ಪವಾರ್ ಬಣಗಳ ಪುನರ್ಮಿಲನಕ್ಕೆ ಅಜಿತ್ ತಾಯಿ ಸಲಹೆ
ಪುಣೆ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ)ಯ ಉಭಯ ಬಣಗಳು ಒಗ್ಗೂಡುವಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಾಯಿ ಆಶಾತಾಯಿ ಸಲಹೆ ಮಾಡಿದ್ದಾರೆ.
ಪಂಡರಾಪುರ ವಿಠಲ-ರುಕುಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಮಗ ಅಜಿತ್ ಪವಾರ್ ಹಾಗೂ ಭಾವ ಶರದ್ ಪವಾರ್ ನೇತೃತ್ವದ ಪಕ್ಷಗಳು ಮತ್ತೆ ಒಂದಾಗಬೇಕು ಎನ್ನುವ ಬಯಕೆ ನನ್ನದು ಎಂದು ಸ್ಪಷ್ಟಪಡಿಸಿದರು. "ಪವಾರ್ ಕುಟುಂಬಗಳಲ್ಲಿ ಇರುವ ಭಿನ್ನಾಭಿಪ್ರಾಯ ಶೀಘ್ರ ಬಗೆಹರಿಯಬೇಕು ಎನ್ನುದು ನನ್ನ ಆಸೆ. ಪಾಂಡುರಂಗ ನನ್ನ ಪ್ರಾರ್ಥನೆಗೆ ಉತ್ತರಿಸುತ್ತಾನೆ ಎಂಬ ವಿಶ್ವಾಸ ನನ್ನದು" ಎಂದು ಹೇಳಿದರು.
ಎನ್‍ಸಿಪಿ ಹಾಗೂ ಪವಾರ್ ಕುಟುಂಬಗಳಲ್ಲಿ 2023ರ ವಿಭಜನೆ ಬಳಿಕ ಮಾವ ಮತ್ತು ಅಳಿಯನ ಬಣಗಳ ನಡುವೆ ರಾಜಿ ಸಂಧಾನ ಪ್ರಯತ್ನಗಳು ನಡೆಯುತ್ತಿವೆ ಎಂಬ ಊಹಾಪೋಹಗಳ ಬೆನ್ನಲ್ಲೇ ಆಶಾತಾಯಿ ಈ ಹೇಳಿಕೆ ನೀಡಿದ್ದಾರೆ.
ಕುಟುಂಬದ ಇತರ ಸದಸ್ಯರು ಕೂಡಾ ಏಕೀಕರಣಕ್ಕೆ ಕರೆ ನೀಡಿದ್ದಾರೆ. ಡಿಸೆಂಬರ್ 13ರಂದು ಶಾಸಕ ರೋಹಿತ್ ಪವಾರ್ ಅವರ ತಾಯಿ ಸುನಂದಾ ಪವಾರ್ ಕೂಡಾ ಎನ್‍ಸಿಪಿ ಸಂಸ್ಥಾಪಕ ಶರದ್ ಪವಾರ್ ಮತ್ತು ಅಜಿತ್ ಮತ್ತೆ ಒಂದಾಗಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಡಿಸೆಂಬರ್ 12ರಂದು ಅಜಿತ್ ಪವಾರ್ ಅವರು ಪಕ್ಷದ ಹಿರಿಯ ಮುಖಂಡರ ಜತೆಗೆ ಮಾವನ ಮನೆಗೆ ಭೇಟಿ ನೀಡಿದ ಪಕ್ಷದ ಸಂಸ್ಥಾಪಕರಿಗೆ ಜನ್ಮದಿನದ ಶುಭ ಕೋರಿದಲ್ಲಿಂದ ಉಭಯ ಬಣಗಳ ಮರು ಸೇರ್ಪಡೆ ಬಗೆಗೆ ವದಂತಿಗಳು ಹುಟ್ಟಿಕೊಂಡಿದ್ದವು. ಪಕ್ಷ ವಿಭಜನೆಯಾದ ಬಳಿಕ ವೈಯಕ್ತಿಕವಾಗಿ ಇಬ್ಬರು ಭೇಟಿಯಾದದ್ದು ಅದೇ ಮೊದಲು.
ಆಶಾತಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್‍ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, 84 ವರ್ಷದ ಪವಾರ್ ಅವರನ್ನು ತಂದೆ ಸಮಾನ ಎಂದು ಬಣ್ಣಿಸಿದ್ದಾರೆ. "ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರಲು ನಾವು ಹೋಗಿದ್ದೆವು. ಅವರೊಂದಿಗೆ ಉತ್ತಮ ಸಂಬಂಧ ಹೊಂದುವುದು ನಮ್ಮ ಬಯಕೆ. ನಾಳೆ ಏನಾಗುತ್ತದೆ ಎನ್ನುವುದು ಯಾರಿಗೂ ತಿಳಿಯದು. ಆದರೆ ಮತ್ತೆ ಒಂದಾದರೆ ಎಲ್ಲರೂ ಅತೀವವಾಗಿ ಸಂಭ್ರಮಿಸುತ್ತಾರೆ" ಎಂದು ವಿವರಿಸಿದ್ದಾರೆ. ಈ ಮರು ಸಂಘಟನೆಗೆ ಆರ್‍ಪಿಐ ಮುಖಂಡ ಹಾಗೂ ಕೇಂದ್ರ ಸಾಮಾಜಿಕ ನ್ಯಾಯಖಾತೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಕೂಡಾ ದನಿಗೂಡಿಸಿದ್ದಾರೆ.