ಬಿಹಾರ ಸರಕಾರವು ಯುವಜನತೆ ಮೇಲೆ ದೌರ್ಜನ್ಯದ ಸಂಕೇತವಾಗಿದೆ : ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ : ರವಿವಾರ ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ)ದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಪ್ರತಿಭಟನೆಗಿಳಿದಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸರು ಲಾಠಿ ಪ್ರಹಾರ ನಡೆಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಬಿಹಾರದಲ್ಲಿಯ ‘ಡಬಲ್ ಇಂಜಿನ್’ ಸರಕಾರವು ಯವಕರ ಮೇಲೆ ದೌರ್ಜ್ಯನ್ಯಗಳಿಗೆ ಸಂಕೇತವಾಗಿದೆ ಎಂದು ಕಿಡಿಕಾರಿದ್ದಾರೆ.
‘ಪರೀಕ್ಷೆಗಳಲ್ಲಿ ಭ್ರಷ್ಟಾಚಾರ, ವಂಚನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳನ್ನು ತಡೆಯುವುದು ಸರಕಾರದ ಕೆಲಸವಾಗಿದೆ. ಆದರೆ ಭ್ರಷ್ಟಾಚಾರವನ್ನು ತಡೆಯುವ ಬದಲು ವಿದ್ಯಾರ್ಥಿಗಳು ಧ್ವನಿ ಎತ್ತುವುದನ್ನು ತಡೆಯಲಾಗುತ್ತಿದೆ’ ಎಂದು ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಪ್ರಿಯಾಂಕಾ,ಈ ತೀವ್ರ ಚಳಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಜಲಫಿರಂಗಿ ಪ್ರಯೋಗಿಸಿದ್ದು ಮತ್ತು ಲಾಠಿ ಪ್ರಹಾರ ನಡೆಸಿದ್ದು ಅಮಾನವೀಯವಾಗಿದೆ. ಬಿಜೆಪಿಯ ಡಬಲ್ ಇಂಜಿನ್ ಸರಕಾರ ಯುವಜನರ ಮೇಲೆ ಡಬಲ್ ದೌರ್ಜನ್ಯಗಳ ಸಂಕೇತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.13ರಂದು ನಡೆದಿದ್ದ ಬಿಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ರವಿವಾರ ಪ್ರತಿಭಟನೆಗಿಳಿದಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೋಲಿಸರು ಜಲಫಿರಂಗಿ ಪ್ರಯೋಗಿಸಿ ಲಾಠಿ ಪ್ರಹಾರ ನಡೆಸಿದ್ದರು.
ರವಿವಾರ ಸಂಜೆ ಪಾಟ್ನಾದ ಗಾಂಧಿ ಮೈದಾನದಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಜಾಥಾ ತೆರಳಲು ವಿದ್ಯಾರ್ಥಿಗಳು ಪ್ರಯತ್ನಿಸಿದಾಗ ಪೋಲಿಸರು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ಅವರೂ ವಿದ್ಯಾರ್ಥಿಗಳ ಜೊತೆಯಲ್ಲಿದ್ದರು.