ತನ್ನನ್ನು ಕೊಲ್ಲುವಂತೆ ನಾಲ್ವರು ಹಂತಕರಿಗೆ ಸುಪಾರಿ ನೀಡಿದ ಉದ್ಯಮಿ !

Update: 2020-06-15 15:42 GMT

ಹೊಸದಿಲ್ಲಿ, ಜೂ.15: ವಿಪರೀತ ಸಾಲ ಮಾಡಿಕೊಂಡಿದ್ದ ಉದ್ಯಮಿಯೊಬ್ಬ, ತನ್ನ ಹೆಸರಲ್ಲಿದ್ದ ಜೀವವಿಮೆಯ ಹಣ ಕುಟುಂಬದವರಿಗೆ ಸಿಗಲಿ ಎಂಬ ಉದ್ದೇಶದಿಂದ ತನ್ನ ಹತ್ಯೆಗೇ ಸುಪಾರಿ ನೀಡಿದ ವಿಲಕ್ಷಣ ಘಟನೆ ದಿಲ್ಲಿಯಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ದಿಲ್ಲಿಯ ಐಪಿ ಬಡಾವಣೆಯ ನಿವಾಸಿ ಶಾನು ಬನ್ಸಾಲ್ ಎಂಬವರು ತನ್ನ ಪತಿ ಗೌರವ್ ಕಾಣೆಯಾಗಿರುವುದಾಗಿ ಜೂನ್ 10ರಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಗೌರವ್ ಮೃತದೇಹ ದಿಲ್ಲಿ ಹೊರವಲಯದ ರನೌಲ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ದಿನಸಿ ಅಂಗಡಿ ಹೊಂದಿದ್ದ 37 ವರ್ಷದ ಗೌರವ್ ಕಳೆದ ಫೆಬ್ರವರಿಯಲ್ಲಿ 6 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿದ್ದು ಮರು ಪಾವತಿಗೆ ಕಷ್ಟವಾಗಿತ್ತು. ಅಲ್ಲದೆ ಇವರ ಕ್ರೆಡಿಟ್ ಕಾರ್ಡ್ ಎಗರಿಸಿದ್ದ ದುಷ್ಕರ್ಮಿಗಳು 3.5 ಲಕ್ಷ ವಂಚಿಸಿದ್ದರು. ಇದರಿಂದ ಗೌರವ್ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಪಡೆದ ಪೊಲೀಸರು ತನಿಖೆ ಮುಂದುವರಿಸಿ ಗೌರವ್ ಅವರ ಮೊಬೈಲ್ ಫೋನ್ ಕರೆಗಳ ದಾಖಲೆ ಪರಿಶೀಲಿಸಿದಾಗ ಗೌರವ್ ಅಪ್ರಾಪ್ತ ವಯಸ್ಕನೊಬ್ಬನಿಗೆ ತನ್ನ ಹತ್ಯೆಗೇ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ ಸುಪಾರಿ ಪಡೆದವರಿಗೆ ಈ ವಿಷಯ ತಿಳಿದಿರಲಿಲ್ಲ.

ಸುಪಾರಿ ಪಡೆದವರಿಗೆ ತನ್ನ ಫೋಟೋ ರವಾನಿಸಿದ ಗೌರವ್, ಜೂನ್ 9ರಂದು ನಿಗದಿತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಕಾದಿದ್ದ ದುಷ್ಕರ್ಮಿಗಳು ಗೌರವ್ ಕೈಯನ್ನು ಕಟ್ಟಿ ಹಾಕಿ, ಕುತ್ತಿಗೆಗೆ ನೇಣು ಬಿಗಿದು ಮರವೊಂದಕ್ಕೆ ನೇತು ಹಾಕಿ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಯುವಕನ ಜೊತೆಗೆ, ಮನೋಜ್ ಕುಮಾರ್ ಯಾದವ್, ಸೂರಜ್ ಹಾಗೂ ಸುಮಿತ್ ಕುಮಾರ್‌ನನ್ನು ಬಂಧಿಸಲಾಗಿದೆ. ತಾನು ಸತ್ತರೆ ಜೀವವಿಮೆ ಕುಟುಂಬದವರಿಗೆ ಸಿಗುತ್ತದೆ. ಅದರಿಂದ ಅವರ ಜೀವನ ಸಾಗಬಹುದು ಎಂಬ ಉದ್ದೇಶ ಗೌರವ್ ಅವರದ್ದಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News