‘ಲವ್ ಜಿಹಾದ್’ ಪ್ರಕರಣದಲ್ಲಿ ಬರೇಲಿ ನ್ಯಾಯಾಲಯದ ಹೇಳಿಕೆಗಳನ್ನು ಅಳಿಸಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ : ‘ಲವ್ ಜಿಹಾದ್’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಬರೇಲಿ ನ್ಯಾಯಾಲಯವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ‘ಸಂವೇದನಾಶೀಲ’ಗೊಳಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ತೀವ್ರ ತರಾಟೆಗೆತ್ತಿಕೊಂಡಿತು.
ಸಂವಿಧಾನದ ವಿಧಿ 32ರಡಿ ಸಲ್ಲಿಸಲಾದ ಅರ್ಜಿಯಲ್ಲಿ ಕೋರಿರುವಂತೆ ಸಾಕ್ಷ್ಯಾಧಾರಗಳ ಮೇಲೆ ವ್ಯಕ್ತಪಡಿಸಲಾದ ಅಭಿಪ್ರಾಯಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಧೀಶರಾದ ಹೃಷಿಕೇಶ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು, ‘ನೀವು ಯಾರು ಮತ್ತು ಈ ವಿಷಯವು ನಿಮಗೆ ಹೇಗೆ ಸಂಬಂಧಿಸಿದೆ?’ ಎಂದು ಅರ್ಜಿದಾರ ಅನಾಸ್ ಅವರನ್ನು ಪ್ರಶ್ನಿಸಿತು.
‘ನೀವು ಈ ವಿಷಯವನ್ನು ಸಂವೇದನಾಶೀಲಗೊಳಿಸುತ್ತಿದ್ದೀರಿ, ಇದು ಸರಿಯಲ್ಲ. ವಿಷಯದಲ್ಲಿ ನೀವು ಯಾವುದೇ ಅಧಿಕಾರ ಸ್ಥಾನವನ್ನು ಹೊಂದಿಲ್ಲ. ಸಾಕ್ಷ್ಯಗಳ ಆಧಾರದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೆ ಅವುಗಳನ್ನು ನಾವು ಅಳಿಸಬಹುದೇ?’ ಎಂದು ಪೀಠವು ಪ್ರಶ್ನಿಸಿತು.
ಸಂವಿಧಾನದ ವಿಧಿ 32ರಡಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯವು ನಿಜಕ್ಕೂ ಅಂಗೀಕರಿಸಬಹುದೇ ಎಂದೂ ಪೀಠವು ಕೇಳಿತು. ಅಂತಿಮವಾಗಿ ನ್ಯಾಯಾಲಯವು,‘ನೀವು ಅರ್ಜಿಯನ್ನು ವಾಪಸ್ ತೆಗೆದುಕೊಳ್ಳುತ್ತೀರಾ ಇಲ್ಲವೇ ನಾವೇ ಅದನ್ನು ವಜಾಗೊಳಿಸಬೇಕೇ?’ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
‘ವಿಚಾರಣೆ ಸಂರ್ಭದಲ್ಲಿ ಪೀಠವು, ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಿದ ಸಾಕ್ಷ್ಯಾಧಾರವು ನಿರ್ದಿಷ್ಟ ನರ್ಣಯವೊಂದನ್ನು ಅಗತ್ಯವಾಗಿಸಿದ್ದರೆ ಮತ್ತು ನಿರ್ಣಯವು ದಾಖಲಾಗಿದ್ದರೆ ಅದನ್ನು ನಾವು ಅಳಿಸಬೇಕೇ?’ ಎಂದು ಅಚ್ಚರಿಯನ್ನು ಪೀಠವು ವ್ಯಕ್ತಪಡಿಸಿತು.
ಅಕ್ಟೋಬರ್ 2024ರಲ್ಲಿ, ದೂರು ನೀಡಿದ್ದ ಮಹಿಳೆಯು ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದರೂ ಮುಸ್ಲಿಮ್ ವ್ಯಕ್ತಿವೋರ್ವನಿಗೆ ‘ಆಜೀವ ಸೆರೆವಾಸ’ವನ್ನು ವಿಧಿಸಿದ್ದ ಬರೇಲಿ ನ್ಯಾಯಾಲಯವು ‘ಲವ್ ಜಿಹಾದ್’ ಪದವನ್ನು ಬಣ್ಣಿಸಿದ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು.
ಮಹಿಳೆಯ ಹೇಳಿಕೆಯ ಆಧಾರದಲ್ಲಿ ಅತ್ಯಾಚಾರ ಮತ್ತು ಇತರ ಅಪರಾಧಗಳ ಆರೋಪಗಳಲ್ಲಿ ಪ್ರಕರಣ ದಾಖಲಾಗಿತ್ತು. ತಾನು ಆರೋಪಿಯನ್ನು ಕೋಚಿಂಗ್ ಸೆಂಟರ್ನಲ್ಲಿ ಭೇಟಿಯಾಗಿದ್ದೆ ಮತ್ತು ಆತ ತನ್ನ ಹೆಸರು ಆನಂದ್ ಕುಮಾರ್ ಎಂದು ಹೇಳಿಕೊಂಡಿದ್ದ. ಆದರೆ ಮದುವೆಯ ಬಳಿಕ ಆತ ಅಲೀಮ್ ಹೆಸರಿನ ಮುಸ್ಲಿಮ್ ವ್ಯಕ್ತಿಯಾಗಿದ್ದ ಎನ್ನುವುದು ಗೊತ್ತಾಗಿತ್ತು ಎಂದು ಮಹಿಳೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಳು.
‘ಲವ್ ಜಿಹಾದ್’ನ ಪ್ರಾಥಮಿಕ ಗುರಿ ಜನಸಂಖ್ಯಾ ಸ್ವರೂಪವನ್ನು ಬದಲಿಸುವುದು ಮತ್ತು ಧಾರ್ಮಿಕ ಗುಂಪಿನಲ್ಲಿಯ ಮೂಲಭೂತವಾದಿ ಬಣಗಳು ಸೃಷ್ಟಿಸುವ ಅಂತರರಾಷ್ಟ್ರೀಯ ಉದ್ವಿಗ್ನತೆಯನ್ನು ಕೆರಳಿಸುವುದು. ಮೂಲಭೂತವಾಗಿ ಲವ್ ಜಿಹಾದ್ ಮುಸ್ಲಿಮೇತರ ಮಹಿಳೆಯರನ್ನು ಮೋಸದ ಮದುವೆಗಳ ಮೂಲಕ ಇಸ್ಲಾಮ್ ಗೆ ಮತಾಂತರಿಸುವುದನ್ನು ಉಲ್ಲೇಖಿಸುತ್ತದೆ ಎಂದು ಬರೇಲಿ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಹೇಳಿದ್ದರು.
ಈ ಕಾನೂನುಬಾಹಿರ ಮತಾಂತರಗಳನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗುವ ಅಥವಾ ಬೆಂಬಲಿಸುವ ತೀವ್ರಗಾಮಿ ವ್ಯಕ್ತಿಗಳು ನಡೆಸುತ್ತಾರೆ. ಆದರೆ ಇಂತಹ ಕೃತ್ಯಗಳು ಇಡೀ ಧಾರ್ಮಿಕ ಸಮುದಾಯವನ್ನು ಪ್ರತಿಬಿಂಬಿಸುವುದಿಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ ಎಂದು ಬೆಟ್ಟು ಮಾಡಿದ್ದ ನ್ಯಾಯಾಧೀಶರು, ಲವ್ ಜಿಹಾದ್ ಪ್ರಕ್ರಿಯೆಯು ಗಮನಾರ್ಹ ಹಣಕಾಸು ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ ಮತ್ತು ಇದಕ್ಕೆ ವಿದೇಶಿ ಹಣಕಾಸು ಬಳಕೆಯಾಗುವ ಸಾಧ್ಯತೆಯಿರುತ್ತದೆ ಎಂದು ಹೇಳಿದ್ದರು.