ತಮಿಳುನಾಡಿನ 1018 ಸ್ಥಳಗಳ ಆಂಗ್ಲ ಹೆಸರುಗಳು ಮೂಲ ತಮಿಳು ಹೆಸರಿಗೆ ಬದಲಾವಣೆ

Update: 2020-06-11 13:02 GMT

ಚೆನ್ನೈ: ಚೆನ್ನೈ ನಗರದ ಖ್ಯಾತ ಪ್ರದೇಶ 'ತಿರುವಲ್ಲಿಕೇನಿ'ಯನ್ನು ಇನ್ನು ಮುಂದೆ ಟ್ರಿಪ್ಲಿಕೇನ್ ಎಂದು ಬರೆಯುವ ಹಾಗಿಲ್ಲ. ಈ ಆಂಗ್ಲ ಪದವನ್ನು ತೆಗೆದು ಹಾಕಿ ಅದರ ಬದಲು ಮೂಲ ತಮಿಳು ಹೆಸರನ್ನೇ ಉಳಿಸಿಕೊಳ್ಳಲಾಗುವುದು. ತಮಿಳುನಾಡಿನ 37 ಕಂದಾಯ ಜಿಲ್ಲೆಗಳಲ್ಲಿನ ಹಲವು ಪ್ರದೇಶಗಳಿಗಿರುವ ಆಂಗ್ಲ ಹೆಸರುಗಳ ಬದಲಿಗೆ ಅವುಗಳ ಮೂಲ ತಮಿಳು ಹೆಸರನ್ನೇ ಉಳಿಸಿಕೊಳ್ಳುವ ಕುರಿತಂತೆ 2018-19ರಲ್ಲಿ ತಮಿಳು ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವ ಮಫೊಯಿ ಕೆ ಪಾಂಡಿಯರಾಜನ್ ವಿಧಾನಸಭೆಯಲ್ಲಿ ಘೋಷಿಸಿದ್ದರು. ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರ ಈಗ ಕ್ರಮ ಕೈಗೊಂಡಿದೆ. ಇದರಂಗವಾಗಿ ತಮಿಳುನಾಡಿನ ಒಟ್ಟು 1018 ಸ್ಥಳಗಳ ಹೆಸರುಗಳಿಗೆ ತಿದ್ದುಪಡಿ ತರಲಾಗುವುದು. ಈ ಕಾರ್ಯದ ಜವಾಬ್ದಾರಿಯನ್ನು ಆಯಾಯ ಸ್ಥಳೀಯಾಡಳಿತ ಮತ್ತು ಕಂದಾಯ ವಿಭಾಗಗಳಿಗೆ ವಹಿಸಲಾಗಿದೆ.

ಸರಕಾರದ ಆದೇಶದಲ್ಲಿ ಈ 1018 ಸ್ಥಳಗಳ ತಮಿಳು ಹೆಸರು- ಈಗಿನ ಆಂಗ್ಲ ಹೆಸರು ಹಾಗೂ ಯಾವ ಹೆಸರು ಇನ್ನು ಮುಂದೆ ಇಡಬೇಕೆಂಬುದನ್ನು ಸೂಚಿಸುತ್ತದೆ. ಉದಾಹರಣೆಗೆ ಚೆನ್ನೈ ಜಿಲ್ಲೆಯಲ್ಲಿರುವ ತಂಡಯ್ಯರಪೆಟ್ಟೈ ಪ್ರದೇಶವನ್ನು ಇಲ್ಲಿಯ ತನಕ ಆಂಗ್ಲ ಭಾಷೆಯಲ್ಲಿ ತೊಂಡೈರ್‍ಪೇಟ್ ಎಂದು ಬರೆಯಲಾಗುತ್ತಿತ್ತು, ಇನ್ನು ಮುಂದೆ ಅದನ್ನು ಇಂಗ್ಲಿಷ್‍ನಲ್ಲಿ ಮೂಲ ಹೆಸರಿನಂತೆಯೇ ಬರೆಯಬೇಕಾಗುತ್ತದೆ. ಚೆನ್ನೈನ ವೆಪೆರಿ ಪ್ರದೇಶ ಇನ್ನು ಮುಂದೆ ತಮಿಳಿನಲ್ಲಿ ಹೇಳುವಂತೆ ವೆಪ್ಪೇರಿ ಆಗಲಿದೆ. ಇನ್ನೊಂದು ಖ್ಯಾತ ಸ್ಥಳ ಮೈಲಾಪುರ ಇನ್ನು ಮುಂದೆ ಮಯಿಲಾಪ್ಪೂರ್ ಆಗಲಿದೆ. ಚೆನ್ನೈನ ಖ್ಯಾತ ರೈಲು ನಿಲ್ದಾಣ ಎಗ್ಮೋರ್ ನಿಲ್ದಾಣವನ್ನು ಇನ್ನು ಮುಂದೆ ಎಝುಂಬೂರ್ ನಿಲ್ದಾಣವೆಂದು ಕರೆಯಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News