ್ ಬೈಕ್ ಹಾಗೂ ಶೂಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುರುವಾರ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 362 ಹಾಗೂ 363ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಮನೀಶ್ ಶರ್ಮ ತಿಳಿಸಿದ್ದಾರೆ.