ಚಳಿಗೆ ಉತ್ತರ ತತ್ತರ: ಸತತ ಮೂರನೇ ದಿನವೂ ನಡುಗುತ್ತಿರುವ ರಾಜಧಾನಿ
ಹೊಸದಿಲ್ಲಿ: ಸತತ ಮೂರನೇ ದಿನವಾದ ಬುಧವಾರ ಕೂಡಾ ರಾಷ್ಟ್ರ ರಾಜಧಾನಿ ತೀವ್ರ ಚಳಿಯಿಂದ ತತ್ತರಿಸಿದೆ. ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಷಿಯಸ್ಗೆ ಕುಸಿದಿದ್ದು, ಗರಿಷ್ಠ ತಾಪಮಾನ 15 ಡಿಗ್ರಿ ತಲುಪಿದೆ. ಇದು ವಾಡಿಕೆ ತಾಪಮಾನಕ್ಕಿಂತ ನಾಲ್ಕು ಡಿಗ್ರಿಯಷ್ಟು ಕಡಿಮೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಸಫ್ದರ್ಜಂಗ್ ನಲ್ಲಿ ಗರಿಷ್ಠ ತಾಪಮಾನ 15 ಡಿಗ್ರಿ ದಾಖಲಾಗಿದ್ದು, ಇದು ವಾಡಿಕೆ ಉಷ್ಣಾಂಶಕ್ಕಿಂತ 4.3 ಡಿಗ್ರಿಯಷ್ಟು ಕಡಿಮೆ. ಪಾಲಂ ಹವಾಮಾನ ಕೇಂದ್ರದಲ್ಲಿ ಗರಿಷ್ಠ ಉಷ್ಣಾಂಶ 12.8 ಡಿಗ್ರಿ ದಾಖಲಾಗಿದ್ದು, ಇದು ವಾಡಿಕೆಗಿಂತ ಎರಡು ಡಿಗ್ರಿಯಷ್ಟು ಕಡಿಮೆ. ಗುರುವಾರ ಮುಂಜಾನೆ ಬಹುತೇಕ ಪ್ರದೇಶಗಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ಕೂಡಾ ಇದೇ ವಾತಾವರಣವಿರುವ ಸಾಧ್ಯತೆ ಇದೆ. 10-15 ಕಿಲೋಮೀಟರ್ ವೇಗದಲ್ಲಿ ಮೇಲ್ಮೈ ಗಾಳಿ ಬೀಸಲಿದೆ ಎಂದು ಇಲಾಖೆ ಅಂದಾಜಿಸಿದೆ.
ರಾಜಸ್ಥಾನದಲ್ಲಿ ಹವಾಮಾನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬುಧವಾರ 7.2 ಡಿಗ್ರಿ ತಾಪಮಾನ ದಾಖಲಾಗಿದೆ. ಬಿಕನೇರ್ನಲ್ಲಿ 7 ಡಿಗ್ರಿ ಸೆಲ್ಷಿಯಸ್, ಚುರುವಿನಲ್ಲಿ 6 ಡಿಗ್ರಿ ತಾಪಮಾನ ವರದಿಯಾಗಿದೆ. ಉತ್ತರ ಪ್ರದೇಶದಲ್ಲೂ ಮೈಕೊರೆಯುವ ಚಳಿ ಮತ್ತು ದಟ್ಟ ಮಂಜು ಕವಿದಿದೆ. ಮೀರಠ್ನಲ್ಲಿ 9 ಡಿಗ್ರಿ, ಲಕ್ನೋದಲ್ಲಿ 10 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮತ್ತೆ ಹಿಮಪಾತ ಮತ್ತು ಮಳೆಯ ನಿರೀಕ್ಷೆಯಿದ್ದು, ಜನವರಿ 4 ರಿಂದ 7ರವರೆಗೆ ಹಿಮಪಾತ ಮತ್ತು ಜನವರಿ 5 ಮತ್ತು 6ರಂದು ಭಾರಿ ಮಳೆ ನಿರೀಕ್ಷಿಸಲಾಗಿದೆ.
ರಾಜ್ಯದ ಲಹೂಲ್ ಜಿಲ್ಲೆಯ ಟಬೊ ಗ್ರಾಮ ಮತ್ತು ಸ್ಪಿತಿಯಲ್ಲಿ ಕನಿಷ್ಠ ಅಂದರೆ ಮೈನಸ್ 16.7 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಬಹುತೇಕ ಒಣಹವೆ ಮುಂದುವರಿದಿದ್ದು, ಶಿಮ್ಲಾದಲ್ಲಿ ಕನಿಷ್ಠ ತಾಪಮಾನ 7.6 ಡಿಗ್ರಿ ಸೆಕ್ಷಿಯಸ್ ಇದೆ. ಧರ್ಮಶಾಲಾ (5.9 ಡಿಗ್ರಿ), ಮನಾಲಿ (2.4 ಡಿಗ್ರಿ) ಭುಂಟರ್ (2.9 ಡಿಗ್ರಿ), ಕಲ್ಪಾ (ಮೈನಸ್ 3.8 ಡಿಗ್ರಿ) ಕೂಡಾ ಚಳಿಯಿಂದ ತತ್ತರಿಸುತ್ತಿವೆ.