ಖಾಸಗಿ ಶಾಲೆಗಳು ಜೂ.30ರೊಳಗೆ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಪ್ರವೇಶ ರದ್ದುಗೊಳಿಸುವಂತಿಲ್ಲ

Update: 2020-06-27 13:48 GMT

ಹೊಸದಿಲ್ಲಿ,ಜೂ.27: ತಮ್ಮ ಶುಲ್ಕಗಳನ್ನು ಜೂ.30ರೊಳಗೆ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳ ಪ್ರವೇಶವನ್ನು ಖಾಸಗಿ ಶಾಲೆಗಳು ರದ್ದುಗೊಳಿಸದಂತೆ ನೋಡಿಕೊಳ್ಳುವಂತೆ ಗುಜರಾತ್ ಉಚ್ಚ ನ್ಯಾಯಾಲಯವು ಗುಜರಾತ ಸರಕಾರಕ್ಕೆ ಸೂಚಿಸಿದೆ.

 ಶಾಲಾ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ತರಗತಿಗಳನ್ನು ನಿಯಂತ್ರಿಸುವಂತೆ ಮತ್ತು ಎಳೆಯ ಮಕ್ಕಳಿಗೆ ವರ್ಚುವಲ್ ತರಗತಿಗಳನ್ನು ನಡೆಸುವ ಶಾಲೆಗಳ ಕ್ರಮದಿಂದ ಅವರ ಆರೋಗ್ಯಕ್ಕೆ ತೊಂದರೆಯಾಗುತ್ತದೆಯೇ ಎನ್ನುವುದನ್ನು ಪರಿಶೀಲಿಸುವಂತೆಯೂ ನ್ಯಾಯಾಲಯವು ಸರಕಾರಕ್ಕೆ ನಿರ್ದೇಶ ನೀಡಿದೆ.

 ಎಪ್ರಿಲ್‌ನಿಂದ ಜೂನ್‌ವರೆಗೆ ಅಥವಾ ಶಾಲೆಗಳು ಭೌತಿಕವಾಗಿ ಆರಂಭಗೊಳ್ಳುವವರೆಗೆ ಟ್ಯೂಷನ್ ಫೀ ಹೊರತುಪಡಿಸಿ ಬೇರೆ ಯಾವುದೇ ಶುಲ್ಕಗಳನ್ನು ವಸೂಲು ಮಾಡದಂತೆ ಶಾಲೆಗಳನ್ನು ನಿರ್ಬಂಧಿಸುವಂತೆ ಕೋರಿ ಅಖಿಲ ಗುಜರಾತ ವಾಲಿ ಮಂಡಲ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಈ ಆದೇಶವು ಹೊರಬಿದ್ದಿದೆ. ಶಾಲೆಗಳು ಟ್ಯೂಷನ್ ಫೀ ಹೆಚ್ಚಿಸಬಾರದು ಮತ್ತು ಕೋವಿಡ್‌ನಿಂದಾಗಿ ಉದ್ಯಮದಲ್ಲಿ ನಷ್ಟ ಅಥವಾ ಉದ್ಯೋಗ ನಷ್ಟದಿಂದಾಗಿ ವಿದ್ಯಾರ್ಥಿಗಳ ಪೋಷಕರಿಗೆ ಶುಲ್ಕಗಳನ್ನು ಪಾವತಿಸಲು ಸಾಧ್ಯವಾಗದಿದ್ದರೆ ಅಂತಹ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾತಿಯನ್ನು ನಿರಾಕರಿಸಬಾರದು ಎಂದೂ ಅರ್ಜಿದಾರರು ಕೋರಿದ್ದರು.

 ಸರಕಾರದ ಉತ್ತರದೊಂದಿಗೆ ಮರಳುವಂತೆ ಅಡ್ವೋಕೇಟ್ ಜನರಲ್ ಕಮಲ ತ್ರಿವೇದಿ ಅವರಿಗೆ ತಿಳಿಸಿದ ನ್ಯಾಯಾಲಯವು,‘ಖಾಸಗಿ ಶಾಲೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಸರಕಾರವು ಬಯಸದಿರಬಹುದು ಎನ್ನುವುದು ನಮಗೆ ಗೊತ್ತಿದೆ. ಆದರೆ ಪ್ರಚಲಿತ ಸ್ಥಿತಿಯ ಹಿನ್ನೆಲೆಯಲ್ಲಿ ಈ ಅರ್ಜಿಯಲ್ಲಿ ವ್ಯಕ್ತಪಡಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಖಾಸಗಿ ಶಾಲೆಗಳೊಂದಿಗೆ ಚರ್ಚಿಸಿ ಏನಾದರೂ ಪರಿಹಾರವನ್ನು ಕಂಡುಕೊಳ್ಳುವಂತೆ ನಾವು ಸರಕಾರವನ್ನು ಕೋರುತ್ತೇವೆ ’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News