ಉಪವಾಸ ಸತ್ಯಾಗ್ರಹ | ರೈತ ನಾಯಕ ದಲ್ಲೆವಾಲ್ ರನ್ನು ಆಸ್ಪತ್ರೆಗೆ ಸ್ಥಳಾಂತರಿಸದ ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಹಿಂದಿನ ನಿರ್ದೇಶನಗಳ ಪ್ರಕಾರ ಆಸ್ಪತ್ರೆಗೆ ಸ್ಥಳಾಂತರಿಸದ ಪಂಜಾಬ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದರಿಂದ ಅವರು ಉಪವಾಸವನ್ನು ಮುರಿಯಬೇಕು ಎಂದು ಅರ್ಥವಲ್ಲ, ಅವರು ವೈದ್ಯಕೀಯ ನೆರವಿನೊಂದಿಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದ ಈ ಧೋರಣೆಯು ಸಾಮರಸ್ಯಕ್ಕೆ ವಿರುದ್ಧವಾಗಿದೆ ಮತ್ತು ವೈದ್ಯಕೀಯ ನೆರವಿನೊಂದಿಗೆ ಉಪವಾಸವನ್ನು ಮುಂದುವರಿಸಬಹುದು ಎಂದು ರಾಜ್ಯ ಸರಕಾರವು ದಲ್ಲೆವಾಲ್ ಗೆ ಮನವರಿಕೆ ಮಾಡಬೇಕು ಎಂದು ಹೇಳಿದೆ.
ನ್ಯಾಯಾಲಯದ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ತಪ್ಪು ಮಾಹಿತಿಯನ್ನು ಹರಡಿದ್ದಕ್ಕೆ ಮಾಧ್ಯಮಗಳು ಮತ್ತು ಅಧಿಕಾರಿಗಳನ್ನು ಇದೇ ವೇಳೆ ನ್ಯಾಯಮೂರ್ತಿಗಳು ದೂಷಿಸಿದ್ದಾರೆ.
ʼಸಂಧಾನಕಾರರು ದಲ್ಲೆವಾಲ್ ಅವರನ್ನು ವೈದ್ಯಕೀಯ ನೆರವು ಪಡೆಯುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆʼ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಈ ವೇಳೆ ಪೀಠದ ಗಮನಕ್ಕೆ ತಂದಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ನಾಯಕ ದಲ್ಲೆವಾಲ್ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅವರು ಹೇಳಿದ್ದರು.