ಕುಂಭ ಮೇಳಕ್ಕೂ ಕೊರೋನ ನಿಗ್ರಹಕ್ಕೂ ಆದಿತ್ಯನಾಥ್ ಸರಕಾರಕ್ಕೆ ಬೇಕು ಈ ಕನ್ನಡಿಗ ಐಎಎಸ್ ಅಧಿಕಾರಿ !

Update: 2020-05-10 05:07 GMT
Photo: facebook.com/Suhas L Y

ಹೊಸದಿಲ್ಲಿ, ಮೇ 10 : ಉತ್ತರ ಪ್ರದೇಶದಲ್ಲಿ ಸೇವೆಯಲ್ಲಿರುವ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ದಕ್ಷತೆಗಾಗಿ ಹಾಲಿ ಸಿಎಂ ಆದಿತ್ಯನಾಥ್ ಹಾಗು ಈ ಹಿಂದಿನ ಸಿಎಂ ಅಖಿಲೇಶ್ ಯಾದವ್ ಇಬ್ಬರಿಂದಲೂ ಶಹಬ್ಬಾಸ್ ಪಡೆದಿದ್ದ ಯತಿರಾಜ್ ಇದೀಗ ನೋಯ್ಡಾದಲ್ಲಿ ಕೊರೊನ ಸೋಂಕು ತಡೆಯಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ರಾಷ್ಟ್ರೀಯ ಮಾಧ್ಯಮಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ನೋಯ್ಡಾದಲ್ಲಿ ಒಂದೇ ಸಮನೆ ಏರುತ್ತಿರುವ ಕೊರೊನ ಸೋಂಕಿತರ ಸಂಖ್ಯೆ ಬಗ್ಗೆ ಮಾರ್ಚ್ 30 ರಂದು ಪರಿಶೀಲನೆ ಸಭೆ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಲ್ಲಿನ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಿಗೇ ಜಿಲ್ಲಾಧಿಕಾರಿ ರಜೆ ಮೇಲೆ ಹೋದರು. ತಕ್ಷಣ ಆದಿತ್ಯನಾಥ್ ತನ್ನ ನೆಚ್ಚಿನ ಅಧಿಕಾರಿ ಸುಹಾಸ್ ಗೆ ನೋಯ್ಡಾ ಜಿಲ್ಲಾಧಿಕಾರಿಯಾಗಿ ಬರಲು ಆದೇಶಿಸಿದರು. ರಜೆಯಲ್ಲಿದ್ದ ಸುಹಾಸ್ ಕೂಡಲೇ ನೋಯ್ಡಾ ತಲುಪಿ ಕ್ಷಣ ತಡಮಾಡದೆ ನೇರವಾಗಿ ಕೆಲಸಕ್ಕಿಳಿದಿದ್ದಾರೆ. 

ಅಂತರ್ ರಾಷ್ಟ್ರೀಯ ಚಿನ್ನ ಗೆದ್ದ ಪ್ಯಾರಾ ಶಟ್ಲರ್ ಕೂಡ ಆಗಿರುವ ಸುಹಾಸ್ ಮೊದಲ ದಿನವೇ 16 ಉದ್ಯೋಗಿಗಳು ಸೋಂಕಿತರಾಗಿದ್ದ ಕಂಪೆನಿ ಸೀಲ್ ಡೌನ್ ಮಾಡಿಸಿದರು. ಜೊತೆಗೆ ಉದ್ಯೋಗಿಗಳ ಪ್ರಯಾಣ ವಿವರ ಬಚ್ಚಿಟ್ಟಿದ್ದಕ್ಕೆ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿದರು. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಸುಹಾಸ್ 900 ಅಧಿಕಾರಿಗಳ 300 ಕಣ್ಗಾವಲು ತಂಡಗಳನ್ನು ರಚಿಸಿದ್ದಾರೆ. ಎಲ್ಲ ಕಂಟೇನ್ಮೆಂಟ್ ಪ್ರದೇಶಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳಿಗಾಗಿಯೂ ಪ್ರಯಾಣಕ್ಕೆ ನಿರ್ಬಂಧ ಹಾಕಿದ್ದಾರೆ. ದಿಲ್ಲಿ ನೋಯ್ಡಾ ಗಡಿ ಬಂದ್ ಮಾಡಿದ್ದಾರೆ. ನೋಯ್ಡಾದ ಎಲ್ಲ ಉದ್ಯಮಗಳಿಗೂ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.  

2019 ರಲ್ಲಿ ಆದಿತ್ಯನಾಥ್ ಸರಕಾರಕ್ಕೆ ಅತ್ಯಂತ ಮಹತ್ವದ್ದಾಗಿದ್ದ ಕುಂಭ ಮೇಳ ನಡೆದಾಗಲೂ ಅಲಹಾಬಾದ್ ಜಿಲ್ಲಾಧಿಕಾರಿಯಾಗಿದ್ದಿದ್ದು ಇದೇ ಸುಹಾಸ್ . ಆಗ ಕುಂಭ ಮೇಳದಲ್ಲೇ ಉತ್ತರ ಪ್ರದೇಶ ಸರಕಾರದ ಸಂಪುಟ ಸಭೆ ಏರ್ಪಡಿಸಿ ಗಮನ ಸೆಳೆದಿದ್ದರು ಸುಹಾಸ್. 

ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಹೌದು: ಬಲಗಾಲಲ್ಲಿ  ಪೋಲಿಯೋ ಬಳಿಕ ಉಂಟಾಗುವ ಊನತೆ ಇರುವ ಸುಹಾಸ್ ಪುರುಷರ ಸಿಂಗಲ್ಸ್ ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ವರ್ಲ್ಡ್ ನಂಬರ್ 2 ಸ್ಥಾನದಲ್ಲಿದ್ದಾರೆ. 2016 ಏಷಿಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇವರು ಗೆಲ್ಲುವ ಮೂಲಕ ಇಂತಹ ಚಾಂಪಿಯನ್ ಶಿಪ್ ಗೆದ್ದ ದೇಶದ ಪ್ರಪ್ರಥಮ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರ ತಂದೆ ದಿವಂಗತ ಯತಿರಾಜ್ ಎಲ್.ಕೆ ಅವರು ಸರಕಾರಿ ಉದ್ಯೋಗಿಯಾಗಿದ್ದರು. ತಾಯಿಯ ಹೆಸರು ಜಯಶ್ರೀ ಸಿ.ಎಸ್ . ಮಂಡ್ಯ, ಶಿವಮೊಗ್ಗ ಇತ್ಯಾದಿ ಕಡೆಗಳಲ್ಲಿ ಪ್ರಾಥಮಿಕ, ಪ್ರೌಢ , ಕಾಲೇಜು ಶಿಕ್ಷಣ ಪಡೆದ ಸುಹಾಸ್ ಸುರತ್ಕಲ್ ನ ಎನ್ಐಟಿಕೆಯಲ್ಲಿ ಪದವಿ ಪಡೆದಿದ್ದರು.

ಈ ಹಿಂದೆ ಆಗ್ರಾ, ಆಝಮ್ ಗಢ , ಮಥುರಾ, ಮಹಾರಾಜ್ ಗಂಜ್, ಹತ್ರಾಸ್, ಸೋನಾಭದ್ರ , ಜಾವುನಪುರ, ಅಲಹಾಬಾದ್ ( ಪ್ರಯಾಗ್ ರಾಜ್ ) ಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಹಾಸ್ ದಕ್ಷ, ಜನಪರ ಅಧಿಕಾರಿ ಎಂದು ಹೆಸರು ಪಡೆದವರು. 2016 ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಶ್ ಭಾರತಿ ಪ್ರಶಸ್ತಿಗೆ ಪಾತ್ರರಾದವರು. ಚುನಾವಣಾ ನಿರ್ವಹಣೆ, ಕಂದಾಯ ಆಡಳಿತ ಇತ್ಯಾದಿಗಳಲ್ಲಿ ದಕ್ಷ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದವರು ಸುಹಾಸ್.

ಇವರ ಪತ್ನಿ ರಿತು ಸುಹಾಸ್ ಅವರು ಅಲಹಾಬಾದ್ ನಲ್ಲಿ ಅಪರ ಮುನಿಸಿಪಲ್ ಕಮಿಷನರ್ ಆಗಿದ್ದಾರೆ. ಈಗಾಗಲೇ ತಾನು ನಿರ್ವಹಿಸಿದ ಎಲ್ಲ ಹುದ್ದೆಗಳಲ್ಲಿ ವ್ಯಾಪಕ ಜನಮನ್ನಣೆ ಗಳಿಸಿರುವ ಸುಹಾಸ್ ಅವರಿಗೆ ರಾಜ್ಯದಲ್ಲೇ ಅತಿಹೆಚ್ಚು ಕೊರೊನ ಪೀಡಿತರ ಜಿಲ್ಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರುವ ಮಹತ್ವದ ಜವಾಬ್ದಾರಿ ನೀಡಿದ್ದು ಗಮನಾರ್ಹ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News