ಲಾಕ್ ಡೌನ್: ಬಾಗಿಲು ಮುಚ್ಚುವ ಭೀತಿಯಲ್ಲಿ 400 ವರ್ಷಗಳ ಇತಿಹಾಸವಿರುವ ಉದ್ಯಮ

Update: 2020-06-25 17:26 GMT

ಹೊಸದಿಲ್ಲಿ,ಜೂ.26: ಕೋವಿಡ್-19 ಲಾಕ್‌ ಡೌನ್‌ನಿಂದಾಗಿ ಎರಡು ತಿಂಗಳುಗಳ ಕಾಲ ಮುಚ್ಚುಗಡೆಗೊಂಡಿದ್ದ ಬಳಿಕ, ಉತ್ತರಪ್ರದೇಶದ ಶಹರಣ್‌ ಪುರದ ಮರದ ಕೆತ್ತನೆ ಉದ್ಯಮವು ಪುನಾರಂಭಗೊಂಡಿದೆ. ಆದರೆ 400 ವರ್ಷಗಳ ಇತಿಹಾಸವಿರುವ ಈ ಉದ್ಯಮವು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ.

 ಶಹರಣ್‌ ಪುರದಲ್ಲಿ ಉತ್ಪಾದನೆಯಾಗುವ ಮರದ ಕೆತ್ತನೆಯ ವಸ್ತುಗಳಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆಯಿದೆ. ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ , ಈ ಉತ್ಪನ್ನಗಳಿಗೆ ಈಗ ಅಂತಾರಾಷ್ಟ್ರೀಯ ಗ್ರಾಹಕರೇ ಸಿಗುತ್ತಿಲ್ಲವೆಂದು ಸ್ಥಳೀಯ ಉದ್ಯಮಿಗಳು ಹೇಳುತ್ತಾರೆ.

 ಪ್ರತಿವರ್ಷವೂ ಶಹರಣ್‌ಪುರದ ಮರದ ಕೆತ್ತನೆಯ ಉದ್ಯಮವು ಸರಾಸರಿ 400 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ.

 ಆದರೆ ಈ ವರ್ಷ ಅಂತಾರಾಷ್ಟ್ರೀಯ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿರುವುದರಿಂದ ಉತ್ಪಾದನೆಯು ಶೇ.70ರಿಂದ ಶೇ.80ಕ್ಕೆ ಇಳಿಕೆಯಾಗಲಿದೆ ಎಂದು ಸ್ಥಳೀಯ ಉದ್ಯಮಿಗಳು ಹೇಳುತ್ತಾರೆ. “ಈ ಹಿಂದೆ ನಾನು ತಿಂಗಳಿಗೆ 12 ಸಾವಿರ ರೂ. ವರೆಗ ಸಂಪಾದಿಸುತ್ತಿದ್ದೆ. ಈಗ ನಾನು 5-6 ಸಾವಿರ ರೂ.ನಲ್ಲೇ ಜೀವನ ಸಾಗಿಸಬೇಕಾಗಿದೆ ಹಾಗೂ ನಾನು ಸಾಲದಲ್ಲಿದ್ದೇನೆ” ಎಂದು ಸ್ಥಳೀಯ ಮರದ ಕೆತ್ತನೆಯ ಕುಶಲಕರ್ಮಿ ಅಹ್ಮದ್ ಹೇಳುತ್ತಾರೆ. ಶಹರಣ್‌ಪುರಲ್ಲಿ ಕುಶಲಕರ್ಮಿಗಳು, ಕಾರ್ಮಿಕರು ಹಾಗೂ ಪೂರೈಕೆದಾರರು ಸೇರಿದಂತೆ ಕನಿಷ್ಠ 2 ಲಕ್ಷ ಮಂದಿ ಮರದ ಕೆತ್ತನೆಯ ಘಟಕಗಳಲ್ಲಿ ದುಡಿಯುತ್ತಿದ್ದಾರೆ.

 ಇದೀಗ ಮರದ ಕೆತ್ತನೆಯ ಉತ್ಪನ್ನಗಳ ಬೇಡಿಕೆಯಲ್ಲಿ ಭಾರೀ ಕುಸಿತವುಂಟಾಗಿರುವುದು ಇವರ ಉದ್ಯೋಗಗಳಿಗೆ ಕುತ್ತು ತಂದಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ನಮ್ಮ ಘಟಕಗಳಲ್ಲಿ ಕೆಲವೇ ಕಾರ್ಮಿಕರು ಸಾಕಾಗುತ್ತದೆ. ‘‘ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜೀವನ ತುಂಬಾ ಕಷ್ಟಕರವಾಗಲಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ನನಗೆ ವಿದ್ಯುತ್ ಬಿಲ್ ಕೂಡಾ ಪಾವತಿಸಬೇಕಾಗಿದ್ದು, ಸರಕಾರದಿಂದ ಯಾವುದೇ ವಿನಾಯಿತಿ ಸಿಕ್ಕಿಲ್ಲ’’ ಎಂದು ಅಹ್ಮದ್ ಅವರು ಅಳಲು ತೋಡಿಕೊಳ್ಳುತ್ತಾರೆ.

ಘಟಕವು ಪುನಾರಂಭಗೊಂಡ ಬಳಿಕ ತಾನು ಕಾರ್ಮಿಕರು ಹಾಗೂ ಕುಶಲಕರ್ಮಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದಾಗಿ ರಫ್ತು ಘಟಕದ ಮಾಲಕ ಮುಹಮ್ಮದ್ ಶಹೀದ್ ತಿಳಿಸಿದ್ದಾರೆ.

‘‘ ಈ ಹಿಂದೆ ನಾವು ದಿನದ 24 ತಾಸುಗಳ ಕಾಲವೂ ಯೂನಿಟ್ ‌ನಲ್ಲಿರುತ್ತಿದ್ದೆವು. ಆದರೆ ಇದು ನಾನು ಎಂಟು ತಾಸುಗಳನ್ನು ಕಳೆಯುವುದು ಕೂಡಾ ಕಡಿಮೆ. ಯಾಕೆಂದರೆ ಈಗ ಹೊಸ ಆರ್ಡರ್ ‌ಗಳು ಬರುವುದು ತುಂಬಾ ಕಡಿಮೆಯಾಗಿದೆ. ನನಗೆ ಬಂದಿದ್ದ ಹಳೆಯ ಆರ್ಡರ್‌ ಗಳ ಪೈಕಿ ಅರ್ಧದಷ್ಟನ್ನು ರದ್ದುಪಡಿಸಲಾಗಿದೆ. ಹೀಗಾಗಿ ನನಗೆ ಈಗ ಕೇವಲ ಶೇ.30-40ರಷ್ಟು ಕಾರ್ಮಿಕರನ್ನು ಮಾತ್ರ ಕೆಲಸದಲ್ಲಿ ಉಳಿಸಿಕೊಳ್ಳಲು ಸಾಧ್ಯವಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಈ ಕೈಗಾರಿಕೆ ಉಳಿದುಕೊಳ್ಳಲಾರದು” ಎಂದು ಶಾಹೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News