ನೀರವ್ ಮೋದಿ, ಚೋಕ್ಸಿಗೆ ಸೇರಿದ 1,350 ಕೋ.ರೂ. ಮೌಲ್ಯದ ಆಭರಣಗಳು ಭಾರತಕ್ಕೆ ವಾಪಸ್

Update: 2020-06-10 16:51 GMT

ಹೊಸದಿಲ್ಲಿ,ಜೂ.10: ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸೇರಿದ 1,350 ಕೋ.ರೂ. ಮೌಲ್ಯದ 2,340 ಕೆಜಿ ತೂಕದ ಆಭರಣಗಳನ್ನು ಜಾರಿ ನಿರ್ದೇಶನಾಲಯ (ಈ.ಡಿ)ವು ಭಾರತಕ್ಕೆ ವಾಪಸ್ ತಂದಿದೆ. ಪಾಲಿಷ್ ಮಾಡಲಾದ ವಜ್ರಗಳು, ಮುತ್ತುಗಳು ಮತ್ತು ಚಿನ್ನಾಭರಣಗಳು ಇವುಗಳಲ್ಲಿ ಸೇರಿದ್ದು,ತಮ್ಮ ವಿರುದ್ಧ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೋದಿ ಮತ್ತು ಚೋಕ್ಸಿ ಇವುಗಳನ್ನು ದುಬೈಗೆ ರವಾನಿಸಿದ್ದರು ಎನ್ನಲಾಗಿದೆ.

ಮೋದಿ ಮತ್ತು ಚೋಕ್ಸಿ ನಿಯಂತ್ರಿತ ಕಂಪನಿಗಳಿಗೆ ಸೇರಿದ ವಜ್ರ,ಮುತ್ತು,ಚಿನ್ನಾಭರಣಗಳ ಸುಮಾರು 108 ಪ್ಯಾಕೇಜ್‌ಗಳನ್ನುಈ.ಡಿ.ಹಾಂಗ್‌ಕಾಂಗ್‌ನಿಂದ  ‘ಯಶಸ್ವಿಯಾಗಿ ಆಮದು’ ಮಾಡಿಕೊಂಡಿದೆ. 2018ರಲ್ಲಿ ಅಧಿಕಾರಿಗಳ ವಿಚಾರಣೆಯಿಂದ ನುಣುಚಿಕೊಳ್ಳುತ್ತಿದ್ದಾಗ ಇವರಿಬ್ಬರೂ ಈ ಆಭರಣಗಳನ್ನು ಹಾಂಗ್‌ಕಾಂಗ್‌ನಿಂದ ದುಬೈಗೆ ಸಾಗಿಸಲು ಯೋಜಿಸಿದ್ದರು.

ಗುಪ್ತಚರ ಸಂಸ್ಥೆಗಳು ನೀಡಿದ್ದ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದಿದ್ದ ಈ.ಡಿ.ಯು ಪಿಎನ್‌ಬಿ ಸಾಲ ಹಗರಣ ಪ್ರಕರಣದಲ್ಲಿ ಈ ಆಭರಣಗಳನ್ನು ಅಧಿಕೃತವಾಗಿ ಜಪ್ತಿ ಮಾಡಲು ಸಾಧ್ಯವಾಗುವಂತೆ ಅವುಗಳನ್ನು ಭಾರತಕ್ಕೆ ರಫ್ತು ಮಾಡಿಸಲು ಹಾಂಗ್‌ಕಾಂಗ್‌ನಲ್ಲಿ ಪ್ರಯತ್ನಗಳನ್ನು ನಡೆಸಿತ್ತು.

ಆಭರಣಗಳನ್ನು ಮುಂಬೈಗೆ ತರಲಾಗಿದ್ದು,32 ಪ್ಯಾಕೇಜ್‌ಗಳು ನೀರವ್ ಮೋದಿಗೆ ಮತ್ತು 76 ಪ್ಯಾಕೇಜ್‌ಗಳು ಚೋಕ್ಸಿಗೆ ಸೇರಿದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಸಿಬಿಐ ತಮ್ಮ ವಿರುದ್ಧ ತನಿಖೆಯನ್ನು ಆರಂಭಿಸುವ ಮುನ್ನವೇ 2018ರಲ್ಲಿ ಈ ಜೋಡಿ ಭಾರತದಿಂದ ಪರಾರಿಯಾಗಿತ್ತು.

 ಈ.ಡಿ.ಅವರ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ತನಿಖೆಯನ್ನು ನಡೆಸುತ್ತಿದೆ. ಕಳೆದ ವರ್ಷ ಲಂಡನ್‌ನಲ್ಲಿ ಬಂಧಿಸಲ್ಪಟ್ಟಿರುವ  ನೀರವ್ ಮೋದಿ ಭಾರತಕ್ಕೆ ತನ್ನ ಗಡಿಪಾರಿನ ವಿರುದ್ಧ ಜೈಲಿನಿಂದಲೇ ಕಾನೂನು ಸಮರ ನಡೆಸುತ್ತಿದ್ದಾನೆ.

 ಮೋದಿ ಬ್ಯಾಂಕುಗಳಿಗೆ ಪಂಗನಾಮ ಹಾಕಿರುವ ಹಣದಲ್ಲಿ ಸ್ವಲ್ಪವನ್ನಾದರೂ ವಸೂಲು ಮಾಡುವ ಪ್ರಯತ್ನದಲ್ಲಿ ತನಿಖಾ ಸಂಸ್ಥೆಗಳು ರೋಲ್ಸ್ ರಾಯ್ಸ್ ಕಾರು,ಖ್ಯಾತ ಕಲಾವಿದರಾದ ಎಂ.ಎಫ್ ಹುಸೇನ್ ಮತ್ತು ಅಮೃತಾ ಶೇರ್ಗಿಲ್ ಅವರ ಪೇಂಟಿಂಗ್‌ಗಳು ಸೇರಿದಂತೆ ಆತನ ಹೆಚ್ಚಿನ ಆಸ್ತಿಗಳನ್ನು ಹರಾಜು ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News