ಜನತಂತ್ರದ ಸಮಾಧಿಗೆ ಕೊರೋನ ದುರ್ಬಳಕೆ

Update: 2020-05-17 17:30 GMT

ಈ ಕೊರೋನ ಕಾಲದಲ್ಲಿ ಚಿಂತಕರ ಧ್ವನಿ ಅಡಗಿಸುವ ಯತ್ನದ ಜೊತೆಗೆ ದುಡಿಯುವ ವರ್ಗದ ಹಕ್ಕುಗಳನ್ನು ಸಮಾಧಿ ಮಾಡುವ ಹುನ್ನಾರವೂ ನಡೆದಿದೆ. ಕಳೆದ ಒಂದು ಶತಮಾನದ ಅಪಾರ ತ್ಯಾಗ ಬಲಿದಾನದ ಹೋರಾಟದ ಫಲವಾಗಿ ಶ್ರಮಿಕ ವರ್ಗ ಸಂಪಾದಿಸಿದ ಹಕ್ಕುಗಳ ಅಪಹರಣ ನಡೆದಿದೆ. ಕಾರ್ಮಿಕರ ಎಂಟು ಗಂಟೆಯ ಕೆಲಸದ ಅವಧಿಯನ್ನು ಹನ್ನೆರಡು ತಾಸುಗಳಿಗೆ ಹೆಚ್ಚಿಸುವ ಕ್ರಮವನ್ನು ಬಿಜೆಪಿ ಅಧಿಕಾರದಲ್ಲಿರುವ ಕೆಲ ರಾಜ್ಯಗಳು ಈಗಾಗಲೇ ಕೈಗೊಂಡಿವೆ.


ಮನುಕುಲಕ್ಕೆ ಕಂಟಕಕಾರಿಯಾದ ಕೊರೋನ ವಿರುದ್ಧ ಇಡೀ ವಿಶ್ವವೇ ಸಾವು ಬದುಕಿನ ಸಂಘರ್ಷ ನಡೆಸಿದೆ. ಎಲ್ಲ ದೇಶಗಳ ಆರ್ಥಿಕ, ಸಾಮಾಜಿಕ ಬದುಕು ತಲ್ಲಣಗೊಂಡಿದೆ. ಭಾರತದಲ್ಲೂ ಅದರ ಹೊಡೆತಕ್ಕೆ ಸಿಕ್ಕು ಬಡವರ ಬದುಕು ಚಿಂದಿ ಆಗಿದೆ. ಗರ್ಭಿಣಿ ಪತ್ನಿಯನ್ನು ಕಟ್ಟಿಗೆಯ ಪುಟ್ಟ ತಳ್ಳುಗಾಡಿಯಲ್ಲಿ 800 ಕಿ.ಮೀ. ಎಳೆದುಕೊಂಡು ಹೋದ ಸುದ್ದಿಯನ್ನು ಕೇಳಿದ್ದೇವೆ. ನಿತ್ಯ ಇಂತಹ ನೂರಾರು ದೃಶ್ಯಗಳನ್ನು ಕಾಣುತ್ತಿದ್ದೇವೆ. ಮಾಧ್ಯಮಗಳಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ ನಮ್ಮ ದೇಶದ ಹಾದಿ ಬೀದಿಗಳಲ್ಲಿ ಇಂತಹ ಕಣ್ಣೀರಿನ ಕತೆಗಳನ್ನು ಕೇಳುತ್ತಲೇ ಇದ್ದೇವೆ. ತಮ್ಮ ರಕ್ತ ನೀರು ಮಾಡಿಕೊಂಡು ಆಕಾಶದೆತ್ತರದ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿದವರು ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿರುವುದನ್ನು ನೋಡಿದರೆ ಅಂತರಾಳ ಕಲಕುತ್ತದೆ.

ಇನ್ನು ಬೀದಿಗೆ ಬಿದ್ದವರ ಪರವಾಗಿ ಧ್ವನಿಯೆತ್ತಿದವರ ಕತೆ ಇನ್ನೂ ದಾರುಣವಾಗಿದೆ. ಮೊನ್ನೆ ಮೇ 16ಕ್ಕೆ ಆನಂದ್ ತೇಲ್ತುಂಬ್ಡೆ ಅವರ ಬಂಧನವಾಗಿ ಒಂದು ತಿಂಗಳಾಯಿತು. ಇವರೊಂದಿಗೆ ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ ಗೌತಮ ನವ್ಲಾಖಾ ಅವರನ್ನು ದಸ್ತಗಿರಿ ಮಾಡಲಾಯಿತು. ಇವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಇದರಿಂದಾಗಿ ಕೊರೋನ ಕಾಲದಲ್ಲಿ ಜೈಲಿನಲ್ಲಿರುವ ಕೈದಿಗಳನ್ನೆಲ್ಲ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿರುವಾಗ ಇವರ ವಿಷಯದಲ್ಲಿ ಉಲ್ಟಾ ಆಗಿ ಅನಾರೋಗ್ಯದಿಂದ ಬಳಲುತ್ತಿರುವ ಇವರನ್ನು ಜೈಲಿಗೆ ಹಾಕಲಾಗಿದೆ.

ಇವರು ಮಾತ್ರವಲ್ಲ ಇನ್ನು ಕೆಲವು ಚಿಂತಕರನ್ನು, ಲೇಖಕರನ್ನು ಪುಣೆ ಬಳಿಯ ಭೀಮಾ ಕೊರೇಗಾಂವ್ ಎಲ್ಘಾರ್ ಪರಿಷತ್‌ನ ಸಮಾವೇಶಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಸೆರೆಮನೆಗೆ ತಳ್ಳಲಾಗಿದೆ. ಅವರಲ್ಲಿ ಹೆಸರಾಂತ ವಕೀಲರಾದ ಸುಧಾ ಭಾರದ್ವಾಜ, ಅರುಣ್ ಪೆರೇರಾ, ಕವಿ ವರವರರಾವ್, ಸುರೇಂದ್ರ ಗಾಡ್ಲಿಂಗ್, ಗೊನ್ಸಾಲ್ವಿಸ್, ನಾಗಪುರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಶೋಮಾ ಸೇನ್ ಮುಂತಾದವರು ಸೇರಿದ್ದಾರೆ. ಭೀಮಾ ಕೊರೇಗಾಂವ್ ಪ್ರಕರಣದ ಆರೋಪವನ್ನು ಆನಂದ್ ತೇಲ್ತುಂಬ್ಡೆ ಮತ್ತು ಗೌತಮ ನವ್ಲಾಖಾ ಅವರ ಮೇಲೂ ಹೊರಿಸಲಾಗಿದೆ. ಇವರ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚಿನ ಆರೋಪವನ್ನೂ ಹೊರಿಸಲಾಗಿದೆ.

 ಫ್ಯಾಶಿಸ್ಟ್ ಶಕ್ತಿಗಳಿಗೆ ಬುದ್ಧ್ದಿಜೀವಿಗಳನ್ನು, ಸಾಹಿತಿಗಳನ್ನು ಕಂಡರೆ ಆಗುವುದಿಲ್ಲ. ತಮ್ಮ ದುರಾಡಳಿತದ ದಮನ ನೀತಿಯನ್ನು ಇವರು ಪ್ರಶ್ನಿಸುತ್ತಾರೆಂದು ಸಹಜ ಕೋಪವಿರುತ್ತದೆ. ಆನಂದ್ ತೇಲ್ತುಂಬ್ಡೆ ಬಂಧನದಲ್ಲೂ ಈ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳ ಕೈವಾಡವಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಮನಸ್ಥಿತಿಗಳು ಒಂದೆಡೆ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿಲಂಕೇಶರನ್ನು ಹತ್ಯೆ ಮಾಡಿದವು. ಇನ್ನೊಂದೆಡೆ ಪ್ರಭುತ್ವದ ಅಧಿಕಾರ ದಂಡ ಬಳಸಿಕೊಂಡು ಈ ರೀತಿ ದಮನ ಕಾಂಡ ನಡೆಸುತ್ತವೆ. ಇಟಲಿಯಲ್ಲಿ ಕಳೆದ ಶತಮಾನದಲ್ಲಿ ಅಂದರೆ 1926ನೇ ಇಸವಿಯಲ್ಲಿ ಇದೇ ರೀತಿ ಚಿಂತಕರ ದಮನ ನಡೆದಿತ್ತು. ಅಂಟೊನಿಯ ಗ್ರಾಮ್ಶಿ ಅಂಥವರು ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸ್ಸೋಲಿನಿಯ ಕೆಂಗಣ್ಣಗೆ ಗುರಿಯಾಗಿದ್ದರು.

ತೇಲ್ತುಂಬ್ಡೆ ಮುಂತಾದವರ ಬಂಧನದ ಹಿಂದೆ ಫ್ಯಾಶಿಸ್ಟ್ ಪರಿವಾರದ ಕೈವಾಡವಿರುವುದು ಸ್ಪಷ್ಟವಾಗಿದೆ. ಕೋಮುವಾದಿಗಳ ಮುಖವಾಣಿ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ ಪತ್ರಿಕೆಗಳಲ್ಲಿ ಇವರ ಮೇಲೆ ನಿರಂತರ ದಾಳಿ ನಡೆಯುತ್ತ ಬಂದಿದೆ. ಇವರನ್ನು ನಗರ ನಕ್ಸಲರೆಂದು ಕರೆದು ಅವರ ಅಮಾನವೀಯ, ಕಾನೂನು ಬಾಹಿರ ಬಂಧನವನ್ನು ಸಮರ್ಥಿಸುತ್ತ ಬರಲಾಗಿದೆ.

ಕೋಮುವಾದಿ ಫ್ಯಾಶಿಸ್ಟ್ ಸಿದ್ಧಾಂತವನ್ನು ವಿರೋಧಿಸುವವರನ್ನು, ಸಮಾನತೆಯ ಪರವಾಗಿ ಮಾತಾಡುವವರನ್ನು ಹಾಗೂ ಆದಿವಾಸಿಗಳು ಮತ್ತು ದಲಿತರ ಪರವಾಗಿ ಧ್ವನಿಯೆತ್ತುವವರನ್ನು ‘ಮಾವೋವಾದಿಗಳು, ನಗರ ನಕ್ಸಲರು’ ಎಂದು ಅವರ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಲೇ ಇದೆ. ನಕ್ಸಲರೆಂದರೆ ರಾಕ್ಷಸರು ಎಂಬಂತೆ ಬಿಂಬಿಸುತ್ತ ಬರಲಾಗಿದೆ. ಹೀಗೆ ಬಿಂಬಿಸುವವರೆಲ್ಲ ಗಾಂಧಿ ಹತ್ಯೆಯ ಸಮರ್ಥಕರು. ಗೋಡ್ಸೆ ಭಕ್ತರು ಎಂದರೆ ಅತಿಶಯೋಕ್ತಿಯಲ್ಲ.

ಹಿಂದೆ ಅಮೆರಿಕದಲ್ಲಿ ಮೆಕಾರ್ಥಿ ಎಂಬಾತ ರಾಷ್ಟ್ರಾಧ್ಯಕ್ಷನಾಗಿದ್ದ. ಆತ ಆ ಕಾಲದ ಕಮ್ಯುನಿಸ್ಟರ ವಿರುದ್ಧ ಇದೇ ರೀತಿ ದಾಳಿ ನಡೆಸಿದ್ದ. ಕಮ್ಯುನಿಸ್ಟರನ್ನು ಕಂಡ ಕಂಡಲ್ಲಿ ಹಿಡಿದು ಜೈಲಿಗೆ ತಳ್ಳಲು ಪೊಲೀಸ್ ಬಲವನ್ನು ಬಳಸಿಕೊಂಡ. ಆ ಕಾಲದಲ್ಲಿ ಇದು ಮೆಕಾರ್ಥಿಸಂ ಎಂದು ಹೆಸರಾಗಿತ್ತು. ಹಿಟ್ಲರನ ವಿರುದ್ಧ ಯುದ್ಧದಲ್ಲಿ ಆಗಿನ ಸೋವಿಯತ್ ರಶ್ಯದ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಬ್ರಿಟನ್‌ನ ಚರ್ಚಿಲ್ ಮತ್ತು ಅಮೆರಿಕದ ರೂಸ್ವೆಲ್ಟ್ ಯುದ್ಧ ಮುಗಿದ ನಂತರ ಕಮ್ಯುನಿಸ್ಟರ ವಿರುದ್ಧ ದಾಳಿ ಆರಂಭಿಸಿದ್ದು ಇತಿಹಾಸ. ರೂಸ್ವೆಲ್ಟ್ ನಂತರ ಅಮೆರಿಕದ ಚುಕ್ಕಾಣಿ ಹಿಡಿದ ರಿಪಬ್ಲಿಕನ್ ಪಕ್ಷದ ಸೆನೆಟರ್ ಜೋಸೆಫ್ ಮೆಕಾರ್ಥಿ ಕಮ್ಯುನಿಸ್ಟರ ದಮನಕ್ಕೆ ಬಹಿರಂಗ ಕರೆ ನೀಡಿದ.

‘ಸರಕಾರದ ಇಲಾಖೆಗಳಲ್ಲಿ ಪಕ್ಷದ ಸದಸ್ಯತ್ವ ಕಾರ್ಡ್ ಹೊಂದಿರುವ 260 ಕಮ್ಯುನಿಸ್ಟರ ಪಟ್ಟಿ ತನ್ನ ಬಳಿ ಇದೆ’ ಎಂದು ವಿವಾದದ ಬಿರುಗಾಳಿ ಎಬ್ಬಿಸಿದ. ಕಮ್ಯುನಿಸ್ಟರ ದಮನದ ಹೆಸರಿನಲ್ಲಿ ಆಗ ಚಿಂತಕರು, ಕಲಾವಿದರು ಮತ್ತು ಲೇಖಕರ ಮೇಲೆ ದಾಳಿ ನಡೆಯಿತು. ತನ್ನ ವಿರೋಧಿಗಳನ್ನೆಲ್ಲ ಕಮ್ಯುನಿಸ್ಟರೆಂದು ಕರೆದು ಅವರನ್ನು ವಿಚಾರಣೆಗೆ ಗುರಿಪಡಿಸಿ, ‘ನೀವು ಕಮ್ಯುನಿಸ್ಟ್ ಪಕ್ಷದ ಸದಸ್ಯರೆ ಅಥವಾ ಹಿಂದೆ ಯಾವಾಗಾದರೂ ಸದಸ್ಯರಾಗಿದ್ದೀರಾ’ ಎಂದು ಪ್ರಶ್ನಿಸಿ ಹೆದರಿಸಿ ಹತ್ತಿಕ್ಕಲಾಗುತ್ತಿತ್ತು. ಈ ಕಿರಿಕಿರಿ ತಾಳಲಾಗದೆ ಚಾರ್ಲಿ ಚಾಪ್ಲಿನ್‌ನಂತಹ ಕಲಾವಿದರು ಅಮೆರಿಕ ಬಿಟ್ಟು ಹೋಗಬೇಕಾಯಿತು. ಆದರೆ ಇದು ಬಹಳ ದಿನ ನಡೆಯಲಿಲ್ಲ. ಕೊನೆಗೆ ಅಮೆರಿಕದ ಸೆನೆಟ್ ಈತನಿಗೆ ಛೀಮಾರಿ ಹಾಕುವ ಗೊತ್ತುವಳಿ ಅಂಗೀಕರಿಸಿತು. ಆತ ಅಧಿಕಾರ ಕಳೆದುಕೊಂಡು ಕುಡಿತದ ದಾಸನಾಗಿ ಸತ್ತು ಹೋದ.

ಭಾರತದ ಇಂದಿನ ಸಂದರ್ಭದಲ್ಲಿ ಮೆಕಾರ್ಥಿಯ ಏಳು ವರ್ಷಗಳ ಆಡಳಿತ ನೆನಪಿಗೆ ಬರುತ್ತಿದೆ. ಪ್ರಭುತ್ವದ ಸೂತ್ರ ಹಿಡಿದವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರನ್ನು, ವಿರೋಧಿಸುವವರನ್ನು ಹತ್ತಿಕ್ಕಲು ತನಗಾಗದವರನ್ನೆಲ್ಲ ರಾಷ್ಟ್ರ ವಿರೋಧಿ ಎಂಬ ಆರೋಪಕ್ಕೆ ಗುರಿ ಮಾಡಲಾಗುತ್ತಿದೆ. ಆನಂದ್‌ತೇಲ್ತುಂಬ್ಡೆ ಮಾತ್ರವಲ್ಲ ಇವರ ತಾನಾಶಾಹಿಯನ್ನು ವಿರೋಧಿಸಿದ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ಅವರನ್ನೂ ರಾಷ್ಟ್ರ ವಿರೋಧಿ ಎಂದು ಕತೆ ಕಟ್ಟಿ ಅವರ ಕಾರ್ಯಕ್ರಮಗಳಿಗೆ ಅಡ್ಡ ಗಾಲು ಹಾಕಲಾಯಿತು. ಸ್ವಾಮಿ ಅಗ್ನಿವೇಶ್‌ರಂತಹ ಆರ್ಯ ಸಮಾಜದ ಸನ್ಯಾಸಿಯ ಮೇಲೆ ಹಾಡಹಗಲೇ ನಡು ರಸ್ತೆಯಲ್ಲಿ ಹಲ್ಲೆ ನಡೆಯಿತು. ಇವರ ಕಿರಿಕಿರಿಗೆ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಕೊರಗಿ ಕೊರಗಿ ಸತ್ತರು.

ಈ ಸಂದರ್ಭದಲ್ಲಿ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಯ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್‌ನ ಪುನರ್ವಿಮರ್ಶಾ ಪೀಠ ವ್ಯಕ್ತಪಡಿಸಿದ ಕಳವಳ ನೆನಪಿಗೆ ಬರುತ್ತಿದೆ. ‘ಇಂದು ದೇಶ ಒಂದು ದುರಂತ ಹಂತಕ್ಕೆ ತಲುಪಿದೆ. ನಮ್ಮ ಕಳವಳವನ್ನು ಭಯ ಮುಕ್ತವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಪ್ರತಿಯೊಬ್ಬರಿಗೆ ಪೊಲೀಸ್ ರಕ್ಷಣೆ ದೊರೆತರೆ ಮಾತ್ರ ಮುಕ್ತವಾಗಿ ಮಾತಾಡಬಹುದು ಎಂಬ ಸ್ಥಿತಿಗೆ ಬಂದಿದ್ದಾರೆ’ ಎಂದು ಈ ಪೀಠ ಹೇಳಿತ್ತು. ಈಗ ನ್ಯಾಯಾಲಯಗಳ ತೀರ್ಪುಗಳ ಬಗೆಗೂ ಜನರು ಬೀದಿಯಲ್ಲಿ ಮಾತಾಡುವಂತಾಗಿದೆ. ಈ ಕೊರೋನ ಕಾಲದಲ್ಲಿ ಚಿಂತಕರ ಧ್ವನಿ ಅಡಗಿಸುವ ಯತ್ನದ ಜೊತೆಗೆ ದುಡಿಯುವ ವರ್ಗದ ಹಕ್ಕುಗಳನ್ನು ಸಮಾಧಿ ಮಾಡುವ ಹುನ್ನಾರವೂ ನಡೆದಿದೆ. ಕಳೆದ ಒಂದು ಶತಮಾನದ ಅಪಾರ ತ್ಯಾಗ ಬಲಿದಾನದ ಹೋರಾಟದ ಫಲವಾಗಿ ಶ್ರಮಿಕ ವರ್ಗ ಸಂಪಾದಿಸಿದ ಹಕ್ಕುಗಳ ಅಪಹರಣ ನಡೆದಿದೆ. ಕಾರ್ಮಿಕರ ಎಂಟು ಗಂಟೆಯ ಕೆಲಸದ ಅವಧಿಯನ್ನು ಹನ್ನೆರಡು ತಾಸುಗಳಿಗೆ ಹೆಚ್ಚಿಸುವ ಕ್ರಮವನ್ನು ಬಿಜೆಪಿ ಅಧಿಕಾರದಲ್ಲಿರುವ ಕೆಲ ರಾಜ್ಯಗಳು ಈಗಾಗಲೇ ಕೈಗೊಂಡಿವೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಸಂಘಟಿತ ನೌಕರ ವರ್ಗದ ಮೇಲ್ಮಧ್ಯಮ ಜನರು, ‘ಮೋದಿ ಮೋದಿ’ ಎಂದು ಮತ್ತೇರಿಸಿಕೊಂಡು ಜೊತೆಗೆ ಕೋಮುವಾದದ ಅಮಲೇರಿಸಿಕೊಂಡು ಕಮಲದ ಗುರುತಿಗೆ ಓಟು ಹಾಕಿದ್ದಕ್ಕಾಗಿ ಈಗ ಬೆಲೆ ತೆರಬೇಕಾಗಿ ಬಂದಿದೆ. ದುಡಿಯುವ ವರ್ಗ ಇನ್ನಾದರೂ ಜಾತಿ, ಮತದ ಕೊಚ್ಚೆಯಿಂದ ಹೊರಬಂದು ವರ್ಗ ಪ್ರಜ್ಞೆ ಬೆಳೆಸಿಕೊಂಡು ಬೀದಿಗಿಳಿದು ಹೋರಾಡಿದರೆ ತನ್ನ ಹಕ್ಕುಗಳನ್ನು ಉಳಿಸಿಕೊಳ್ಳಬಹುದು. ಇಲ್ಲವಾದರೆ ಗುಲಾಮಗಿರಿಯ ನೊಗಕ್ಕೆ ಹೆಗಲು ಕೊಟ್ಟು ಎಲ್ಲ ಹಣೆಬರಹ ಎಂದು ತೆಪ್ಪಗಿರಬೇಕಾಗುತ್ತದೆ.

ಕೊರೋನ ನಂತರದ ದಿನಗಳು ಇನ್ನೂ ಕಷ್ಟಕರವಾಗಿವೆ. ಬಂಡವಾಳಶಾಹಿಯ ಮುಕ್ತ ಆರ್ಥಿಕ ನೀತಿ ನೆಗೆದು ಬೀಳುತ್ತಿದೆ. ಜಾಗತೀಕರಣದ ಭ್ರಮಾಲೋಕ ಕರಗುತ್ತಿದೆ. ಸಮಾನತೆಯ ಸರ್ವರ ಏಳಿಗೆಯ ಸಮತೆಯ ಮಮತೆಯ ಸಮಾಜ ಮಾತ್ರ ಈ ಬಿಕ್ಕಟ್ಟಿನಿಂದ ಭಾರತವನ್ನು ಮನುಕುಲವನ್ನು ಪಾರು ಮಾಡಬಲ್ಲದು. ಅದಕ್ಕೂ ಮೊದಲು ಇಲ್ಲಿನ ಮೆಕಾರ್ಥಿ ಮರಿಗಳನ್ನು ಜನ ತಿರಸ್ಕರಿಸಬೇಕಾಗಿದೆ.

ಆನಂದ್‌ ತೇಲ್ತುಂಬ್ಡೆ, ವರವರರಾವ್, ಸುಧಾ ಭಾರದ್ವಾಜ್, ಗೌತಮ ನವ್ಲಾಖಾ ಅಂಥವರ ಬಿಡುಗಡೆಗೆ ಹೋರಾಟದ ಜೊತೆಗೆ ಬಾಬಾ ಸಾಹೇಬರು ನೀಡಿದ ಸಂವಿಧಾನ ಎಂಬ ಬೆಳಕಿನ ಜ್ಯೋತಿಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News