ಜೂ.1ರಿಂದ ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಬ್ರಾಂಡ್ ಮಾತ್ರ ಲಭ್ಯ

Update: 2020-05-13 15:25 GMT

ಹೊಸದಿಲ್ಲಿ,ಮೇ 13: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ವದೇಶಿ ಮಂತ್ರವನ್ನು ಪಠಿಸಿದ ಬೆನ್ನಿಗೇ ಸರಕಾರವು, ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಜೂ.1ರಿಂದ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಿದೆ.

“ಸ್ವಾವಲಂಬಿಯಾಗಿರುವಂತೆ ಮತ್ತು ಸ್ಥಳೀಯ ಉತ್ಪನ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಪ್ರಧಾನಿಯವರು ದೇಶಕ್ಕೆ ಕರೆ ನೀಡಿದ್ದು, ಇದು ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಭಾರತವನ್ನು ಜಾಗತಿಕ ನಾಯಕತ್ವದ ಪಥದಲ್ಲಿ ಒಯ್ಯುತ್ತದೆ” ಎಂದು ಗೃಹಸಚಿವ ಅಮಿತ್ ಶಾ ಅವರು ಬುಧವಾರ ಟ್ವೀಟಿಸಿದ್ದಾರೆ.

ಜನರು ಭಾರತೀಯ ಉತ್ಪನ್ನಗಳನ್ನೇ ಬಳಸಬೇಕು ಮತ್ತು ಹಾಗೆ ಮಾಡುವಂತೆ ಇತರರನ್ನೂ ಆಗ್ರಹಿಸಬೇಕು ಎಂದು ಅವರು ಹೇಳಿದ್ದಾರೆ.

“ಈ ನಿಟ್ಟಿನಲ್ಲಿ ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ(ಸಿಎಪಿಎಫ್) ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಗೃಹ ಸಚಿವಾಲಯವು ನಿರ್ಧರಿಸಿದ್ದು,ಇದು ಜೂ.1ರಿಂದ ಜಾರಿಗೊಳ್ಳುತ್ತದೆ. ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳ 50 ಲಕ್ಷ ಸದಸ್ಯರು ಸ್ವದೇಶಿ ಉತ್ಪನ್ನಗಳನ್ನು ಬಳಸಲಿದ್ದಾರೆ” ಎಂದು ಶಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳು ವಾರ್ಷಿಕ ಸುಮಾರು 2,800 ಕೋ.ರೂ.ಗಳ ಮಾರಾಟವನ್ನು ನಡೆಸುತ್ತಿವೆ.

ಇದು ಹಿಂದುಳಿಯುವ ಸಮಯವಲ್ಲ,ಇದು ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಮಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಭಾರತದ ಉತ್ಪನ್ನಗಳನ್ನೇ ಬಳಸುವ ನಿರ್ಣಯ ಕೈಗೊಂಡರೆ ದೇಶವು ಸ್ವಾವಲಂಬಿಯಾಗುತ್ತದೆ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News