ಬುಲೆಟ್ ಶಕ್ತಿಗಿಂತ ವ್ಯಾಲೆಟ್ ಶಕ್ತಿ ಪರಿಣಾಮಕಾರಿ: ಆನ್‌ಲೈನ್ ಸಂಚಲನ ಮೂಡಿಸಿದ ಸೋನಮ್
ಹೊಸದಿಲ್ಲಿ: ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಶಿಕ್ಷಣ ತಜ್ಞ ಮತ್ತು ಅನುಶೋಧಕ ಸೋನಮ್ ವಾಂಗ್ಚುಕ್ ಅವರು ಚೀನಾ ಸರಕುಗಳನ್ನು ನಿಷೇಧಿಸುವಂತೆ ನೀಡಿರುವ ಕರೆ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ.
ಚೀನಾ ಉತ್ಪಾದಿತ ಸರಕುಗಳನ್ನು ಬಹಿಷ್ಕರಿಸುವಂತೆ ಮತ್ತು ಚೀನಾದ ಆ್ಯಪ್‌ಗಳನ್ನು ಅನ್ ಇನ್‌ಸ್ಟಾಲ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ. 3 ಈಡಿಯೆಟ್ಸ್ ಚಿತ್ರದಲ್ಲಿ ಪುಂಶುಕ್ ವಾಂಗ್ಡೂ ಪಾತ್ರದಲ್ಲಿ ಮಿಂಚಿದ್ದ ಸೋನಮ್ ವಾಂಗ್ಚುಕ್ ಇತ್ತೀಚೆಗೆ ಚೈನಾ ಕೋ ಜವಾಬ್ ಸೇನಾ ದೇಗಿ ಬುಲೆಟ್ಸ್ ಸೇ, ನಾಗರಿಕ್ ದೇಂಗೆ ವ್ಯಾಲೆಟ್ ಸೆ ಎಂಬ ಶೀರ್ಷಿಕೆಯ ಯೂ-ಟ್ಯೂಬ್ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾಗರಿಕರು ಹೇಗೆ ದೇಶಕ್ಕೆ ನೆರವಾಗಬಹುದು ಎನ್ನುವುದನ್ನು ಇದರಲ್ಲಿ ವಿವರಿಸಿದ್ದಾರೆ.
ಸಾಫ್ಟ್‌ವೇರ್‌ಗಳನ್ನು ಒಂದು ವಾರದಲ್ಲಿ ಮತ್ತು ಹಾರ್ಡ್‌ವೇರ್‌ಗಳನ್ನು ಒಂದು ವರ್ಷದಲ್ಲಿ ತ್ಯಜಿಸಿ ಎಂದು ಕರೆ ನೀಡಿರುವ ಅವರು, ಹಿಮಾಲಯ ಮತ್ತು ಸಿಂಧೂ ನದಿಯ ರಮಣೀಯ ಪರಿಸರದಲ್ಲಿ ಇದನ್ನು ಚಿತ್ರಿಸಿದ್ದಾರೆ. ಪರ್ವತಕ್ಕಿಂತ ಹೆಚ್ಚಾಗಿ ಸಾವಿರಾರು ಸೈನಿಕರು ಹೇಗೆ ದೇಶವನ್ನು ರಕ್ಷಿಸುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ.
ಈ ಬಾರಿ ಬುಲೆಟ್‌ನ ಶಕ್ತಿಗಿಂತ ವ್ಯಾಲೆಟ್ ಶಕ್ತಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ಹೇಳಿದ್ದಾರೆ. ದೇಶೀಯ ಸಂಘರ್ಷದ ಸ್ಥಿತಿಯನ್ನು ಹತ್ತಿಕ್ಕುವ ಸಲುವಾಗಿ ಅಂತರ್ ರಾಷ್ಟ್ರೀಯವಾಗಿ ಗಡಿ ತಗಾದೆ ತೆಗೆದಿದೆ ಎಂದು ಒಂಬತ್ತು ನಿಮಿಷಗಳ ವೀಡಿಯೊದಲ್ಲಿ ಹೇಳಿದ್ದಾರೆ.