ಪ್ರತ್ಯೇಕತಾವಾದಿ ನಾಯಕನ ಅಳಿಯನನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಮುಂದಾದ ಮೋದಿ ಸರ್ಕಾರ
Update: 2020-06-07 15:54 GMT
ಹೊಸದಿಲ್ಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಮಿಯಾನ್ ಅಬ್ದುಲ್ ಖಯೂಮ್ ಅವರ ಅಳಿಯ, ಶ್ರೀನಗರದ ಹಿರಿಯ ವಕೀಲ ಜಾವೇದ್ ಇಕ್ಬಾಲ್ ವಾನಿ ಅವರನ್ನು ಜಮ್ಮು ಕಾಶ್ಮೀರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ ಎಂದು theprint.in ವರದಿ ಮಾಡಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಿಗೆ ಪತ್ರ ಬರೆದು, ವಾನಿ ಅವರ ವಿವರಗಳನ್ನು ಕೇಳಿದೆ. ಈ ಮೂಲಕ ವಾರಂಟ್ ಆಫ್ ಅಪಾಯಿಂಟ್ ಮೆಂಟ್‍ಗೆ ಸಿದ್ಧತೆ ನಡೆಸಿದೆ. ಕೊನೆ ಕ್ಷಣದ ಬದಲಾವಣೆಗಳಿಲ್ಲದಿದ್ದಲ್ಲಿ ವಾನಿಯವರ ನೇಮಕಾತಿ ಅಧಿಸೂಚನೆ ಮುಂದಿನ ವಾರ ಹೊರಬೀಳಲಿದೆ ಎನ್ನಲಾಗಿದೆ.
ಜಮ್ಮು ಕಾಶ್ಮೀರ ಹೈಕೋರ್ಟ್ ಕೊಲಿಜಿಯಂ ಕಳೆದ ಮಾರ್ಚ್‍ನಲ್ಲಿ ವಾನಿಯವರನ್ನು ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸ್ಸು ಮಾಡಿತ್ತು. ಇವರ ಜತೆಗೆ ರಜನೀಶ್ ಓಶ್ವಾಲ್, ರಾಹಿಲ್ ಭಾರ್ತಿ ಮತ್ತು ಮೋಕ್ಷ ಕಾಝ್ಮಿ ಖಜೂರಿಯಾ ಅವರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ.