ನಮ್ಮ ತಂದೆಯ ಅಂತಿಮ ಸಂಸ್ಕಾರ ನಡೆಸಿದ್ದು ಒಬ್ಬ ಮುಸ್ಲಿಂ, ಒಬ್ಬ ಹಿಂದೂ, ಇನ್ನಿಬ್ಬರು...

Update: 2020-06-14 06:16 GMT

ಹೊಸದಿಲ್ಲಿ : ತಾಯಿಯ ಜತೆಗೆ ದೆಹಲಿಯಲ್ಲಿ ವಾಸವಿದ್ದ 26 ವರ್ಷದ ಮಹಿಳೆ ತನ್ನ 65 ವರ್ಷ ವಯಸ್ಸಿನ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬುಧವಾರ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಧರ್ಮಗುರುಗಳನ್ನು ಸಂಪರ್ಕಿಸಿ ಮುಂದೆ ಏನು ಮಾಡಬೇಕೆಂದು ಕೇಳಿದರು.

ಇಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅನುಭವ ಇಲ್ಲದ ತಾಯಿ- ಮಗಳು ತಮ್ಮ ಕ್ವಾರಂಟೈನ್ ಅವಧಿಯ 10ನೇ ದಿನ ಅಸಹಾಯಕರಾದರು. ಒಡಹುಟ್ಟಿದ ಇತರರು ಸೌದಿ ಅರೇಬಿಯಾದಲ್ಲಿದ್ದರು.

ನಾನು ಬರಲು ಸಾಧ್ಯವಿಲ್ಲ; ಅವರ ಆತ್ಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂಬ ಉತ್ತರ ಧರ್ಮಗುರುಗಳ ಕಡೆಯಿಂದ ಬಂತು. ತಾಯಿ ತನ್ನ ರಕ್ತಸಂಬಂಧಿಕರಿಗೆ ಕರೆ ಮಾಡಿ, ವೈದ್ಯಕೀಯ ಮಾರ್ಗಸೂಚಿ ಅನ್ವಯ ಆಸ್ಪತ್ರೆಯಿಂದ ಮೃತ ದೇಹ ತರಲು ನೆರವು ಯಾಚಿಸಿದರು. ಆದರೆ ಸಂಬಂಧಿಕರಿಂದಲೂ ನಕಾರಾತ್ಮಕ ಉತ್ತರ ಬಂತು.

ಮಧ್ಯಾಹ್ನ 12ರ ಸಮಯವಾದರೂ, ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಚಿಂತೆಯಿಂದ ತಾಯಿ- ಮಗಳು ಮನೆಯಲ್ಲೇ ಉಳಿದಿದ್ದರು. ಸ್ಥಳೀಯ ಪೊಲೀಸರಿಗೆ ಸುದ್ದಿ ಗೊತ್ತಾದ ಹಿನ್ನೆಲೆಯಲ್ಲಿ ಅವರು ಮನೆ ಬಿಡಲು ಅನುಮತಿ ನೀಡಿದರು. ಮತ್ತಷ್ಟು ಕರೆಗಳನ್ನು ಮಾಡಿ, ಆಸ್ಪತ್ರೆಯಲ್ಲಿ ನೆರವಾಗಲು ಇಬ್ಬರು ಪರಿಚಿತರ ನೆರವು ಪಡೆಯುವಲ್ಲಿ ಯಶಸ್ವಿಯಾದರು.

ಕಳೆದ 10 ದಿನಗಳಿಂದ ನಾವು ಕೊರೋನ ತಂದವರು ಎಂದು ನೆರೆಯವರು ದೂರುತ್ತಿದ್ದಾರೆ. ಅನಿಷ್ಟ ಎಂದು ಪರಿಗಣಿಸಿ ಯಾರೂ ಬೆಂಬಲಕ್ಕೆ ಬರಲಿಲ್ಲ. ತಂದೆ ಮೃತಪಟ್ಟಾಗ ನೆರೆಯವರು ಬಾಗಿಲು ಮುಚ್ಚಿದರು ಎಂದು ಪುತ್ರಿ ವಿವರಿಸಿದರು.

ತಂದೆಯ ಸಾವಿನ ದುಃಖ ಹಾಗೂ ವಿಧಿಪ್ರಕಾರ ಅಂತ್ಯಸಂಸ್ಕಾರ ನಡೆಸುವುದು ಹೇಗೆ ಎಂಬ ಭಯದೊಂದಿಗೆ ಲೋಕನಾಯಕ ಆಸ್ಪತ್ರೆಗೆ ತೆರಳಿದರು. ಸಂಜೆ 5ರವೇಳೆಗೆ ಎಲ್ಲ ಪ್ರಕ್ರಿಯೆ ಮುಗಿಯಿತು. ತಡವಾಗಿದ್ದರಿಂದ ಆಸ್ಪತ್ರೆ ಸಿಬ್ಬಂದಿ, ಮೃತದೇಹದ ಜತೆಗೆ ಸ್ಮಶಾನಕ್ಕೆ ಬರಲು ನಿರಾಕರಿಸಿದರು. ತಾಯಿ ಮಗಳನ್ನು ಕರೆದುಕೊಂಡು ಬಂದ ಚಾಲಕ ಕೂಡಾ ಸ್ಮಶಾನದ ಬಳಿಗೆ ಕರೆದೊಯ್ಯಲು ನಿರಾಕರಿಸಿದ.

ಆಗ ಪರಿಸ್ಥಿತಿಯ ಅರಿವು ಇದ್ದ 35 ವರ್ಷದ ಹುಸೈನ್ ಎಂಬ ಆಟೊ ಚಾಲಕನಿಗೆ ಕರೆ ಮಾಡಿದರು. ಆತ ಅವರನ್ನು ಸ್ಮಶಾನಕ್ಕೆ ಕರೆದೊಯ್ಯಲು ಒಪ್ಪಿದ. ತಾಯಿ- ಮಗಳು ನೋವಿನಲ್ಲಿದ್ದರು. ನಾನು ನಿರಾಕರಿಸಲು ಸಾಧ್ಯವಾಗಲಿಲ್ಲ. ಸಂಬಂಧಿಕರು, ಧರ್ಮಗುರುಗಳು ನಿರಾಕರಿಸಿದರು. ಅವರನ್ನು ಇಂಥ ಸ್ಥಿತಿಯಲ್ಲಿ ಕೈಬಿಡಲು ನನ್ನ ಮಾನವೀಯತೆ ಒಪ್ಪಲಿಲ್ಲ ಎಂದು ಹುಸೈನ್ ವಿವರಿಸಿದರು.

ಕೋವಿಡ್-19ನಿಂದ ಮೃತಪಟ್ಟ ಕ್ರೈಸ್ತರ ಅಂತ್ಯಸಂಸ್ಕಾರಕ್ಕಾಗಿ ನಿಗದಿಪಡಿಸಿದ ಬುದ್ಧವಿಹಾರದ ಶಂಸನ್‌ಘಾಟ್‌ಗೆ ಸಂಜೆ 6ರವೇಳೆಗೆ ತಲುಪಿದರು. ಪಕ್ಕದ ಹಿಂದೂ ರುದ್ರಭೂಮಿ ಹಾಗೂ ಮುಸ್ಲಿಂ ದಫನಭೂಮಿಯಲ್ಲಿ ಶವಗಳು ತುಂಬಿದ್ದವು. ಆದರೆ ಇದು ಖಾಲಿ ಇತ್ತು. ಕೋವಿಡ್-19 ಸಾವಿನ ಅಂತ್ಯಸಂಸ್ಕಾರದ ಶಿಷ್ಟಾಚಾರದ ಪ್ರಕಾರ 14 ಅಡಿಯ ಹೊಂಡವನ್ನು ಸ್ಮಶಾನದ ಸಹಾಯಕ ಸಂಜಯ್ ತೋಡಿದರು. ಸನಾಲ್ ಎಂಬ ಪರಿಚಿತ ನರ್ಸ್ ಒಬ್ಬರು ಪಿಪಿಇ ಕಿಟ್ ತರಿಸಿಕೊಟ್ಟು ದೇಹ ಹೂಳಲು ನೆರವಾದರು.

ಅಲ್ಲಿ ಹಾದು ಹೋಗುತ್ತಿದ್ದ ಉತ್ತರ ಭಾರತದ ಪಾಸ್ಟರ್ ಒಬ್ಬರು, ಧರ್ಮಗುರುಗಳಿಲ್ಲದೇ ನಡೆಯುವ ಅಂತ್ಯಸಂಸ್ಕಾರವನ್ನು ನೋಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಬೈಬಲ್ ಅಧ್ಯಾಯನವನ್ನು ಓದಿದರು.

''ತಂದೆಯ ಶವಪೆಟ್ಟಿಗೆ ಹೂತದ್ದು ಒಬ್ಬ ಮುಸ್ಲಿಂ ಆಟೊ ಚಾಲಕ. ಹಿಂದೂ ಸಹಾಯಕ ಮತ್ತು ಇಬ್ಬರು ದೇವರು ಕಳುಹಿಸಿದ ದೇವದೂತರು. ಮಾನವೀಯತೆ ಎಲ್ಲ ಧರ್ಮ ಹಾಗೂ ನಂಬಿಕೆಗಿಂತ ದೊಡ್ಡದು. ನಾವು ಕುರುಡಾಗಿ ಸಂಪ್ರದಾಯವನ್ನು ನಂಬುತ್ತೇವೆ ಎಂದು ಪುತ್ರಿ ಮಾನವೀಯತೆ ಕೊನೆಗೂ ಗೆದ್ದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ತಂದೆಗೆ ಸ್ವರ್ಗ ಖಂಡಿತವಾಗಿಯೂ ಸಿಗುತ್ತದೆ. ಆದರೆ ಭಯದಿಂದ ನೆರವು ನೀಡಲು ನಿರಾಕರಿಸಿದವರಿಗೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News