ಭಾರತೀಯ ಮೂಲದ ವಿಜ್ಞಾನಿ ರತನ್‌ಲಾಲ್‌ಗೆ ವಿಶ್ವ ಆಹಾರ ಪುರಸ್ಕಾರ

Update: 2020-06-12 14:31 GMT

ವಾಶಿಂಗ್ಟನ್,ಜೂ.12: ಭಾರತೀಯ ಮೂಲದ ಅಮೆರಿಕ ಪ್ರಜೆ, ಖ್ಯಾತ ಮಣ್ಣಿನ ವಿಜ್ಞಾನಿ ಡಾ.ರತನ್ ಲಾಲ್ ಪ್ರತಿಷ್ಠಿತ ವಿಶ್ವ ಆಹಾರ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಣ್ಣಿನ ಆರೋಗ್ಯ ಸುಧಾರಣೆಗೊಳಿಸುವಲ್ಲಿ ಸಣ್ಣ ರೈತರಿಗೆ ನೆರವಾಗುವ ಮೂಲಕ ಜಾಗತಿಕ ಆಹಾರ ಪೂರೈಕೆಯನ್ನು ಅಧಿಕಗೊಳಿಸುವುದಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಪುರಸ್ಕಾರ ಲಭಿಸಿದೆ.

ವಿಶ್ವ ಆಹಾರ ಪುರಸ್ಕಾರವನ್ನು ಕೃಷಿ ಕ್ಷೇತ್ರದಲ್ಲಿ ನೊಬೆಲ್‌ಪ್ರಶಸ್ತಿಗೆ ಸರಿಸಮಾನವೆಂದು ಪರಿಗಣಿಸಲಾಗಿದೆ. ಪ್ರಶಸ್ತಿ ಘೋಷಣೆಯ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಲಾಲ್ ಅವರು, ‘‘ಈ ಪುರಸ್ಕಾರದ ಮೂಲಕ ಮಣ್ಣಿನ ವಿಜ್ಞಾನಕ್ಕೆ ಮಾನ್ಯತೆ ದೊರೆತಿರುವುದು ನನಗೆ ತುಂಬಾ ಸಂತಸ ತಂದಿದೆ’’ ಎಂದು ಹೇಳಿದರು. 1987ರಲ್ಲಿ ಪ್ರಥಮ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಅದನ್ನು  ಭಾರತದ ಹಸಿರು ಕ್ರಾಂತಿಯ ಜನಕರೆಂದೇ ಖ್ಯಾತರಾದ ಭಾರತೀಯ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಪಡೆದುಕೊಂಡಿದ್ದರು.

 72 ವರ್ಷ ಡಾ. ಲಾಲ್ ಅವರು ಅಮೆರಿಕದ ಓಹಿಯೋ ವಿಶ್ವವಿದ್ಯಾನಿಲಯದಲ್ಲಿ ಆಹಾರ, ಕೃಷಿ ಹಾಗೂ ಪರಿಸರ ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News