ಚಿಕ್ಕಮಗಳೂರು: ಗುಹೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಇನ್ನೂ ಸಿಗದ ಪರಿಹಾರ; ಸಿಎಂ ಆದೇಶಕ್ಕೂ ಬೆಲೆ ಇಲ್ಲ !
ಚಿಕ್ಕಮಗಳೂರು, ಮೇ 14: ಅತಿವೃಷ್ಟಿಯಿಂದ ವಾಸದ ಮನೆ ಕಳೆದುಕೊಂಡಿದ್ದ ಸಂತ್ರಸ್ತರೊಬ್ಬರು ತನ್ನ ಪತ್ನಿ, ಮಕ್ಕಳೊಂದಿಗೆ ಗುಹೆಯೊಂದರಲ್ಲಿ ವಾಸವಾಗಿದ್ದ ಸುದ್ದಿ ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಸುದ್ದಿಗೆ ಸ್ಪಂದಿಸಿದ್ದ ಸಿಎಂ ಯಡಿಯೂರಪ್ಪಅವರು ಸಂತ್ರಸ್ತ ಕುಟುಂಬಕ್ಕೆ ಮನೆಮಂಜೂರು ಮಾಡಿ, ಕುಟುಂಬ ನಿರ್ವಹಣೆಗೆ 1 ಲಕ್ಷ ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆಯನ್ನೂ ನೀಡಿದ್ದರು. ವಿಪರ್ಯಾಸ ಎಂದರೆ ಸಿಎಂ ಆದೇಶಿಸಿದ್ದರೂ ಈ ಕುಟುಂಬಕ್ಕೆ ಇನ್ನೂ ಬಿಡಿಗಾಸು ನೆರವು ಸಿಗದಿರುವುದು ಬೆಳಕಿಗೆ ಬಂದಿದೆ.
ಕಳೆದ 2019ರ ಆಗಸ್ಟ್‌ನಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ನಿವಾಸಿಯಾಗಿರುವ ಅನಂತ ಎಂಬವರ ಮನೆ ಭಾರೀ ಮಳೆಗೆ ನೆಲಸಮವಾಗಿತ್ತು. ಈ ವೇಳೆ ಇವರು ಹೊಂದಿದ್ದ ಅಲ್ಪಸ್ವಲ್ಪ ಜಮೀನಿಗೂ ಹಾನಿಯಾಗಿತ್ತು. ಈ ವೇಳೆ ಸರಕಾರಕ್ಕೆ ಮನೆಗಾಗಿ ಮನವಿ ಸಲ್ಲಿಸಿದ್ದರಾದರೂ ಕಂದಾಯಾಧಿಕಾರಿ ಮಳೆಯಿಂದ ಹಾನಿಯಾದ ಜಾಗದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಬಡ ಕುಟುಂಬ ಕೆಲಸ ನಿಮಿತ್ತ ಅಲೆದಾಡುತ್ತಿತ್ತು. ಹೀಗೆ ಅಲೆದಾಡುತ್ತಲೇ ಬಾಳೆಹೊನ್ನರೂ ಹೋಬಳಿ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ವಾಸಕ್ಕೆ ಎಲ್ಲೂ ಮನೆ ಸಿಗದಿದ್ದಾಗ ಕ್ಯಾತನಮಕ್ಕಿ ಎಂಬಲ್ಲಿ ಕಾಡಿನ ಮಧ್ಯೆ ಇರುವ ಕಲ್ಲಿನ ಗುಹೆಯೊಂದರಲ್ಲಿ ವಾಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಅದೇ ಗುಹೆಯಲ್ಲಿ ವಾಸಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಡಳಿತ, ಕುಟುಂಬವನ್ನು ಗುಹೆಯಿಂದ ಕರೆ ತಂದು ಮೂಡಿಗೆರೆ ತಾಲೂಕಿನ ಹೊರನಾಡು ಗ್ರಾಪಂ ವ್ಯಾಪ್ತಿಯ ಆಶ್ರಮ ಶಾಲೆಯೊಂದರಲ್ಲಿ ಆಶ್ರಯ ಒದಗಿಸಿತ್ತು. ಈ ಸುದ್ದಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪರಿಣಾಮ ಸ್ವತಃ ಸಿಎಂ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಕರೆ ಮಾಡಿ ಸಂತ್ರಸ್ತ ಕುಟುಂಬಕ್ಕೆ ಮನೆ ಮಂಜೂರು ಮಾಡುವುದರೊಂದಿಗೆ ಕುಟುಂಬ ನಿರ್ವಹಣೆಗೆ ಕೂಡಲೇ 1 ಲಕ್ಷ ರೂ. ನೀಡುವಂತೆ ಸೂಚಿಸಿದ್ದರೆಂದು ತಿಳಿದು ಬಂದಿದೆ. ಆದರೆ, ಮುಖ್ಯಮಂತ್ರಿಯವರು ಆದೇಶಿಸಿ ಮೂರು ತಿಂಗಳಾದರೂ ಇದುವರೆಗೂ ಈ ಕುಟುಂಬಕ್ಕೆ ನಯಾ ಪೈಸೆ ಧನ ಪರಿಹಾರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ನಯಾಪೈಸೆಯೂ ಸಿಕ್ಕಿಲ್ಲ: ಅನಂತ ಅವರ ಕುಟುಂಬದ ಅಳಲು
ಅತಿವೃಷ್ಟಿಗೂ ಮುನ್ನ ತನ್ನ ವಾಸದ ಮನೆ ನೆಲಸಮವಾಗಿತ್ತು. ಗ್ರಾಮ ಪಂಚಾಯತ್‌ಗೆ ಮನೆಗಾಗಿ ಮನವಿ ಮಾಡಿದ್ದು, ಜಾಗ ಸರಿ ಇಲ್ಲ, ಅಲ್ಲಿಗೆ ಹೋಗಲು ರಸ್ತೆಯೂ ಸರಿ ಇಲ್ಲ ಎಂದು ಹೇಳಿ, ಮನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರೂ ಮನೆ ನೀಡಿಲ್ಲ. ಹೊಟ್ಟೆಪಾಡಿಗಾಗಿ ಕೂಲಿ ಮಾಡಿಕೊಂಡಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಮನೆ ಇಲ್ಲದ ಪರಿಣಾಮ ಸುಮಾರು 1 ವರ್ಷ ಗುಹೆಯಲ್ಲೇ ವಾಸ ಮಾಡಿದ್ದೇವೆ. ಇತ್ತೀಚೆಗೆ ಪೊಲೀಸರು ಬಂದು ಆಶ್ರಮ ಶಾಲೆಯಲ್ಲಿ ವಸತಿ ಕಲ್ಪಿಸಿದ್ದಾರೆ. ಹಿಂದೆ ಅತಿವೃಷ್ಟಿ ಆಗಿದ್ದ ವೇಳೆ 2 ಸಾವಿರ ಹಣ, ಸ್ವಲ್ಪ ಅಕ್ಕಿ, ಧವಸ ಧಾನ್ಯ ಸಿಕ್ಕಿದ್ದು ಬಿಟ್ಟರೇ ಮತ್ತೆ ಇದುವರೆಗೂ 1 ರುಪಾಯಿಯನ್ನೂ ಸರಕಾರ ನೀಡಿಲ್ಲ ಎಂದು ಅನಂತ ಹಾಗೂ ಅವರ ಪತ್ನಿ ಹೇಳಿಕೆ ನೀಡಿದ್ದಾರೆ.
ಬುಧವಾರ ನಾನು ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿರುವ ಆಶ್ರಮ ಶಾಲೆಗೆ ಭೇಟಿ ನೀಡಿದಾಗ ಗುಹೆಯಲ್ಲಿ ವಾಸವಿದ್ದ ಅನಂತನ ಕುಟುಂಬವನ್ನೂ ಭೇಟಿಯಾಗಿದ್ದೆ. ಈ ಕುಟುಂಬಕ್ಕೆ ಸಿಎಂ ಮನೆ ಹಾಗೂ 1 ಲಕ್ಷ ಹಣ ನೀಡುವುದಾಗಿ ಹೇಳಿದ್ದರು. ಆದರೆ ಈ ವರೆಗೂ ಮನೆಯೂ ಸಿಕ್ಕಿಲ್ಲ, ನಯಾಪೈಸೆಯೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಸಿಎಂ ಹೇಳಿದಂತೆ ಪರಿಹಾರದ ಹಣ ಏಕೆ ನೀಡಿಲ್ಲ ಎಂದು ಮೂಡಿಗೆರೆ ತಹಶೀಲ್ದಾರ್ ಅವರನ್ನು ಕೇಳಿದಾಗ, ಸರಕಾರದ ಹಣ ಇಷ್ಟು ಬೇಗ ಬರುತ್ತೇನ್ರಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಸಿಎಂ ಮಾತಿಗೂ ಬೆಲೆ ನೀಡದ ಅಧಿಕಾರಿಗಳ ಕಾರ್ಯವೈಖರಿ ಖಂಡನೀಯ. ಸಿಎಂ ಹೇಳಿರುವಂತೆ ಜಿಲ್ಲಾಡಳಿತ ಈ ಕೂಡಲೇ ಈ ಕುಟುಂಬಕ್ಕೆ ಸೂಕ್ತ ಜಾಗ ಗುರುತಿಸಿ ಮನೆ ನಿರ್ಮಿಸಿ ಕೊಡುವ ಜೊತೆಗೆ ಕುಟುಂಬ ನಿರ್ವಹಣೆಗೆ ಕೂಡಲೇ 1 ಲಕ್ಷ ರೂ. ನೀಡಬೇಕು.
-ರಸೂಲ್ ಖಾನ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟ