ದೇಶ ಮೊದಲು, ಮೋದಿ ನಂತರ

Update: 2020-06-21 19:30 GMT

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿರುತ್ತವೆ. ಭಿನ್ನ ನಿಲುವು ಹೊಂದಿದವರನ್ನು ಗೌರವಿಸಿದ ಪರಂಪರೆ ಈ ದೇಶಕ್ಕೆ ಇದೆ. ಇದು ಚಾರ್ವಾಕರನ್ನು ಹತ್ತಿಕ್ಕಿದ, ಬುದ್ಧನನ್ನು ವಿದೇಶಕ್ಕೆ ಕಳಿಸಿದ, ಬಸವಣ್ಣನವರನ್ನು ಮುಗಿಸಿದ, ಸಂತ ತುಕಾರಾಮನನ್ನು ನೀರಲ್ಲಿ ಮುಳುಗಿಸಿದ ಕರಾಳ ಇತಿಹಾಸವಿದ್ದರೂ ಸ್ವಾತಂತ್ರ್ಯ ನಂತರ ಅಂಬೇಡ್ಕರರು ರೂಪಿಸಿದ ಸಂವಿಧಾನ ದೇಶ ಹೇಗೆ ಮುಂದೆ ಸಾಗಬೇಕು ಎಂಬುದಕ್ಕೆ ದಿಕ್ಸೂಚಿಯಾಗಿದೆ.


ಭಾರತ ಮತ್ತು ಚೀನಾ ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಮಂದಿ ಭಾರತೀಯ ಸೈನಿಕರು ಹುತಾತ್ಮರಾದರು. ಆ ನಂತರ ಕೊರೋನದಿಂದ ತತ್ತರಿಸಿರುವ ದೇಶದಲ್ಲಿ ಒಮ್ಮಿಂದೊಮ್ಮೆಲೇ ಕೆಲವರಲ್ಲಿ ಯುದ್ಧೋತ್ಸಾಹ ಮೂಡಿತು. ಚೀನಾದ ಮೇಲೆ ಸಮರ ಸಾರುವ, ಆ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬಹಿಷ್ಕರಿಸುವ ಹೇಳಿಕೆಗಳು ಬರತೊಡಗಿದವು.

‘ಮೋದಿ ಪ್ರಧಾನಿ ಆಗಿಲ್ಲದಿದ್ದರೆ ಕೊರೋನ ಇನ್ನೂ ಭೀಕರ ಪರಿಣಾಮ ಉಂಟು ಮಾಡುತ್ತಿತ್ತು ಎಂದು ಹೇಳುತ್ತಾ ಬಂದವರು ಮೋದಿಯವರಿಂದ ಭಾರತ ಸುರಕ್ಷಿತವಾಗಿದೆ. ಕಾಶ್ಮೀರ, ಲಡಾಖ್‌ಗಳು ನಮ್ಮ ದೇಶದಲ್ಲಿ ಉಳಿದಿವೆ’ ಎಂದು ಆವೇಶದಿಂದ ಹೇಳತೊಡಗಿದರು. ವ್ಯಕ್ತಿ ಪೂಜೆ ಉತ್ತುಂಗಕ್ಕೆ ಹೋಗಿರುವ ಈ ಕಾಲಘಟ್ಟದಲ್ಲಿ ಇಂತಹ ಭಾವಾವೇಶದ ಮಾತುಗಳು ಸಹಜ. ಇದು ಎಲ್ಲಿಯವರೆಗೆ ಎಂದರೆ, ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತ ಪ್ರಚಾರ ನಡೆಯುತ್ತ ಬಂತು.

ಕಾಶ್ಮೀರ ವಿಷಯದಲ್ಲಿ ಮೋದಿ ಸರಕಾರ ಕೈಗೊಂಡ ತೀರ್ಮಾನದಿಂದ ಒಂದು ಜನ ವರ್ಗದಲ್ಲಿ ಅವರ ಬಗ್ಗೆ ಅಭಿಮಾನ ಉಕ್ಕೇರಿತು. ಆದರೆ ಇಂತಹ ಮೋದಿಯವರು ಕಳೆದ ಶುಕ್ರವಾರ ಸರ್ವಪಕ್ಷ ನಾಯಕರ ಸಭೆಯಲ್ಲಿ, ‘ಭಾರತದ ಭೂ ಪ್ರದೇಶವನ್ನು ಯಾರೂ ಅತಿಕ್ರಮಣ ಮಾಡಿಲ್ಲ’ ಅಥವಾ ‘ಯಾರು ನಮ್ಮ ಗಸ್ತು ಠಾಣೆ ವಶಪಡಿಸಿಕೊಂಡಿಲ್ಲ’ ಎಂದು ಹೇಳಿದ ನಂತರ ಭಕ್ತರೂ ಸೇರಿದಂತೆ ಹಲವರಿಗೆ ದಿಗಿಲುಂಟಾಯಿತು.

‘ಗಡಿಯಲ್ಲಿ ಅತಿಕ್ರಮಣ ನಡೆದಿರದಿದ್ದರೆ, ಭಾರತದ ಇಪ್ಪತ್ತು ಸೈನಿಕರು ಯಾಕೆ ಸಾವನ್ನಪ್ಪಿದರು’ ಎಂಬ ಪ್ರಶ್ನೆಗಳು ಕೇಳಿಬಂದವು. ಸಮರದ ಸಂಭ್ರಮದಲ್ಲಿದ್ದ ಅನೇಕರ ಉತ್ಸಾಹ ಜರ್ರನೆ ಇಳಿಯಿತು. ಪ್ರಧಾನಿ ಹಾಗೇಕೆ ಹೇಳಿದರೆಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಬಹುಶಃ ಮೋದಿ ಅವರು ಸರ್ವಪಕ್ಷಗಳ ಸಭೆಯಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಬಂದು ಮಾತಾಡಿರಬಹುದು. ಆದರೆ, ಭಕ್ತರಿಗೆ ಇದು ಗೊಂದಲವುಂಟು ಮಾಡಿದೆ. ಮೋದಿ ಅವರನ್ನು ಅಷ್ಟ ದಿಕ್ಪಾಲಕ ಎಂದು ನಂಬಿದವರಿಗೆ, ನಂಬಿದಂತೆ ನಟಿಸುತ್ತಿರುವವರಿಗೆ ಇದು ತೀವ್ರ ಇರಿಸು ಮುರಿಸು ಉಂಟು ಮಾಡಿದ್ದು ನಿಜ.

ಭಾರತದ ಬಲಪಂಥೀಯ ಮನಸ್ಸುಗಳು ಮೋದಿಯವರಿಂದ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿವೆ. ಅವರ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತಲಾದ ಒಂದು ಸಮುದಾಯದ ಬಗೆಗಿನ ದ್ವೇಷ, ದಲಿತರು ಮತ್ತು ಇತರ ವಂಚಿತ ಸಮುದಾಯಗಳು ಪಡೆಯುತ್ತಿರುವ ಮೀಸಲಾತಿ ಬಗೆಗಿನ ಅಸಹನೆ ಅವರನ್ನು ಅಂಧ ವ್ಯಕ್ತಿ ನಿಷ್ಠೆ ಅತಿರೇಕಕ್ಕೆ ತಂದು ನಿಲ್ಲಿಸಿದೆ. ಮಕ್ಕಳಿರುವಾಗಲೇ ಮೆದುಳಿಗೆ ಮೆತ್ತಿದ ಪಾಷಾಣ ಅವರ ಚಿಂತನೆಯ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದೆ.

ಮೋದಿಯವರಾಗಲಿ, ರಾಹುಲ್ ಗಾಂಧಿಯವರಾಗಲಿ ಯಾವುದೇ ವ್ಯಕ್ತಿ ದೇಶಕ್ಕಿಂತ ದೊಡ್ಡವರಲ್ಲ. ಮೋದಿ ಬರುವುದಕ್ಕಿಂತ ಮೊದಲೂ ಭಾರತವಿತ್ತು. ಮೋದಿ ನಂತರವೂ ಇರುತ್ತದೆ. ಈ ಮಾತು ನೆಹರೂ, ವಾಜಪೇಯಿ, ದೇವೇಗೌಡ, ಮೊರಾರ್ಜಿ ದೇಸಾಯಿ, ಮನಮೋಹನ್‌ಸಿಂಗ್ ಹೀಗೆ ಎಲ್ಲರಿಗೂ ಅನ್ವಯಿಸುತ್ತದೆ. ದೇಶಕ್ಕಿಂತ ಮೋದಿ ದೊಡ್ಡವರಲ್ಲ.

ದೇಶವೆಂದರೆ ಭಾರತ. ಈ ಭಾರತ 130 ಕೋಟಿ ಜನರ ಒಕ್ಕೂಟ ವ್ಯವಸ್ಥೆ ಹೊಂದಿರುವ ಭೂ ಪ್ರದೇಶ. ಇದು ವಿಭಿನ್ನ ಸಂಸ್ಕೃತಿ, ಭಾಷೆ , ಧರ್ಮ, ಜಾತಿ, ರಾಷ್ಟ್ರೀಯತೆಗಳ ಒಕ್ಕೂಟ. ಬಾಬಾಸಾಹೇಬರ ಸಂವಿಧಾನ ಈ ನೆಲದ ರಕ್ಷಾಕವಚ. ಎಲ್ಲರನ್ನು ಒಳಗೊಂಡ ಈ ಭಾರತಕ್ಕಿಂತ ಯಾವುದೇ ವ್ಯಕ್ತಿ ಶಕ್ತಿ ದೊಡ್ಡದಲ್ಲ.

ಈ ಭಾರತ ನೆಹರೂರಿಗೆ ಅರ್ಥವಾಗಿತ್ತು. ನೆಹರೂಗೆ ಅರ್ಥವಾಗಿದೆ ಎಂದು ಗಾಂಧೀಜಿಗೆ ಗೊತ್ತಿತ್ತು. ಅಂತಲೇ ಪ್ರಧಾನಿ ಸ್ಥಾನದ ಆಯ್ಕೆಯ ಪ್ರಶ್ನೆ ಎದುರಾದಾಗ ಗಾಂಧಿ ನೆಹರೂ ಪರವಾಗಿ ಒಲವು ತೋರಿದರು. ನೆಹರೂ ನಂತರ ಬಂದ ಪ್ರಧಾನಿಗಳು ಅದೇ ದಾರಿಯಲ್ಲಿ ನಡೆದರು. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಕೂಡ ಭಾರತದ ವಿದೇಶಾಂಗ ನೀತಿಯಲ್ಲೂ ಕೈಯಾಡಿಸಲು ಹೋಗಲಿಲ್ಲ. ಹೀಗಾಗಿ ಭಾರತ ಅಲಿಪ್ತ ರಾಷ್ಟ್ರಗಳ ಒಕ್ಕೂಟದ ನಾಯಕತ್ವ ವಹಿಸಿತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ದಕ್ಷಿಣ ಏಶ್ಯ ದೇಶಗಳ ಸಾರ್ಕ್ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಆದರೆ ಈಗ?

ಈಗ ಭಾರತ ಜಗತ್ತಿನಲ್ಲಿ ಒಂಟಿಯಾಗಿದೆಯೇನೊ ಎಂಬ ಸಂದೇಹ ಬರುತ್ತದೆ. ನೆರೆಹೊರೆ ದೇಶಗಳ ಜೊತೆಗಿನ ಸಂಬಂಧವೂ ಅಷ್ಟಕ್ಕಷ್ಟೆ ಇದೆ. ನೇಪಾಳದಂತಹ ಪುಟ್ಟ ದೇಶ ಭಾರತದಂತಹ ದೊಡ್ಡ ದೇಶದ ವಿರುದ್ಧ ಗುಟುರು ಹಾಕುತ್ತಿದೆ. ಹೀಗಾಗಲು ಕಳೆದ ಆರು ವರ್ಷಗಳಿಂದ ದೇಶದ ಹೊಣೆ ಹೊತ್ತ ಸರಕಾರ ಕಾರಣವೆಂದರೆ ಯಾರೂ ಕೋಪಿಸಿಕೊಳ್ಳಬೇಕಾಗಿಲ್ಲ. ಬದಲಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

ವಿದೇಶಾಂಗ ಧೋರಣೆ ಮಾತ್ರವಲ್ಲ, ಆಂತರಿಕವಾಗಿಯೂ ಈ ಸರಕಾರ ಅನೇಕ ಸಮಸ್ಯೆಗಳನ್ನು ತಾನಾಗಿ ಹುಟ್ಟು ಹಾಕಿದೆ. 130 ಕೋಟಿ ಜನರ ದೇಶದ ನಾಯಕತ್ವ ವಹಿಸಿಕೊಂಡವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಪ್ರಜೆಗಳಲ್ಲೇ ಧರ್ಮದ, ಭಾಷೆಯ ನೆಲೆಯಲ್ಲಿ ಒಡಕುಂಟಾಗಲು ಪ್ರಚೋದನೆ ನೀಡಬಾರದು. ಹಾಗೆ ಮಾಡಲು ಹೋದರೆ ದೇಶ ದುರ್ಬಲವಾಗುತ್ತದೆ ಎಂಬ ಅರಿವಿರಬೇಕು. ಆ ಅರಿವಿನ ಕೊರತೆ ಈಗ ಎದ್ದು ಕಾಣುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿರುತ್ತವೆ. ಭಿನ್ನ ನಿಲುವು ಹೊಂದಿದವರನ್ನು ಗೌರವಿಸಿದ ಪರಂಪರೆ ಈ ದೇಶಕ್ಕೆ ಇದೆ. ಇದು ಚಾರ್ವಾಕರನ್ನು ಹತ್ತಿಕ್ಕಿದ, ಬುದ್ಧನನ್ನು ವಿದೇಶಕ್ಕೆ ಕಳಿಸಿದ, ಬಸವಣ್ಣನವರನ್ನು ಮುಗಿಸಿದ, ಸಂತ ತುಕಾರಾಮನನ್ನು ನೀರಲ್ಲಿ ಮುಳುಗಿಸಿದ ಕರಾಳ ಇತಿಹಾಸವಿದ್ದರೂ ಸ್ವಾತಂತ್ರಾ ನಂತರ ಅಂಬೇಡ್ಕರರು ರೂಪಿಸಿದ ಸಂವಿಧಾನ ದೇಶ ಹೇಗೆ ಮುಂದೆ ಸಾಗಬೇಕು ಎಂಬುದಕ್ಕೆ ದಿಕ್ಸೂಚಿಯಾಗಿದೆ.

ಆದರೆ, 2014ರಿಂದ ದೇಶದ ಅಧಿಕಾರ ಸೂತ್ರವನ್ನು ಹಿಡಿದ ಸರಕಾರ ಭಿನ್ನಾಭಿಪ್ರಾಯ ಹೊಂದಿದವರನ್ನು ದೇಶದ್ರೋಹಿ ಎಂದು ಕರೆದು ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತ ಬಂದಿರುವುದು ಬರೀ ಆರೋಪವಲ್ಲ. ಪ್ರಭುತ್ವವನ್ನು ಟೀಕಿಸಿದ ತಪ್ಪಿಗಾಗಿ ಹೆಸರಾಂತ ಕವಿ ವರವರರಾವ್, ಜಾಗತಿಕ ಮಟ್ಟದ ಚಿಂತಕ ಆನಂದ್ ತೇಲ್ತುಂಬ್ಡೆ ಮತ್ತು ಇತರ ಮಾನವ ಹಕ್ಕುಗಳ ಪರ ಹೋರಾಟಗಾರರನ್ನು ಜೈಲಿಗೆ ತಳ್ಳಿದೆ. 81 ವರ್ಷದ ವರವರರಾವ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 65ರ ಆನಂದ್ ತೇಲ್ತುಂಬ್ಡೆ ಮಧುಮೇಹ ಮತ್ತು ರಕ್ತದೊತ್ತಡದಿಂದ ತೊಂದರೆಯಲ್ಲಿದ್ದಾರೆ. ಅವರು ಜಾಮೀನಿನ ಮೇಲೆ ಬಿಡುಗಡೆಗಾಗಿ ಪರಿಪರಿಯಾಗಿ ಮನವಿ ಮಾಡುತ್ತಿದ್ದರೂ ಅದಕ್ಕೆ ಸರಕಾರ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ.

ಇವರಷ್ಟೇ ಅಲ್ಲ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರೂ ಗಾಂಧಿವಾದಿಯೂ ಆಗಿರುವ ಸಂದೀಪ್ ಪಾಂಡೆ ಅವರನ್ನು ಜೈಲಿಗೆ ತಳ್ಳಲಾಗಿದೆ.
ಹೀಗೆ ಆಂತರಿಕವಾಗಿ ಆರ್ಥಿಕ ಬಿಕ್ಕಟ್ಟು, ಜನತಾಂತ್ರಿಕ ಹಕ್ಕುಗಳ ದಮನ, ಬಾಹ್ಯವಾಗಿ ಅಕ್ಕಪಕ್ಕದ ದೇಶಗಳ ಜೊತೆಗಿನ ಹದಗೆಟ್ಟ ಸಂಬಂಧ, ಪ್ರತಿಪಕ್ಷ ರಾಜ್ಯ ಸರಕಾರಗಳನ್ನು ಉರುಳಿಸಲು ನಡೆಸುತ್ತಿರುವ ಮಸಲತ್ತು,ಇವೆಲ್ಲ ಈ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ.

ಸದಾ ಭಾವನಾತ್ಮಕ ವಿಷಯಗಳನ್ನೇ ಬಂಡವಾಳ ಮಾಡಿಕೊಂಡು ಜನರ ನಡುವೆ ಅಡ್ಡಗೋಡೆ ನಿರ್ಮಿಸಿ ಅಧಿಕಾರಕ್ಕೆ ಬರುತ್ತಿರುವ ಪಕ್ಷಕ್ಕೆ ನಿರ್ದಿಷ್ಟ ಆರ್ಥಿಕ ಕಾರ್ಯಕ್ರಮವಿಲ್ಲ. ನಾಗಪುರದ ಗುರುಗಳು ತಮ್ಮ ಹಿಂದುತ್ವ ಕಾರ್ಯಸೂಚಿಯನ್ನು ಜಾರಿಗೆ ತರಲು ಒಬ್ಬ ವ್ಯಕ್ತಿಯನ್ನೇ ಆಶ್ರಯಿಸಿ ಆತನ ಸುತ್ತ ಭ್ರಮಾಲೋಕ ಸೃಷ್ಟಸಿದ್ದಾರೆ. ಅದಕ್ಕೂ ಮೊದಲು ಎದುರಾಳಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ವಿನಾಕಾರಣ ಅಸಹನೆ ಇರುವ ಜನ ಮತ್ತು ವಂಚಿತ ಸಮುದಾಯಗಳಿಗಿರುವ ಮೀಸಲು ಸೌಕರ್ಯಗಳನ್ನು ಮೋದಿ ರದ್ದುಗೊಳಿಸುತ್ತಾರೆಂದು ನಂಬಿದ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ಭಾರತವನ್ನು ಲೂಟಿ ಮಾಡಿ ಡಬ್ಬು ಹಾಕಲು ಹೊರಟ ಕಾರ್ಪೊರೇಟ್, ಖದೀಮರ ದುಡ್ಡಿನ ಬಲ ಬೇರೆ. ಹೀಗಾಗಿ ಒಬ್ಬ ವ್ಯಕ್ತಿಯನ್ನು ದೇಶಕ್ಕಿಂತ ದೊಡ್ಡದಾಗಿ ಬಿಂಬಿಸುವ ಹುನ್ನಾರ ನಡೆದಿದೆ.

ಈ ಕಾರ್ಗತ್ತಲ ಕಾಲದಲ್ಲಿ ಬೆಳಕಿನ ದಾರಿ ಹುಡುಕ ಬೇಕಾಗಿದೆ. ಬಹುತ್ವ ಭಾರತವನ್ನು ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ