ಜಮ್ಮು ಕಾಶ್ಮೀರ ಡಿಜಿಪಿಯಿಂದ ಪ್ರಾಣ ಬೆದರಿಕೆ: ಐಪಿಎಸ್ ಅಧಿಕಾರಿಯ ಆರೋಪ

Update: 2020-06-26 14:52 GMT
ಐಪಿಎಸ್ ಅಧಿಕಾರಿ ಬಸಂತ್ ಕುಮಾರ್ ರಥ್ 

ಹೊಸದಿಲ್ಲಿ,ಜೂ.25: ಹಿರಿಯ ಐಪಿಎಸ್ ಅಧಿಕಾರಿ ಬಸಂತ್ ಕುಮಾರ್ ರಥ್ ಅವರು ತನ್ನ ಮೇಲಾಧಿಕಾರಿ ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಗ್ ಸಿಂಗ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

  ದಿಲ್‌ಬಾಗ್ ಸಿಂಗ್ ಅವರು ತನ್ನ ಸುರಕ್ಷತೆ, ಪ್ರತಿಷ್ಠೆ, ಪ್ರಾಣ ಹಾಗೂ ಸ್ವಾತಂತ್ರ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದಾರೆಂದು ಅವರು ಆರೋಪಿಸಿದ್ದಾರೆ. ರಥ್ ಅವರು ಪ್ರಸಕ್ತ ಜಮ್ಮುಕಾಶ್ಮೀರದ ಗೃಹರಕ್ಷಕದಳದ ಪೊಲೀಸ್ ಮಹಾನಿರೀಕ್ಷಕರಾಗಿ ನಿಯೋಜಿತರಾಗಿದ್ದಾರೆ.

 ಜಮ್ಮುವಿನ ಗಾಂಧಿ ನಗರ ಪೊಲೀಸ್ ಠಾಣೆಗೆ ರಥ್ ಅವರು ಈ ಬಗ್ಗೆ ಲಿಖಿತ ದೂರು ನೀಡಿದ್ದಾರೆ. ಒಂದು ವೇಳೆ ತನಗೆ ಅಹಿತಕರವಾದುದ್ದೇನಾದರೂ ನಡೆದಲ್ಲಿ, ತಾನು ನೀಡಿರುವ ಈ ದೂರನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ದೂರಿನ ಒಂದು ಪ್ರತಿಯನ್ನು ಅವರು ಡಿಜಿಪಿ ದಿಲ್‌ಬಾಗ್ ಸಿಂಗ್ ಅವರಿಗೂ ಕಳುಹಿಸಿದ್ದಾರೆ.

   ರಥ್ ಹಾಗೂ ದಿಲ್‌ಬಾಗ್ ಸಿಂಗ್ ನಡುವೆ ಜೂನ್ 12ರಂದು ಟ್ವಿಟರ್ ಸಮರ ಹೊಸದಾಗಿ ಆರಂಭಗೊಂಡಿತ್ತು. ದಿಲ್‌ಭಾಗ್ ಸಿಂಗ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು, ಜಮ್ಮುಕಾಶ್ಮೀರದ ಬಡವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ರಥ್ ಉಚಿತವಾಗಿ ವಿತರಿಸಲು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ್ದರು.

 ಇದೇ ಸಂದರ್ಭವನ್ನು ಬಳಸಿಕೊಂಡು, ಪೊಲೀಸ್ ಮಹಾನಿರ್ದೇಶಕ ದಿಲ್‌ಭಾಗ್ ಸಿಂಗ್ ಅವರನ್ನುದ್ದೇಶಿಸಿ ವ್ಯಂಗ್ಯೋಕ್ತಿಯ ಟ್ವೀಟ್ ಮಾಡಿದ್ದರು.

  ‘‘ ಹೈ ದಿಲ್‌ಭಾಗ್‌ ಸಿಂಗ್, ನಿನ್ನನ್ನು ನಾನು ದಿಲ್ಲೂ ಎಂದು ಕರೆಯಲೇ?. ಸರೋರ್‌ ನ ದಂತವೈದ್ಯಕೀಯ ಕಾಲೇಜು ಸಮೀಪ 50 ಕಾಲುವೆಗಳ ಜಮೀನಿನ ಒಡೆತನ ಹೊಂದಿರುವುದು ನೀವಲ್ಲವೇ?. ಆ ಜಮೀನು ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿದೆಯೇ ಎಂದು ರಥ್ ಟ್ವೀಟಿಸಿದ್ದರು.

  ಇದಕ್ಕೆ ಕಟುವಾಗಿ ಟ್ವಿಟ್ಟರ್‌ನಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದ ದಿಲ್‌ಭಾಗ್ ಸಿಂಗ್ ಅವರು ‘ಐಜಿ ಹುದ್ದೆಯವರೆಗೆ ಭಡ್ತಿ ಪಡೆದು, ಆನಂತರ ಯಾವುದೇ ಕೆಲಸವಿಲ್ಲದೆ ಮೂಲೆಗುಂಪಾದ ಈ ಐಪಿಎಸ್ ಅಧಿಕಾರಿಗೆ ನಾಚಿಕೆಯಾಗಬೇಕು. ಪ್ರತಿ ಸಲವೂ ಅವರು ತಾನೊಬ್ಬ ವಿದೂಷಕ ಹಾಗೂ ನಿರುಪಯುಕ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ. ತನ್ನ ಅಥವಾ ತನ್ನ ಕುಟುಂಬದ ಹೆಸರಿನಲ್ಲಿ ಒಂದೇ ಒಂದು ಪೈಸೆ ಬೆಲೆಬಾಳುವ ಒಂದು ಇಂಚು ಜಾಗ ಅಥವಾ ಆಸ್ತಿಯಿದೆಯೆಂಬುದನ್ನು ಆತ ಸಾಬೀತುಪಡಿಸಿ ತೋರಿಸಲಿ’ ಎಂದು ಸಿಂಗ್ ಸವಾಲೆಸೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News