ಮೋದಿ ವಿನಂತಿಗೆ ಎದ್ದು ನಿಂತ ತಾಯಿ ಕಾಪಿ ಪೇಸ್ಟ್ ಮೂಲಕ ಎಲ್ಲರ ತಾಯಿಯಾದ ಕತೆ !

Update: 2020-06-19 05:45 GMT

ಹೊಸದಿಲ್ಲಿ, ಜೂ.19: ಗಾಲ್ವಾನ್ ನಲ್ಲಿ ಭಾರತ ಹಾಗೂ ಚೀನೀ ಸೈನಿಕರ ಮಧ್ಯೆ ಸಂಘರ್ಷದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಎದ್ದು ನಿಂತು ದೇಶದ ಸೈನಿಕರಿಗೆ ಗೌರವ ಸೂಚಿಸಲು ವಿನಂತಿಸಿದ್ದರು. ಪ್ರಧಾನಿಯ ಈ ಮನವಿಗೆ ಎದ್ದು ನಿಲ್ಲಲೂ ಆಗದಷ್ಟು ಅನಾರೋಗ್ಯದಲ್ಲಿದ್ದ ತಮ್ಮ ತಾಯಿ ಎದ್ದು ನಿಂತು ಕೈಜೋಡಿಸಿ ಗೌರವ ಸೂಚಿಸಿದರು ಎಂದು ಪ್ರೇರಣಾ ದವರ್ ಎಂಬವರು ಟ್ವೀಟ್ ಮಾಡಿದ್ದರು. ಅದರಲ್ಲಿ ಪ್ರಧಾನಿ ಮೋದಿ ಅವರ ಟಿವಿ  ಭಾಷಣ ಹಾಗೂ ತಮ್ಮ ತಾಯಿ ನಿಂತುಕೊಂಡು ಕೈಜೋಡಿಸಿರುವ ಫೋಟೋಗಳನ್ನು ಅವರು ಹಾಕಿದ್ದರು.  

ಇದರಲ್ಲೇನು ವಿಶೇಷ ಅಂತೀರಾ ? ಕೆಲವೇ ಗಂಟೆಗಳಲ್ಲಿ ಹತ್ತು ಹಲವು ಟ್ವಿಟರ್ ಬಳಕೆದಾರರು ಅದೇ ಫೋಟೋಗಳನ್ನು ಹಾಗು ಪ್ರೇರಣಾ ಅವರ ಟ್ವೀಟ್ ನ ಒಕ್ಕಣೆಯನ್ನೇ ಯಥಾವತ್ತಾಗಿ ಕಾಪಿ ಮಾಡಿಕೊಂಡು ನನ್ನ ಅನಾರೋಗ್ಯ ಪೀಡಿತ ತಾಯಿ ಪ್ರಧಾನಿ ಮೋದಿ ಅವರ ವಿನಂತಿ ಮೇರೆಗೆ ಎದ್ದು ನಿಂತು ಕೈಜೋಡಿಸಿ ಗೌರವ ಸೂಚಿಸಿದರು ಎಂದು ಟ್ವೀಟ್ ಮಾಡಿದರು ! 

ಅಂದರೆ ಪ್ರೇರಣಾ ಅವರ 'ತಾಯಿ' ಇದ್ದಕ್ಕಿದ್ದ ಹಾಗೆ ಟ್ವಿಟರ್ ನಲ್ಲಿ ಇವಿಷ್ಟೂ ಜನರ ತಾಯಿಯಾಗಿಬಿಟ್ಟಿದ್ದರು ! ಈ ವಿಚಿತ್ರ ಆಕಸ್ಮಿಕ ಈ ಟ್ವೀಟ್ ಸರಣಿ ಸುಮ್ಮನೆ ಆಗಿಲ್ಲ. ಪ್ರಧಾನಿ ಮನವಿಗೆ ಜನರು ಭಾರೀ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ ಎಂದು ಸಾಬೀತುಪಡಿಸಲು ಬಿಜೆಪಿ ಐಟಿ ಸೆಲ್ ಮಾಡಿದ ಕಾರ್ಯಾಚರಣೆಯಲ್ಲಿ ಎಲ್ಲೋ, ಏನೋ ಯಡವಟ್ಟಾಗಿದೆ ಎಂದು ಟ್ವಿಟರಿಗರು ಆರೋಪಿಸಿ ನಕ್ಕುಬಿಟ್ಟರು.  

ಇದಕ್ಕೆ ಹಿನ್ನೆಲೆಯೂ ಇದೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಪ್ರಶಂಸಿಸುವ ಇಂತಹ ಕಾಪಿ ಪೇಸ್ಟ್ ಆಕಸ್ಮಿಕ ಸಂಭವಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಟ್ವಿಟರ್ ನಲ್ಲಿ ಸರಣಿಯಾಗಿ ಟ್ವೀಟ್ ಮಾಡಿಸಲು ಬಿಜೆಪಿ ಐಟಿ ಸೆಲ್ ಸಿದ್ಧಪಡಿಸಿದ್ದು ಎಂದು ಹೇಳಲಾದ ದಾಖಲೆಯೊಂದನ್ನು altnews ನ ಪ್ರತೀಕ್ ಸಿನ್ಹಾ ಬಹಿರಂಗಪಡಿಸಿದ್ದರು. ಹೇಗೆ ತಾವೇ ಟ್ವೀಟ್ ಒಕ್ಕಣೆಯನ್ನು ನೀಡಿ ಈ ಐಟಿ ಸೆಲ್ ತಾವು ನೇಮಿಸಿದ ಜನರಿಂದ ಟ್ವೀಟ್ ಮಾಡಿಸುತ್ತದೆ ಎಂದು ಅವರು ಇದರಲ್ಲಿ ವಿವರಿಸಿದ್ದರು.  

ದೀಪಿಕಾ ಪಡುಕೋಣೆ ಜೆ ಎನ್ ಯುಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ಬಳಿಕವೂ ಇದು ನಡೆದಿತ್ತು. ದೀಪಿಕಾ ಅವರ ಹೊಸ ಚಿತ್ರ ಚಪಾಕ್ ಗೆ ಬುಕ್ ಮಾಡಿದ್ದ ಟಿಕೆಟ್ ಅನ್ನು ತಾವು ಕ್ಯಾನ್ಸಲ್ ಮಾಡಿದ್ದೇವೆ ಎಂದು ಹಲವರು ಟ್ವೀಟ್ ಮಾಡಿದ್ದರು. ಆದರೆ ಎಲ್ಲರ ಟ್ವೀಟ್ ನಲ್ಲೂ ಕ್ಯಾನ್ಸಲ್ ಆದ ಟಿಕೆಟ್ ಚಿತ್ರ ಮಾತ್ರ ಒಂದೇ ಇತ್ತು !  

ಈ ಬಾರಿ ಎಲ್ಲರೂ ತನ್ನ ತಾಯಿಯ ಚಿತ್ರ ಟ್ವೀಟ್ ಮಾಡಿ ನಮ್ಮ ತಾಯಿ ಎಂದು ಹೇಳಿಕೊಂಡ ಬಳಿಕ ಪ್ರೇರಣಾ ಅವರು ತಾವು ತಮ್ಮ ತಾಯಿ ಜೊತೆಗಿದ್ದ ಹಳೆ ಫೋಟೋಗಳನ್ನು ಟ್ವೀಟ್ ಮಾಡಿ ಅವರು ತನ್ನ ತಾಯಿ ಎಂದು ಸಾಬೀತುಪಡಿಸಬೇಕಾಯಿತು! ಇದರಿಂದ ಕನಿಷ್ಠ ಅವರ ಟ್ವೀಟ್ ಕಾಪಿ ಪೇಸ್ಟ್ ಅಲ್ಲ, ನಿಜವಾದ್ದು ಎಂದು ಜನರಿಗೆ ಗೊತ್ತಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News