ಪತ್ರಕರ್ತರ ವಿರುದ್ಧ ಎಫ್‌ಐಆರ್: ಭಾರತೀಯ ಪತ್ರಕರ್ತರ ಒಕ್ಕೂಟ ಖಂಡನೆ

Update: 2020-06-10 17:49 GMT

ಹೊಸದಿಲ್ಲಿ, ಜೂ.10: ಪತ್ರಕರ್ತರಾದ ವಿನೋದ್ ದುವಾ, ವಿವೇಕ್ ಮಿಶ್ರಾ ಮತ್ತು ಅಜಯ್ ಭದೌರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿರುವ ಭಾರತೀಯ ಪತ್ರಕರ್ತರ ಒಕ್ಕೂಟ, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿ ಹಾಗೂ ಮಾಧ್ಯಮದವರನ್ನು ಭಯ ಪಡಿಸುವ ಉಪಕ್ರಮವಾಗಿದೆ ಎಂದು ಹೇಳಿದೆ. ಪತ್ರಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳು ಈ ಹಿಂದಿನಂತೆಯೇ ಅಸಹಿಷ್ಣುತೆಯ ಪ್ರಕ್ರಿಯೆಯಾಗಿದೆ ಮತ್ತು ಪರಿಸ್ಥಿತಿ, ಘಟನೆಯ ವರದಿ ಮಾಡದಂತೆ ಪತ್ರಕರ್ತರನ್ನು ಬೆದರಿಸುವ ಏಕೈಕ ಉದ್ದೇಶದಿಂದ ಕೂಡಿದೆ. ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು. ಪ್ರಜೆಗಳ ಮಾಹಿತಿ ಹಕ್ಕನ್ನು ಆಡಳಿತ ವರ್ಗ ಮತ್ತು ಪೊಲೀಸರು ನಿರಾಕರಿಸಬಾರದು ಎಂದು ಪತ್ರಕರ್ತರ ಒಕ್ಕೂಟ ಒತ್ತಾಯಿಸಿದೆ.

 ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುವ ತನ್ನ ಕಾರ್ಯಕ್ರಮದಲ್ಲಿ ಸುಳ್ಳು ಸುದ್ಧಿ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ದುವಾ ವಿರುದ್ಧ ದಿಲ್ಲಿ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಉತ್ತರಪ್ರದೇಶದ ವಿಜಯ್‌ಪುರದಲ್ಲಿ ಸಮುದಾಯ ಅಡುಗೆಮನೆಯನ್ನು ಮುಚ್ಚಿರುವ ಬಗ್ಗೆ ಟ್ವೀಟ್ ಮಾಡಿದ ಬಳಿಕ ಅಜಯ್ ಭದೂರಿಯಾ ವಿರುದ್ಧ ಹಾಗೂ ಉತ್ತರಪ್ರದೇಶ ಸರಕಾರ ನಿರ್ಮಿಸಿರುವ ಗೋಶಾಲೆಗಳು ಕಾರ್ಯನಿರ್ವಹಿಸದ ಬಗ್ಗೆ ವರದಿ ಮಾಡಿದ್ದ ವಿವೇಕ್ ಮಿಶ್ರಾ ವಿರುದ್ಧ ಉತ್ತರಪ್ರದೇಶದ ಫತೇಹ್‌ಪುರ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭದೂರಿಯಾ ಹಾಗೂ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಜೂನ್ 7ರಂದು ಫತೇಹ್‌ಪುರದಲ್ಲಿ ಪತ್ರಕರ್ತರು ಗಂಗಾನದಿಯಲ್ಲಿ ಜಲಸತ್ಯಾಗ್ರಹ ನಡೆಸಿದ್ದು ಜಿಲ್ಲಾಧಿಕಾರಿ ಸಂಜೀವ್ ಸಿಂಗ್‌ರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News