ದೇವಾಲಯ, ಗುರುದ್ವಾರದ ಅರ್ಚಕರಿಗೆ 18 ಸಾವಿರ ರೂ. ಗೌರವ ಧನ: ಅರವಿಂದ ಕೇಜ್ರಿವಾಲ್ ಭರವಸೆ
ಹೊಸದಿಲ್ಲಿ : ಫೆಬ್ರವರಿಯಲ್ಲಿ ನಡೆಯಲಿರುವ ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಜಯ ಗಳಿಸಿದರೆ, ‘ಪೂಜಾರಿ ಗ್ರಂಥಿ ಸಮ್ಮಾನ ಯೋಜನೆ’ ಅಡಿಯಲ್ಲಿ ದೇವಾಲಯದ ಅರ್ಚಕರಿಗೆ ಹಾಗೂ ಗುರುದ್ವಾರದ ಗ್ರಂಥಿಗಳಿಗೆ ತಿಂಗಳಿಗೆ 18 ಸಾವಿರ ರೂ. ಗೌರವ ಧನ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.
ಹೊಸದಿಲ್ಲಿಯಲ್ಲಿರುವ ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಈ ಭರವಸೆ ನೀಡಿದರು. ಈ ಸಂದರ್ಭ ದಿಲ್ಲಿ ಮುಖ್ಯಮಂತ್ರಿ ಆತಿಶಿ ಹಾಗೂ ಆಪ್ ನಾಯಕ ಸೌರಭ್ ಭಾರದ್ವಾಜ್ ಮೊದಲಾದವರು ಇದ್ದರು.
‘‘ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ, ತಿಂಗಳಿಗೆ ಸುಮಾರು 18 ಸಾವಿರ ರೂ. ನೀಡಲಾಗುವುದು. ಇದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಾವು ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ’’ ಎಂದು ಅವರು ಹೇಳಿದರು.
ಈ ಯೋಜನೆಗೆ ಮಂಗಳವಾರದಿಂದ ನೋಂದಣಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
‘‘ನಾನು ಕನ್ಹೌಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರಕ್ಕೆ ಹೋಗಲಿದ್ದೇನೆ. ಅಲ್ಲಿ ಅರ್ಚಕರ ಹೆಸರು ನೋಂದಾಯಿಸಲಿದ್ದೇನೆ. ನಮ್ಮ ಶಾಸಕರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ನಾಳೆ ಎಲ್ಲಾ ದೇವಾಲಯ ಹಾಗೂ ಗುರುದ್ವಾರಗಳಲ್ಲಿ ಅರ್ಚಕರ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
‘‘ಮಹಿಳಾ ಸಮ್ಮಾನ ಯೋಜನೆ ಹಾಗೂ ಸಂಜೀವನಿ ಯೋಜನೆಯನ್ನು ನಿಲ್ಲಿಸಲು ಪ್ರಯತ್ನಿಸಿದಂತೆ ಅರ್ಚಕರು ಹಾಗೂ ಗ್ರಂಥಿಗಳಿಗಿರುವ ಈ ಯೋಜನೆಯನ್ನು ನಿಲ್ಲಿಸಲು ಪ್ರಯತ್ನಿಸಬೇಡಿ ಎಂದು ನಾನು ಬಿಜೆಪಿಯವರಲ್ಲಿ ಮನವಿ ಮಾಡಲಿದ್ದೇನೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ