ಭೋಪಾಲ್ ಅನಿಲ ದುರಂತದ 40 ವರ್ಷಗಳ ಬಳಿಕ ವಿಷಕಾರಿ ತ್ಯಾಜ್ಯಗಳ ವಿಲೇವಾರಿ
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭೀಕರ ಅನಿಲ ದುರಂತ ಸಂಭವಿಸಿ 40 ವರ್ಷಗಳ ಬಳಿಕ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿದ್ದ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಭಾರೀ ಭದ್ರತೆಯಲ್ಲಿ ಸ್ಥಳಾಂತರಗೊಳಿಸಲಾಗಿದೆ.
1984ರ ಡಿಸೆಂಬರ್ 2ರಂದು ರಾತ್ರಿ ಯೂನಿಯನ್ ಕಾರ್ಬೈಡ್ ಸ್ಥಾವರದಿಂದ ಮೀಥೈಲ್ ಐಸೊಸೈನೇಟ್(ಎಂಐಸಿ) ಅನಿಲ ಸೋರಿಕೆಯಾಗಿ ನಗರವನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿತು. 15,000ಕ್ಕಿಂತ ಹೆಚ್ಚು ಜನರು ಘಟನೆಯಲ್ಲಿ ಮೃತಪಟ್ಟಿದ್ದು, 6,00,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು.
ವಿಷಕಾರಿ ತ್ಯಾಜ್ಯವನ್ನು 250 ಕಿಲೋಮೀಟರ್ ದೂರವಿರುವ ಕೈಗಾರಿಕಾ ಪ್ರದೇಶವಾದ ದಾರ್ ಜಿಲ್ಲೆಯ ಪೀತಂಪುರಕ್ಕೆ ಸುಮಾರು ಹನ್ನೆರಡು ಟ್ರಕ್ ಗಳ ಮೂಲಕ ಸಾಗಿಸಲಾಗಿದೆ. ಈ ವೇಳೆ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಲಾಗಿದೆ.
ತ್ಯಾಜ್ಯವನ್ನು ಸಾಗಿಸಲು 12 ಜಿಪಿಎಸ್-ಸಜ್ಜಿತ ಕಂಟೈನರ್ ಟ್ರಕ್ ಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಟ್ರಕ್ ನಲ್ಲಿ 30 ಟನ್ ವಿಷಕಾರಿ ವಸ್ತುಗಳನ್ನು ಸಾಗಿಸಲಾಗಿದೆ. ಸುಗಮ ಮತ್ತು ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭೋಪಾಲ್ ನಿಂದ ಪಿತಾಂಪುರದವರೆಗೆ ಹಸಿರು ಕಾರಿಡಾರ್ ಅನ್ನು ಸ್ಥಾಪಿಸಲಾಗಿದೆ. ಅಪಾಯಗಳನ್ನು ತಗ್ಗಿಸಲು ಪೊಲೀಸ್ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳು ಬೆಂಗಾವಲಾಗಿ ಸಾಗಿದೆ. ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ತ್ಯಾಜ್ಯವನ್ನು ಸಾಗಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ತಾಜ್ಯವನ್ನು ಸಾಗಿಸಲಾಗಿದೆ.
337 ಮೆಟ್ರಿಕ್ ಟನ್ ವಿಷಕಾರಿ ತ್ಯಾಜ್ಯವನ್ನು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸಂಗ್ರಹಿಸಲಾಗಿತ್ತು. ಇದನ್ನು 12 ವಿಶೇಷವಾಗಿ ವಿನ್ಯಾಸಗೊಳಿಸಿದ ಕಂಟೈನರ್ ಗಳಲ್ಲಿ ಲೋಡ್ ಮಾಡಲಾಗಿದೆ. ಪ್ರತಿ ಕಂಟೇನರ್ ಸರಿಸುಮಾರು 30 ಟನ್ ತ್ಯಾಜ್ಯವನ್ನು ಒಯ್ಯುತ್ತದೆ, ರಾಸಾಯನಿಕ ಪ್ರತಿಕ್ರಿಯೆಗಳನ್ನು ತಡೆಗಟ್ಟಲು HDPE ಚೀಲಗಳಲ್ಲಿ ಪ್ಯಾಕ್ ಮಾಡಲಾಗಿದೆ. ಸುರಕ್ಷತಾ ಮಾನದಂಡಗಳನ್ನು(ಪಿಪಿಇ ಕಿಟ್) ಅನುಸರಿಸುವ ಮೂಲಕ ಸುಮಾರು 200 ಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದೆ. ಪ್ರತಿ ಕಾರ್ಮಿಕರು 30 ನಿಮಿಷಗಳಂತೆ ತ್ಯಾಜ್ಯ ಸಂಗ್ರಹಣೆಯಲ್ಲಿ ಕೆಲಸ ಮಾಡಿದ್ದಾರೆ.
ಪಿತಂಪುರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕವು ಮಧ್ಯಪ್ರದೇಶದ ಏಕೈಕ ಅತ್ಯಾಧುನಿಕ ದಹನ ಘಟಕವಾಗಿದೆ. ಇದನ್ನು ರಾಮ್ಕಿ ಎನ್ವಿರೋ ಎಂಜಿನಿಯರ್ ಗಳು ನಿರ್ವಹಿಸುತ್ತಿದೆ. ನೆಲದಿಂದ 25 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ವಿಶೇಷ ಮರದ ವೇದಿಕೆಯಿಂದ ತ್ಯಾಜ್ಯವನ್ನು ಸುಡಲಾಗಿದೆ.
ತ್ಯಾಜ್ಯಗಳ ದಹನ ಪ್ರಕ್ರಿಯೆಯು ವೈಜ್ಞಾನಿಕ ಪ್ರೋಟೋಕಾಲ್ ಗಳನ್ನು ಹೊಂದಿದೆ. ದಹನಕ್ಕೆ ಮೊದಲು ತಾಪಮಾನ ಮತ್ತು ದಹನದ ಪ್ರಮಾಣವನ್ನು ಪರೀಕ್ಷೆಯ ಮೂಲಕ ನಿರ್ಧರಿಸಲಾಗುತ್ತದೆ.