1901ರಿಂದ ಅತ್ಯಂತ ತಾಪಮಾನದ ವರ್ಷವೆಂದು ದಾಖಲಾದ 2024
ಹೊಸದಿಲ್ಲಿ: 1901ರಿಂದೀಚಿಗೆ ಈವರೆಗೆ ಭಾರತದಲ್ಲಿ ದಾಖಲಾಗಿರುವ ಅತ್ಯಂತ ತಾಪಮಾನದ ವರ್ಷವಾಗಿ 2024 ಅಂತ್ಯಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ವರ್ಷದ ಕೊನೆಯ ಮೂರು ತಿಂಗಳುಗಳು(ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ) ಅತ್ಯಂತ ತಾಪಮಾನದ ತ್ರೈಮಾಸಿಕ ಎಂದು ದಾಖಲಾಗಿದ್ದರೆ,ಕಳೆದ 123 ವರ್ಷಗಳಲ್ಲಿಯೇ ಅತ್ಯಂತ ತಾಪಮಾನಕ್ಕೆ ಅಕ್ಟೋಬರ್ ತಿಂಗಳು ಸಾಕ್ಷಿಯಾಗಿತ್ತು ಎಂದು ಹೇಳಿದೆ.
2024ರ ವಾರ್ಷಿಕ ಸರಾಸರಿ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್‌ಗಳಷ್ಟಾಗಿದ್ದು,ಇದು ದೀರ್ಘಾವಧಿಯ (1991ರಿಂದ 2021ರವರೆಗೆ) ಸರಾಸರಿಗಿಂತ 0.65 ಡಿ.ಸೆ.ನಷ್ಟು ಅಧಿಕವಾಗಿತ್ತು. ಈ ಹಿಂದಿನ ಅತ್ಯಂತ ತಾಪಮಾನದ ವರ್ಷವಾಗಿದ್ದ 2016ರಲ್ಲಿ ವಾರ್ಷಿಕ ಸರಾಸರಿ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.54 ಡಿ.ಸೆ.ನಷ್ಟು ಅಧಿಕವಾಗಿತ್ತು. 2016 ಮತ್ತು 2024ರ ಸರಾಸರಿ ತಾಪಮಾನದ ನಡುವಿನ 0.11 ಡಿ.ಸೆ.ಅಂತರವು ಸಾಕಷ್ಟು ದೊಡ್ಡದಾಗಿದೆ.
ವಿಶ್ವಾದ್ಯಂತ ತಾಪಮಾನವು ಹೆಚ್ಚುತ್ತಿದ್ದಂತೆ ಭಾರತದಲ್ಲಿ ದಾಖಲೆಯ ತಾಪಮಾನವು ವಿಶ್ವಾದ್ಯಂತ ವಾರ್ಷಿಕ ಸರಾಸರಿ ತಾಪಮಾನಗಳಲ್ಲಿ ಏರಿಕೆಗೆ ಅನುಗುಣವಾಗಿದೆ. 2024 ವಿಶ್ವದ ಅತ್ಯಂತ ತಾಪಮಾನದ ವರ್ಷವಾಗಿ ದಾಖಲಾಗಿದ್ದು,ಇದು ಮೊದಲ ಬಾರಿಗೆ ಪ್ಯಾರಿಸ್ ಒಪ್ಪಂದದಲ್ಲಿಯ ಕೈಗಾರಿಕಾ ಪೂರ್ವ(1850-1900) ಮಟ್ಟಕ್ಕಿಂತ 1.5 ಡಿ.ಸೆ.ಅಧಿಕ ತಾಪಮಾನದ ಮಿತಿಯನ್ನು ಮೀರಿದೆ.
ಬುಧವಾರ ಜನವರಿ ತಿಂಗಳಿಗಾಗಿ ಹವಾಮಾನ ಮುನ್ನೋಟವನ್ನು ಬಿಡುಗಡೆಗೊಳಿಸಿದ ಐಎಂಡಿ ಮೃತ್ಯುಂಜಯ ಮೊಹಾಪಾತ್ರ ಅವರು,ಭಾಗಶಃ ಉತ್ತರ ಪ್ರದೇಶ,ರಾಜಸ್ಥಾನ,ಮಧ್ಯಪ್ರದೇಶದ ಕೆಲವು ಭಾಗಗಳು ಮತ್ತು ಗುಜರಾತ್ ಹಾಗೂ ಬಿಹಾರದಂತಹ ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಹೊರತುಪಡಿಸಿ ದೇಶಾದ್ಯಂತ ಮಾಸಿಕ ಕನಿಷ್ಠ (ರಾತ್ರಿ) ತಾಪಮಾನವು ಸರಾಸರಿಗಿಂತ ಹೆಚ್ಚಿರುವ ಸಾಧ್ಯತೆಯಿದೆ. ಜನವರಿಯಲ್ಲಿ ವಾಡಿಕೆಗಿಂತ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.