ಒಂದೊಮ್ಮೆ ಡೆಲಿವರಿ ಬಾಯ್ ಆಗಿದ್ದ ಯಾಸೀನ್ ಶಾನ್ ಮುಹಮ್ಮದ್, ಇಂದು ಸಿವಿಲ್ ನ್ಯಾಯಾಧೀಶ
ತಿರುವನಂತಪುರಂ: 2024ರ ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಎರಡನೆಯವರಾಗಿ ತೇರ್ಗಡೆಗೊಂಡು, ಸಿವಿಲ್ ನ್ಯಾಯಾಧೀಶರಾಗುವ ಅರ್ಹತೆ ಪಡೆದಿರುವ ವಕೀಲ ಯಾಸೀನ್ ಶಾನ್ ಮುಹಮ್ಮದ್ ಅವರ ಜೀವನಗಾಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಯಾಸೀನ್ ಪ್ರಕಾರ, ಅವರ ಯಶಸ್ಸಿಗೆ ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಫಮ ಬಹು ಮುಖ್ಯ ಕಾರಣವಾಗಿದೆ. ತಮ್ಮ ಭವಿಷ್ಯದ ಬಗ್ಗೆ ನಿರಾಶರಾಗಿರುವ, ಖಿನ್ನರಾಗಿರುವ ಹಾಗೂ ಭರವಸೆ ಕಳೆದುಕೊಂಡಿರುವ ವ್ಯಕ್ತಿಗಳಿಗೆ ಯಾಸೀನ್ ಅವರ ಬದುಕಿನ ಪುಟದ ವಿವರಗಳನ್ನು ನೋಡುವುದರಿಂದ ಭಾರಿ ಭರವಸೆ ಮೂಡುವ ಸಾಧ್ಯತೆ ಇದೆ.
ಇತ್ತೀಚೆಗೆ ಯಾಸೀನ್ ಅವರೊಂದಿಗೆ ಮಾತುಕತೆ ನಡೆಸಿರುವ Live Law ಸುದ್ದಿ ಸಂಸ್ಥೆ, ದೇಶದ ಭವಿಷ್ಯದ ದೃಷ್ಟಿಯಿಂದ ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರಲಿ ಹಾಗೂ ಅವರಿಗೆ ಸ್ಫೂರ್ತಿ ನೀಡಲಿ ಎಂಬ ಆಶಯದಿಂದ ಅವರ ಜೀವನಗಾಥೆಯನ್ನು ಪ್ರಕಟಿಸಿದೆ.
ಯಾಸೀನ್ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಅವರ ತಾಯಿ ಆರನೆಯ ತರಗತಿಗೇ ಶಾಲೆ ತೊರೆದು, ತಮ್ಮ 14ನೇ ವರ್ಷದಲ್ಲಿ ವಿವಾಹವಾಗಿ, 19ನೇ ವರ್ಷದ ಹೊತ್ತಿಗೆ ವಿಚ್ಛೇದಿತರೂ ಆಗಿದ್ದರು. ಅವರು 15 ವರ್ಷದ ಬಾಲಕಿಯಾಗಿದ್ದಾಗ, ತಮ್ಮ ಪ್ರಥಮ ಪುತ್ರ ಯಾಸೀನ್ ಗೆ ಜನ್ಮ ನೀಡಿದ್ದರು. ಅವರಿಗೆಂದಿಗೂ ತಮ್ಮ ತಂದೆಯೊಂದಿಗೆ ಸಂಪರ್ಕವಿರಲಿಲ್ಲ. ಅವರ ತಾಯಿಯೊಬ್ಬರೇ ತಮ್ಮ ಇಬ್ಬರು ಮಕ್ಕಳು ಹಾಗೂ ಅವರ ಅಜ್ಜಿಯ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿತ್ತು. ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಅವರು, ನಂತರ ಆಶಾ ಕಾರ್ಯಕರ್ತೆಯಾಗಿ ತಮ್ಮ ವೃತ್ತಿ ಜೀವನ ಮುಂದುವರಿಸಿದ್ದರು.
ಬಡವರಿಗಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ವಸತಿ ಯೋಜನೆಯ ಮೂಲಕ ಅವರ ಕುಟುಂಬವು ತಲೆಯ ಮೇಲೊಂದು ಸೂರು ಪಡೆದಿತ್ತು. ಯಾಸೀನ್ ಯಾವಾಗಲೂ ಬಳಸಿದ ಬಟ್ಟೆಗಳನ್ನೇ ಧರಿಸುತ್ತಿದ್ದರು ಹಾಗೂ ಅವರ ಬಳಿ ಪುಸ್ತಕಗಳನ್ನು ಖರೀದಿಸಲು ಹಣವಿರುತ್ತಿರಲಿಲ್ಲ. ಆರ್ಥಿಕ ಮುಗ್ಗಟ್ಟಿನ ಅನಿವಾರ್ಯತೆಯಿಂದಾಗಿ ದಿನಪತ್ರಿಕೆ ಹಾಗೂ ಹಾಲಿನ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಮೂಲಕ ಯಾಸೀನ್ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ, ಅವರು ತಮ್ಮ ಓದನ್ನು ಶ್ರದ್ಧೆಯಿಂದ ಮುಂದುವರಿಸಿದರು. ಈ ನಡುವೆ, ಅವರು ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ದಿನಗೂಲಿಯಾಗಿ ಕೆಲಸ ಮಾಡಿದ ದಿನಗಳೂ ಇದ್ದವು.
ನನಗೆ ಓದಿನ ಮೇಲೆ ಗಮನ ಹರಿಸಲು ಸಾಕಷ್ಟು ಸಮಯ ಇಲ್ಲದೆ ಇರುತ್ತಿದ್ದುದರಿಂದ ಹಾಗೂ ನನಗೆ ಸೂಕ್ತ ಮಾರ್ಗದರ್ಶನ ಮಾಡುವವರಾರೂ ಇಲ್ಲದೆ ಇದ್ದುದರಿಂದ, ನಾನು ಶಾಲಾ ದಿನಗಳಲ್ಲಿ ಸರಾಸರಿಗಿಂತ ಕಳಪೆ ವಿದ್ಯಾರ್ಥಿಯಾಗಿದ್ದೆ ಎಂದು ಯಾಸೀನ್ ಸ್ಮರಿಸುತ್ತಾರೆ. ತಮ್ಮ 12ನೇ ತರಗತಿ ವ್ಯಾಸಂಗ ಮುಕ್ತಾಯಗೊಂಡ ನಂತರ, ಯಾಸೀನ್ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿ ಪೂರೈಸಿದರು. ಡಿಪ್ಲೊಮಾ ಪದವಿ ಕೌಶಲಾಧಾರಿತ ಶಿಕ್ಷಣವಾಗಿದ್ದುದರಿಂದ, ಅವರಿಗೆ ಉದ್ಯೋಗ ಹುಡುಕಲು ಸಾಕಷ್ಟು ಅವಕಾಶ ದೊರೆತವು. ಒಂದು ವರ್ಷ ಕಾಲ ಗುಜರಾತ್ ನಲ್ಲಿ ಉದ್ಯೋಗ ಮಾಡಿದ್ದ ಯಾಸೀನ್, ನಂತರ ಕೇರಳಕ್ಕೆ ಮರಳಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಪಡೆದರು. ಇದಾದ ನಂತರ, ಕಾನೂನು ಶಿಕ್ಷಣ ಮುಂದುವರಿಸಲು ಮುಂದಾದರು.
ರಾಜ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಗಳಿಸಿದ ಅವರು, ಎರ್ನಾಕುಲಂನ ಪ್ರತಿಷ್ಠಿತ ಸರಕಾರಿ ಕಾನೂನು ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಿದರು. ತಮ್ಮ ಪದವಿಯ ಅವಧಿಯಲ್ಲಿ ಅವರು ಮಕ್ಕಳಿಗೆ ಮನೆಪಾಠವನ್ನೂ ಮಾಡುತ್ತಿದ್ದರು. ತಮ್ಮ ಕಾನೂನು ಪದವಿಯನ್ನು ಮುಂದುವರಿಸುವಾಗ ಅವರು ಝೊಮ್ಯಾಟೊಗೆ ಡೆಲಿವರಿ ಬಾಯ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಕೋವಿಡ್ ಸಾಂಕ್ರಾಮಿಕವು ಅವರ ಅತ್ಯಲ್ಪ ಆದಾಯದ ಮೂಲಕ್ಕೂ ಕಲ್ಲು ಹಾಕಿತ್ತು.
ಮಾರ್ಚ್ 2023ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ನಂತರ, ಅವರು ಪಟ್ಟಾಂಬಿ ಮುನ್ಸೀಫ್-ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕೀಲರಾಗಿರುವ ಶಾಹುಲ್ ಹಮೀದ್ ಬಳಿ ಕಿರಿಯ ವಕೀಲರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಕುತೂಹಲಕರ ಸಂಗತಿಯೆಂದರೆ, ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಹೀನಾ ಎನ್.ವಿ. ಹಾಗೂ ರೇಶ್ಮಾ ಎಂ.ಆರ್. ಎಂಬುವವರೂ ಕೂಡಾ ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರು ಪರೀಕ್ಷೆಗೆ ಸಿದ್ಧಗೊಳ್ಳಲು ಯಾಸೀನ್ ರಿಗೆ ಪ್ರೋತ್ಸಾಹಿಸಿದ್ದರು. ನಿತ್ಯ ಸಾಕಷ್ಟು ನ್ಯಾಯಾಲಯದ ಕೆಲಸಗಳಿದ್ದರೂ, ಹಿರಿಯ ವಕೀಲರಾದ ಶಾಹುಲ್ ಹಮೀದ್ ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ನೀಡುವ ಮೂಲಕ ನನಗೆ ನೆರವು ನೀಡಿದರು ಎಂದು ಯಾಸೀನ್ ಸ್ಮರಿಸುತ್ತಾರೆ.
ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಎರಡನೆ ರ‍್ಯಾಂಕ್ ನಲ್ಲಿ ತೇರ್ಗಡೆಯಾಗುತ್ತೇನೆ ಎಂದು ಅವರೆಂದೂ ನಿರೀಕ್ಷಿಸಿಯೇ ಇರಲಿಲ್ಲ. ಅವರು ಗುರಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ಉದ್ಯೋಗ ಪಡೆಯುವುದು ಮಾತ್ರವಾಗಿತ್ತು. ಇದು ಅವರ ಎರಡನೇ ಪ್ರಯತ್ನವಾಗಿತ್ತು ಹಾಗೂ ಮೊದಲ ಪ್ರಯತ್ನದಲ್ಲಿ 58ನೇ ರ‍್ಯಾಂಕ್ ಪಡೆದರೂ, ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ.
ಕಾನೂನು ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಲು ಪ್ರಾರಂಭಿಸಿದ ಯಾಸೀನ್, ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಅವರಿಗೆ ನೆರವು ನೀಡತೊಡಗಿದರು. ಅದಕ್ಕೆ ಪ್ರತಿಯಾಗಿ, ತಾವೂ ಪರೀಕ್ಷೆಗೆ ಸಿದ್ಧಗೊಳ್ಳಲು ಅದು ನೆರವು ನೀಡಿತು. ತಮ್ಮ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಹಣಕಾಸು ನೆರವು ನೀಡಿದ ಆತ್ಮೀಯ ಸ್ನೇಹಿತರೊಬ್ಬರಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆ. “ನಾನು ಕೋವಿಡ್-19 ಸಂದರ್ಭದಲ್ಲಿ ವೈಯಕ್ತಿಕ ಸಾಲಕ್ಕೆ ಪ್ರಯತ್ನಿಸಿದ್ದೆನಾದರೂ, ಅದು ನನಗೆ ದೊರೆತಿರಲಿಲ್ಲ. ಅಲ್ಲದೆ, ಪರೀಕ್ಷೆಗಳು ಸಮೀಪಿಸುತ್ತಿದ್ದುದರಿಂದ ನಾನು ಕೆಲಸ ಮಾಡಲೂ ಸಾಧ್ಯವಿರಲಿಲ್ಲ. ಹಿಂದಿರುಗಿ ನೋಡಿದಾಗ, ನನ್ನ ಎಲ್ ಎಲ್ ಬಿ ಪದವಿ ಪಯಣದ ಸಂಕಷ್ಟದ ಕಾಲಘಟ್ಟದಲ್ಲಿ ಅಂಜಿತಾ ತರಹದ ನನ್ನ ಆತ್ಮೀಯ ಸ್ನೇಹಿತರಂತೆ ಅನೇಕ ವ್ಯಕ್ತಿಗಳು ನನಗೆ ಸಹಾಯ ಮಾಡಿದ್ದು ಅರ್ಥವಾಗುತ್ತದೆ. ಅವರ ನೆರವುಗಳು ಆ ಸವಾಲುಗಳನ್ನೆಲ್ಲ ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು” ಎಂದು ಯಾಸೀನ್ ಸ್ಮರಿಸಿದ್ದಾರೆ.
ಇತರರಿಗೆ ಸ್ಫೂರ್ತಿದಾಯಕ ಸಲಹೆಗಳನ್ನು ನೀಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಹೇಳುವ ಯಾಸೀನ್, ಕಠಿಣ ಪರಿಶ್ರಮ ಒಂದಿಲ್ಲೊಂದು ದಿನ ಪ್ರತಿಫಲ ನೀಡುತ್ತದೆ ಎಂದು ದೃಢವಾಗಿ ನಂಬಿದ್ದಾರೆ. ಯಾವುದೇ ವ್ಯಕ್ತಿಯ ಬೆಳವಣಿಗೆಯನ್ನು ಸನ್ನಿವೇಶಗಳು ಬಹುತೇಕ ನಿರ್ಧರಿಸುತ್ತವೆ ಎಂಬುದು ಅವರ ಅಭಿಪ್ರಾಯವಾಗಿದೆ.
ಅವಕಾಶ ಸಿಕ್ಕಿರೆ ಸ್ನಾತಕೋತ್ತರ ಕಾನೂನು ಪದವಿ ವ್ಯಾಸಂಗ ಮಾಡಬೇಕು ಎಂಬುದು ಯಾಸೀನ್ ರ ಮಹತ್ವಾಕಾಂಕ್ಷೆಯಾಗಿದೆ. ತಮ್ಮ ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತಿರುವ ಯಾಸೀನ್ ಬಳಿ ವಿಶ್ವಕ್ಕೆ ತಮ್ಮ ಕಷ್ಟದ ದಿನಗಳು ಹಾಗೂ ಕಠಿಣ ಪರಿಶ್ರಮದ ಕುರಿತು ಹೇಳಿಕೊಳ್ಳುವಂತಹ ಜೀವನಗಾಥೆಯಿದೆ. ತಮ್ಮ ಜೀವನದ ಕಷ್ಟಕಾರ್ಪಣ್ಯಗಳು ಸಹಾನುಭೂತಿಯ ನಿಜಾರ್ಥ ಹಾಗೂ ಸ್ಥಿತಿಸ್ಥಾಪಕತ್ವವನ್ನು ಅರ್ಥ ಮಾಡಿಕೊಳ್ಳಲು ನೆರವು ನೀಡಿವೆ. ಆ ಗುಣಗಳನ್ನು ತಮ್ಮ ನ್ಯಾಯಾಂಗ ಪಾತ್ರದಲ್ಲಿ ತರುವ ಉದ್ದೇಶವನ್ನು ಅವರು ಹೊಂದಿದ್ದಾರೆ.
“ನಾವು ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆ, ನಿಷ್ಠೆ ಹಾಗೂ ನನ್ನ ಆತ್ಮಸಾಕ್ಷಿಗನುಗುಣವಾಗಿ ಮಾಡುತ್ತೇನೆ” ಎಂದು ಹೇಳುವ ಯಾಸೀನ್, ನ್ಯಾಯಾಧೀಶರ ಪಾತ್ರವನ್ನು ಜನರಿಗೆ ನೆರವು ನೀಡುವ ಮತ್ತು ನ್ಯಾಯ ದೊರಕಿಸಿಕೊಡುವ ಅವಕಾಶವನ್ನಾಗಿ ಪರಿಗಣಿಸಿದ್ದಾರೆ.
ಸೌಜನ್ಯ : livelaw.in