ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಪ್ರಸಾರ ಆರೋಪ: ಮಹಾ ಪೊಲೀಸರಿಂದ 366 ಪ್ರಕರಣ ದಾಖಲು

Update: 2020-05-10 16:52 GMT

ಮುಂಬೈ, ಮೇ. 10: ಲಾಕ್‌ಡೌನ್ ಜಾರಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು, ತಪ್ಪು ಮಾಹಿತಿ ಹಾಗೂ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪಗಳಿಗೆ ಸಂಬಂಧಿಸಿ ಒಟ್ಟು 366 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

‘‘ಫೇಸ್‌ಬುಕ್, ವಾಟ್ಸ್‌ಆ್ಯಪ್, ಟಿಕ್‌ಟೊಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿಗಳು ಹಾಗೂ ವದಂತಿಗಳನ್ನು ಹರಡುವ ಕೆಲವು ಸಮಾಜವಿರೋಧಿ ಶಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ’’ ಎಂದು ಮಹಾರಾಷ್ಟ್ರ ಪೊಲೀಸ್ ಸೈಬರ್ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೀಡ್ ನಗರದಲ್ಲಿ ಈ ರೀತಿಯ 35 ಪ್ರಕರಣಗಳು ದಾಖಲಾಗಿದ್ದು ರಾಜ್ಯದಲ್ಲೇ ಗರಿಷ್ಠವಾಗಿದೆ. ಪುಣೆ ಗ್ರಾಮಾಂತರದಲ್ಲಿ 29, ಜಲಗಾಂವ್‌ನಲ್ಲಿ 26 ಹಾಗೂ ಮುಂಬೈನಲ್ಲಿ 21 ಪ್ರಕರಣಗಳು ದಾಖಲಾಗಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

155 ಪ್ರಕರಣಗಳು ವ್ಯಾಟ್ಸ್‌ಆಪ್ ಪೋಸ್ಟ್‌ಗಳಾಗಿವೆ. 143 ಫೇಸ್‌ಬುಕ್, 16 ಟಿಕ್‌ಟಾಕ್, ಆರು ಟ್ವಿಟರ್ ಹಾಗೂ ಇರ ನಾಲ್ಕು ಇನ್‌ಸ್ಟಾಗ್ರಾಂ ಮತ್ತಿತರ ಜಾಲತಾಣಗಳಲ್ಲಿ ಮಾಡಿದ ಪೋಸ್ಟ್‌ಗಳಿಗೆ ಸಂಬಂಧಿಸಿದ್ದಾಗಿವೆಯೆಂದು ಅವರು ತಿಳಿಸಿದರು.

ಫೇಸ್‌ಬುಕ್ ಮೂಲಕ ಕೋಮುಸೌಹಾರ್ದವನ್ನು ಕದಡಲು ಯತ್ನಿಸಿದ ಆರೋಪಗಳಿಗೆ ಸಂಬಂಧಿಸಿ ಚಂದ್ರಾಪುರ ಜಿಲ್ಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News