ಲೋಕಸಭಾ ಚುನಾವಣೆ ವೇಳೆ ಭಾರತದಲ್ಲಿ ಇಂಟರ್ನೆಟ್ ಸೆನ್ಸಾರ್‌ಶಿಪ್ ತಾರಕಕ್ಕೇರಿತ್ತು;‌ ವರದಿ

Update: 2025-01-02 12:17 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ಟಾಪ್ 10 ವಿಪಿಎನ್ಸ್ ಕಾಸ್ಟ್ ಆಫ್ ಇಂಟರ್ನೆಟ್ ಶಟ್‌ಡೌನ್ ಟ್ರ್ಯಾಕರ್ ವೆಬ್‌ಸೈಟ್ ಪ್ರಕಾರ, ಭಾರತದಲ್ಲಿ 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಥವಾ ಅದಕ್ಕೂ ಮುನ್ನ ಇಂಟರ್ನೆಟ್ ಸೆನ್ಸಾರ್‌ಶಿಪ್ ತಾರಕಕ್ಕೇರಿತ್ತು. ವೆಬ್‌ಸೈಟ್ ಚುನಾವಣಾ ಸಂಬಂಧಿತ ಇಂಟರ್ನೆಟ್ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಭಾರತವನ್ನು ಅಗ್ರಸ್ಥಾನದಲ್ಲಿರಿಸಿದರೆ,236.7 ಮಿಲಿಯನ್ ಡಾಲರ್‌ಗಳೊಂದಿಗೆ ಇಡೀ ವರ್ಷದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಒಟ್ಟು ವೆಚ್ಚದಲ್ಲಿ ದೇಶವು ನಾಲ್ಕನೇ ಸ್ಥಾನದಲ್ಲಿದೆ. 2023ರಲ್ಲಿ ಟಾಪ್ 10 ವಿಪಿಎನ್ ಇಂಟರ್ನೆಟ್ ನಿರ್ಬಂಧಗಳ ಒಟ್ಟು ವೆಚ್ಚ 585.4 ಮಿಲಿಯನ್ ಡಾಲರ್ ಎಂದು ವರದಿ thehindubusinessline.com ಮಾಡಿತ್ತು.

ಭಾರತ ಮತ್ತು ತೈವಾನ್ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ವಿಷಯವನ್ನು ನಿರ್ಬಂಧಿಸುವ ದೇಶಗಳಾಗಿವೆ ಎಂದು ಟಾಪ್ 10 ವಿಪಿಎನ್ ಹೇಳಿದೆ. ಈ ನಡುವೆ ಸೆನ್ಸಾರ್‌ಶಿಪ್ ನಿಗಾ ಸಂಸ್ಥೆ ಅಸೆಸ್ ನೌ,‘ಭಾರತವು ಇಂಟರ್ನೆಟ್ ಸ್ಥಗಿತಗೊಳಿಸುವ ವಿಶ್ವದ ಪ್ರಮುಖ ದೇಶವಾಗಿ ತನ್ನ ಕುಖ್ಯಾತಿಯನ್ನು ಉಳಿಸಿಕೊಂಡಿದೆ ’ ಎಂದು ಹೇಳಿದೆ. ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಬಿಹಾರದ ಸರನ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳಿಗೆ ಅಡ್ಡಿಯಾಗಿತ್ತು ಮತ್ತು ಚುನಾವಣೆಗೆ ಮುನ್ನ ಇಡೀ ಒಂದು ತಿಂಗಳು ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ವಿಪಿಎನ್‌ಗಳ ಬಳಕೆಯನ್ನು ನಿಷೇಧಿಸಲು ಸಿಆರ್‌ಪಿಸಿಯ ಕಲಂ 144ನ್ನು ಹೇರಲಾಗಿತ್ತು ಎಂದು ಅದು ಬೆಟ್ಟು ಮಾಡಿದೆ.

ಇದಲ್ಲದೆ ಡಿಜಿಟಲ್ ಅಡ್ವೊಕೇಸಿ ಗ್ರೂಪ್ ಎಸ್‌ಎಫ್‌ಎಲ್‌ಸಿ.ಇನ್‌ನ ಇಂಟರ್ನೆಟ್ ಶಟ್‌ಡೌನ್ ಟ್ರ್ಯಾಕರ್ 2024ರ ಅಂತ್ಯದ ವೇಳೆಗೆ ಇಂಟರ್ನೆಟ್ ಸ್ಥಗಿತಗೊಳಿಸಿದ್ದ 60 ನಿದರ್ಶನಗಳನ್ನು ದಾಖಲಿಸಿದೆ. 2023ರಲ್ಲಿ 14ರಷ್ಟಿದ್ದ ದೇಶದಲ್ಲಿಯ ಪ್ರತಿಕ್ರಿಯಾತ್ಮಕ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಸಂಖ್ಯೆ 2024ರಲ್ಲಿ 27ಕ್ಕೆ ಏರಿಕೆಯಾಗಿದ್ದರೆ,ಇದೇ ಅವಧಿಯಲ್ಲಿ 81ರಷ್ಟಿದ್ದ ಮುನ್ನೆಚ್ಚರಿಕೆಯ ಸ್ಥಗಿತಗೊಳಿಸುವಿಕೆಯ ಸಂಖ್ಯೆ 81ರಿಂದ 33ಕ್ಕೆ ತಗ್ಗಿದೆ.

ಸರಕಾರದಿಂದ ಈ ವರ್ಷ ಇಂತಹ ಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಗೊಲ್ಲ ಬಾಬುರಾವ್ ಅವರು,ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಪರಿಣಾಮ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ನಿಭಾಯಿಸುವಲ್ಲಿ ಅವುಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸರಕಾರವು ಯಾವುದೇ ಅಧ್ಯಯನವನ್ನು ನಡೆಸಿದೆಯೇ ಎಂದು ಸದನದಲ್ಲಿ ಪ್ರಶ್ನಿಸಿದ್ದರು ಮತ್ತು ಸರಕಾರವು ಇಂತಹ ಯಾವುದೇ ಅಧ್ಯಯನವನ್ನು ನಡೆಸಿಲ್ಲ ಎಂದು ಸಂವಹನ ಸಚಿವಾಲಯವು ಉತ್ತರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News